ಬಳ್ಳಾರಿ: ಶಾಸಕ ಶ್ರೀರಾಮುಲು ಉದ್ವೇಗದಿಂದ ಮಾತನಾಡುತ್ತಿರುವುದನ್ನು ಗಮನಿಸಿದರೆ ಅವರು ಸಂಪೂರ್ಣ ಹತಾಶರಾಗಿದ್ದಾರೆ ಎಂಬುದು ತಿಳಿಯುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀರಾಮುಲು ಹಾಗೂ ನನ್ನ ನಡುವೆ ಯಾವ ವೈಮನಸ್ಸೂ ಇಲ್ಲ ಎಂದರು.
ಕಾಂಗ್ರೆಸ್ ಘಟಬಂಧನ್ ಒಡೆದಿದೆ ಅಂತ ಯಾರು ಹೇಳಿದರು ಎಂದು ಪ್ರಶ್ನಿಸಿದ ಸಚಿವರು,ಸಮಯ ಬಂದಾಗ ಎಲ್ಲರೂ ಒಂದಾಗುತ್ತೇವೆ.ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಸಿಪಿಎಂ, ಜೆಡಿಎಸ್, ರೈತ ಸಂಘಗಳ ಮುಖಂಡರು ಸಹ ನಮಗೆ ಸಹಕಾರ ನೀಡುತ್ತಿದ್ದಾರೆ ಎಂದರು.
ಅಭಿವೃದ್ಧಿ ವಿಚಾರದಲ್ಲಿ ಶ್ರೀರಾಮುಲು ಸವಾಲಿಗೆ ಉತ್ತರಿಸಲು ನಾನು ಈಗಲೂ ಬದ್ಧ. ಬೇಕಾದ್ರೆ ಅವರೇ ದಿನ ನಿಗದಿ ಮಾಡಿ ವೇದಿಕೆ ಸಿದ್ಧಪಡಿಸಲಿ. 24 ಗಂಟೆ ಮುಂಚೆ ತಿಳಿಸಿದರೆ ಸಾಕು. ನಾನು ಚರ್ಚೆಗೆ ಬರಲು ಸಿದ್ಧ ಎಂದ ಡಿಕೆಶಿ, ತಮ್ಮದೇ ಶೈಲಿಯಲ್ಲಿ ಶ್ರೀರಾಮುಲು ಅಣ್ಣ, ಟೆನÒನ್ ಮಾಡ್ಕೊಬೇಡ. ಚುನಾವಣೆ ಈಜಿಯಾಗಿ ಮಾಡೋಣ ಎಂದರು.
ಕಾಫಿ ಕುಡಿದು, ಜೀನ್ಸ್ ಪ್ಯಾಂಟ್ ಖರೀದಿಸಿದ ಡಿಕೆಶಿ: ಮಿಲ್ಲರ್ ಪೇಟೆ ಮುಖ್ಯರಸ್ತೆಯಲ್ಲಿನ ಕಿರಾಣಿ ಅಂಗಡಿಯೊಂದರಲ್ಲಿ ಕಾಫಿ ಕುಡಿಯಲೆಂದು ತೆರಳಿದ ಸಚಿವರು, ಹೋಟೆಲ್ ನವ ಕಾಫಿ ಕೈಯಲ್ಲಿಡುತ್ತಿದ್ದಂತೆಯೇ ಇದರ ಬೆಲೆ ಎಷ್ಟೆಂದರು. ಐದು ರೂಪಾಯಿ ಎನ್ನುತ್ತಿದ್ದಂತೆ ಬಡವರ ಕಾಫಿ ಇದು. ಇಂದಿರಾಗಾಂಧಿ ಕ್ಯಾಂಟೀನ್ ಥರ ಎಂದರು. ಚೆನ್ನಾಗಿದೆಯಾ ಟೀ ಎಂದು ಮಾಧ್ಯಮದವರು ಕೇಳಿದಾಗ, ಟೀ ಅಲ್ಲ. ಕಾಫಿ ಇದು. ನಾನು ಕಾಫಿ ಮಾತ್ರ ಕುಡಿಯೋದು ಎಂದರು. ಬಳಿಕ, ಅಲ್ಲೇ ಇದ್ದ ಜೀನ್ಸ್ ಬಟ್ಟೆ ತಯಾರಿಕಾ ಘಟಕಕ್ಕೆ ತೆರಳಿ,ಪ್ಯಾಂಟ್ ಧರಿಸಿ ಟ್ರಯಲ್ ನೋಡಿದರು. ಅದೇ ಮಾದರಿಯ ಮೂರ್‍ನಾಲ್ಕು ಜೀನ್ಸ್ ಪ್ಯಾಂಟ್ ಹೊಲಿದು ಕೊಡು ಎಂದು,ಮುಂಗಡವಾಗಿ 5 ಸಾವಿರ ರೂ. ಹಣವನ್ನು ಮಾಲೀಕರಿಗೆ ನೀಡಿದರು.