ಬೆಂಗಳೂರು: ಬುಧವಾರ ವಿಧಾನಸಭೆಯಲ್ಲಿ ಅಂಗೀಕಾರವಾದ ಗೋ ಹತ್ಯೆ ನಿಷೇಧ ಮಸೂದೆಯ ಬಗ್ಗೆ ಅಸಮಾಧಾನವಿದ್ದರೂ ಅದರ ಬಗ್ಗೆ ಬಹಿರಂಗವಾಗಿ ಮಾತನಾಡದಿರಲು ಕಾಂಗ್ರೆಸ್ ತೀರ್ಮಾನಿಸಿದೆ. ಗ್ರಾಮ ಪಂಚಾಯತ್ ಚುನಾವಣೆ ಹಿನ್ನಲೆಯಲ್ಲಿ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಗೋ ಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದರೆ ಗ್ರಾಮ ಪಂಚಾಯತ್ ಚುನಾವಣೆ ವೇಳೆ ಕಾಂಗ್ರೆಸ್ ಗೆ ಡ್ಯಾಮೇಜ್ ಆಗಬಹುದು, ಬಹು ಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗುವ ಕಾರಣ ಪಕ್ಷಕ್ಕೆ ತೊಂದರೆಯಾಗಬಹುದು ಎಂದು ಅಂದಾಜಿಸಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಬಿಜೆಪಿ ಪಕ್ಷದ ಉದ್ದೇಶವೂ ಇದೇ ಆಗಿರುವ ಕಾರಣ, ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟುವಾಗಿ ವಿರೋಧಿಸುವುದು ಬೇಡ ಎಂದು ಕಾಂಗ್ರೆಸ್ ನಾಯಕರು ತೀರ್ಮಾನ ಮಾಡಿದ್ದಾರೆ.
ಇದನ್ನೂ ಓದಿ:ಸಿದ್ಧರಾಮಯ್ಯನವರೇ ಸೆಗಣಿ ಎತ್ತುವುದರಿಂದ ಏನೂ ಆಗುವುದಿಲ್ಲ, ಗೋವಿನ ಆರಾಧನೆ ಮಾಡಬೇಕು: ನಳಿನ್
ಪಾದಯಾತ್ರೆ
ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ವಿಧಾನಸೌಧದಿಂದ ಪಾದಯಾತ್ರೆ ಆರಂಭಿಸಿದ್ದು ಫ್ರೀಡಂ ಪಾರ್ಕ್ ತೆರಳಿ ರೈತರ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಸಿದ್ದರಾಮಯ್ಯ, ದಿನೇಶ್ ಗುಂಡುರಾವ್, ಈಶ್ವರ ಖಂಡ್ರೆ, ಯು.ಟಿ ಖಾದರ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.