ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷವು ಅಧಿಕಾರಕ್ಕಾಗಿ ದೇಶವನ್ನು ಒಡೆಯಲು ಸಹ ಹೇಸುವುದಿಲ್ಲ. ಇಂಡಿ ಒಕ್ಕೂಟದ ಹೇಳಿಕೆಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಸ್ಯಾಮ್ ಪಿತ್ರೊಡಾ ನೀಡಿದ್ದಾರೆ ಎನ್ನಲಾದ ಜನಾಂಗಿ ದ್ವೇಷದ ಹೇಳಿಕೆ ಕುರಿತು ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಹಾಗೂ ಐಎನ್ ಡಿಐಎ ಒಕ್ಕೂಟಕ್ಕೆ ದೇಶದ ಒಗ್ಗಟ್ಟಾಗಿರುವುದು ಇಷ್ಟವಿಲ್ಲ ಎಂದು ಹರಿಹಾಯ್ದರು.
ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ ದಕ್ಷಿಣ ಭಾರತ ಬೇರೆಯಾಗಬೇಕು, ಶ್ಯಾಮ್ ಪಿತ್ರೋಡಾ ಅವರು ಮನುಷ್ಯನ ಬಣ್ಣದ ಮೇಲೆ ಹೇಳಿಕೆ ನೀಡುತ್ತಿದ್ದಾರೆ. ದ್ರಾವಿಡ ಚಳುವಳಿಯಿಂದಾಗಿ ನಾವು ದ್ರಾವಿಡರು ಬೇರೆ ಎನ್ನುವ ಹೇಳಿಕೆ ನೀಡುತ್ತಿದ್ದಾರೆ. ಜನಾಂಗಿಯ ಆಧಾರದ ಮೇಲೆ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಿದ್ದರೆ ದೇಶದ ಒಡೆಯುವುದಕ್ಕೂ ಹೇಸುವುದಿಲ್ಲ ಎಂಬುವುದು ಈ ಘಟನೆಗಳಿಂದ ಸ್ಪಷ್ಟವಾಗುತ್ತದೆ ಎಂದರು.
ರಾಜಕಾರಣಕ್ಕಾಗಿ ಕಾಂಗ್ರೆಸ್ ಸರಕಾರ ಮಹಿಳಾ ಕುಲಕ್ಕೆ ಅವಮಾನ ಮಾಡುವ ಕೆಲಸ ಮಾಡುತ್ತಿದೆ. ಸಚಿವ ಕೃಷ್ಣ ಬೈರೇಗೌಡ ಅವರು ಇದೊಂದು ದೊಡ್ಡ ಲೈಂಗಿಕ ಹಗರಣ ಎಂದಿದ್ದಾರೆ. ಹೀಗಿರುವಾಗ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐ ವಹಿಸಬೇಕಲ್ಲವೇ. ಇದು ಆರೇಳು ವರ್ಷಗಳಿಂದ ನಡೆದಿದೆ. ಈ ಬಗ್ಗೆ ರಾಜ್ಯ ಸರಕಾರಕ್ಕೆ ಮುಂಚಿತವಾಗಿ ಗೊತ್ತಿತ್ತು. ಆದರೆ ಚುನಾವಣೆಗೂ ಎರಡು ಮೂರು ದಿನ ಬಾಕಿ ಇರುವಾಗಲೇ ಉದ್ದೇಶಪೂರ್ವಕವಾಗಿ ವಿಡಿಯೋಗಳನ್ನು ಹರಿಬಿಟ್ಟಿದ್ದಾರೆ. ತಮ್ಮ ರಾಜಕೀಯಕ್ಕಾಗಿ ಮಹಿಳೆಯರ ಮಾನ ತೆಗೆಯುತ್ತಿದ್ದಾರೆ. ಈ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ರಾಜೀನಾಮೆ ನೀಡುವ ಬದಲು ಸಿಬಿಐ ಗೆ ವಹಿಸಬಹುದಲ್ಲ ಎಂದರು.