ಬೆಂಗಳೂರು: ಮುಂದಿನ ಮುಖ್ಯಮಂತ್ರಿ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ಕೊಡುವ ಅಧಿಕಾರ ಶಾಸಕರಿಗಿಲ್ಲ. ಪಕ್ಷದಲ್ಲಿ ಆಂತರಿಕವಾಗಿ ಚರ್ಚೆ ಮಾಡಿ. ಆದರೆ ಮುಂದಿನ ಸಿಎಂ ಯಾರು ಎಂದು ಹೇಳಲು ನಿಮಗೆ ಅಧಿಕಾರ ಇಲ್ಲ ಎಂದು ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಬೇಕಾದರೆ ಕೆಪಿಸಿಸಿ ಕಚೇರಿಗೆ ಹೋಗಿ ಅಧ್ಯಕ್ಷರಿಗೆ ಹೇಳಿ. ಎಐಸಿಸಿಗೆ ಹೋಗಿ ಅಧ್ಯಕ್ಷರಿಗೆ ತಿಳಿಸಿ. ಆದರೆ ಪಕ್ಷಕ್ಕೆ ಬಂದ ಮೇಲೆ ಪಕ್ಷದ ಸಂಪ್ರದಾಯವನ್ನು ನಾವು ಅನುಸರಿಸಿಬೇಕು ಎಂದರು.
ಇದನ್ನೂ ಓದಿ:ಸಚಿವ ಸಂಪುಟ ವಿಸ್ತರಣೆ ಪ್ರಧಾನ ಮಂತ್ರಿಯವರ ಪರಮಾಧಿಕಾರ: ಪ್ರಹ್ಲಾದ ಜೋಶಿ
ಇಂದು ಶಿಸ್ತು ಸಮಿತಿ ಸಭೆ ನಡೆಸಿದ್ದೇವೆ. ಇತ್ತೀಚೆಗೆ ಕೆಲ ಶಾಸಕರು ನೀಡಿರುವ ಹೇಳಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ಮುಂದಿನ ಸಿಎಂ ಹೇಳಿಕೆಯಿಂದ ಶಿಸ್ತು ಉಲ್ಲಂಘನೆಯಾಗಿದೆ. ಇದರ ಬಗ್ಗೆ ಸುಧೀರ್ಘ ಚರ್ಚೆಯಾಗಿದೆ. ಶಾಸಕರು ಏನು ಹೇಳಿಕೆ ಕೊಟ್ಟಿರುವುದರ ಬಗ್ಗೆ ಮಾಹಿತಿ ಇನ್ನೂ ಬೇಕಿದೆ. ದಾಖಲೆ ಕಲೆ ಹಾಕಬೇಕಿದೆ. ಹೀಗಾಗಿ ಮುಂದಿನ ವಾರಕ್ಕೆ ಸಭೆ ಮುಂದೂಡಿಕೆಯಾಗಿದೆ ಎಂದರು.
ಮುಂದಿನ ಸಿಎಂ ಹೇಳಿಕೆಯು ಕಾಂಗ್ರೆಸ್ ಪಕ್ಷಕ್ಕೆ ಮಾರಕ ಶಿಸ್ತು ಉಲ್ಲಂಘನೆ. ನಾವು ಸುಮೋಟು ಕೇಸ್ ತೆಗೆದುಕೊಂಡಿದ್ದೇವೆ. ಉಸ್ತುವಾರಿ ರಂದೀಪ್ ಸುರ್ಜೇವಾಲಾ ಸಹ ಈ ಬಗ್ಗೆ ಮಾತನಾಡಬೇಡಿ ಎಂದು ಹೇಳಿದ್ದರು. ಅವರ ಹೇಳಿಕೆ ಆಧರಿಸಿ ಸುಮೋಟು ಪ್ರಕರಣ ತೆಗೆದು ಕೊಂಡಿದ್ದೇವೆ. ನಮ್ಮ ಬಳಿ ಯಾವುದೇ ದಾಖಲೆ ಇರಲಿಲ್ಲ. ವಿಡಿಯೋ ಕ್ಲಿಪ್ ಇರಲಿಲ್ಲ. ಪೇಪರ್ ಕಟ್ಟಿಂಗ್ಸ್ ಸಹ ಇರಲಿಲ್ಲ. ಈ ಹಿಂದೆ ಆರ್ ಆರ್ ನಗರ ಉಪಚುನಾವಣೆಯಲ್ಲಿ ಕೆಲವರು ಕೊಟ್ಟ ಹೇಳಿಕೆ ಬಗ್ಗೆ ಸಹ ಚರ್ಚೆ ಮಾಡಿದ್ದೇವೆ ಎಂದು ರಹಮಾನ್ ಖಾನ್ ಹೇಳಿದರು.