ಯಾದಗಿರಿ: ರಾಜ್ಯದಲ್ಲಿ ಇನ್ನು ಕಾಂಗ್ರೆಸ್ ಖಾಯಂ ಆಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಭವಿಷ್ಯ ನುಡಿದರು. ಯಾದಗಿರಿಯಲ್ಲಿ ಆಯೋಜಿಸಿದ್ದ ಜನ ಸೇವಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಒಂದು ಕುಟುಂಬದ ಪಕ್ಷವಾಗಿದೆ. ರಾಷ್ಟ್ರಾಧ್ಯಕ್ಷರಾಗಲು ರಾಹುಲ್ ಇಲ್ಲವೇ ಸೋನಿಯಾ ಗಾಂಧಿ ಬಿಟ್ಟು ಬೇರೆ ಅಭ್ಯರ್ಥಿಗಳೇ ಇಲ್ಲ. ಕಾಂಗ್ರೆಸ್‌ನಲ್ಲಿ ಸಿಎಂ ಆಗುವ ವಿಚಾರಕ್ಕೆ ಈಗಲೇ ಡಿ.ಕೆ.ಶಿವಕುಮಾರ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರ ಮದ್ಯೆ ಕುಸ್ತಿ ಆರಂಭವಾಗಿದೆ.ಈ ಗುದ್ದಾಟದಿಂದಲೇ ಕಾಂಗ್ರೆಸ್ ಅಧೋಗತಿಗೆ ತರಲುಪಲಿದೆ ಎಂದರು.
ಕಲಬುರಗಿಯಲ್ಲಿ ಬಾಬುರಾವ್ ಚಿಂಚನಸೂರ, ಮಾಲಿಕಯ್ಯ ಗುತ್ತೇದಾರ ಹಾಗೂ ಡಾ|ಜಾಧವ ಸೇರಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮನೆಗೆ ಕಳಿಸುವ ಕೆಲಸ
ಮಾಡಿದ್ದಾರೆ. ಬರುವ ದಿನಗಳಲ್ಲಿ ಕಾಂಗ್ರೆಸ್‌ನವರು ಮನೆ ಮಠ ಕಳೆದುಕೊಂಡು ಎಲ್ಲಿ ಇರುತ್ತಾರೋ ಗೊತ್ತಿಲ್ಲ. ಇನ್ನು ಕಾಂಗ್ರೆಸ್ ಉದ್ದಾರವಾಗಲ್ಲ ಎಂದು ಎಂದು ವ್ಯಂಗ್ಯವಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಯಾದಗಿರಿ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಪಾರ ಕೊಡುಗೆ ನೀಡಿದ್ದಾರೆ. ಜಿಲ್ಲೆಯಲ್ಲಿ ವಿಕಾಸದ ಪರ್ವ ಆರಂಭವಾಗಿದೆ ಎಂದರು. ರಾಮಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬರು ಸಹಕಾರ ನೀಡಲು ಕರೆ ನೀಡಿದ ಅವರು, ಗೋಮಾತೆ ನಮ್ಮ ಮಾತೆ ರಾಜ್ಯದಲ್ಲಿ ಗೋಪೂಜೆಯಾಗಬೇಕು. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದ್ದು 7 ವರ್ಷ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಗೋಹಂತಕರಿಗೆ ವೇದಿಕೆ ಮೂಲಕವೇ ಎಚ್ಚರಿಕೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ್, ಸಂಸದ ಡಾ| ಉಮೇಶ ಜಾಧವ್, ಬಿಜೆಪಿ ಯುವ ರಾಜ್ಯಾಧ್ಯಕ್ಷ ಡಾ| ಸಂದೀಪ ಕುಮಾರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಮಾಜಿ ಸಚಿವರು, ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ, ಈಶಾನ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಶಿಕಲಾ ಟೆಂಗಳಿ, ಭೀಮರಾಯನಗುಡಿ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಚಂಡರಕಿ, ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ್ ಸೇರಿದಂತೆ ಹಲವರು ಇದ್ದರು.