ಪುತ್ತೂರು: ರೈಲ್ವೇ ಮೇಲ್ಸೇತುವೆ ವಿಷಯದಲ್ಲಿ ಕಾಂಗ್ರೆಸ್‌ನವರು ಕೇಂದ್ರ ಸರಕಾರ, ಸಂಸದರ ಮೇಲೆ ಪ್ರತಿಭಟನೆ ನಡೆಸಿ ಗೂಬೆ ಕೂರಿಸುವುದು ಸರಿಯಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಗುರುವಾರ ಪುತ್ತೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, 70 ವರ್ಷಗಳಲ್ಲಿ ರಾಜ್ಯ, ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರದಿಂದ ದೇಶ, ದಕ್ಷಿಣ ಕನ್ನಡ ಜಿಲ್ಲೆಗೆ ಏನೂ ಕೊಡುಗೆಯಿಲ್ಲ ಎಂದರು.
ರೈಲ್ವೇ ಇಲಾಖೆಗೆ ಅದರದ್ದೇ ಆದ ನೀತಿ ನಿಯಮಗಳಿವೆ. ಕಾಂಗ್ರೆಸ್‌ನವರಿಗೆ ರೈಲ್ವೇಯ ನೀತಿ ನಿಯಮಗಳೇ ಗೊತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬಂದರೆ ಅದನ್ನು ನಾವು ಮಾಡಿ ತೋರಿಸುತ್ತೇವೆ ಎನ್ನುವುದಕ್ಕೆ ಅರ್ಥವೇ ಇಲ್ಲ. ಮಂಗಳೂರಿನಲ್ಲಿ ಈಗಾಗಲೇ ಕೇಂದ್ರ ಸರಕಾರದಿಂದ ವತಿಯಿಂದ ಐದು ಫ್ಲೆ$ç ಓವರ್‌ಗಳನ್ನು ನಿರ್ಮಿಸಲಾಗಿದೆ ಎಂದರು.
ಕೇಂದ್ರ ಸರಕಾರದ 14ನೇ ಹಣಕಾಸು ಯೋಜನೆಯ ಅಡಿ ಪುತ್ತೂರು ನಗರಕ್ಕೆ 22 ಕೋಟಿ ರೂ. ನೀಡಿದ್ದೇವೆ. ರಾಜ್ಯದ ಸಮ್ಮಿಶ್ರ ಸರಕಾರದಿಂದ ಪುತ್ತೂರಿಗೆ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಅವರು, ಈಗಾಗಲೇ ಪುತ್ತೂರು ರೈಲ್ವೇ ನಿಲ್ದಾಣ ಆದರ್ಶ ರೈಲ್ವೇ ನಿಲ್ದಾಣವಾಗಿ ನಿರ್ಮಾಣಗೊಂಡಿದೆ. ಮತ್ತಷ್ಟು ಅನುದಾನ ಕೇಂದ್ರ ಸರಕಾರದಿಂದ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಬಂದಿದೆ.
ಫೆ. 21ರಂದು ಪುತ್ತೂರಿನಲ್ಲಿ ವಿವಿಧ ಜನೋಪಯೋಗಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಗುತ್ತದೆ. ಅಂದು ಮಂಗಳೂರು -ಬೆಂಗಳೂರು ನೂತನ ಸೂಪರ್ ಸ್ಪೀಡ್ ರೈಲು ಓಡಾಟಕ್ಕೂ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.