ಬೀದರ: ತೈಲ ಬೆಲೆ ಏರಿಕೆ ವಿರೋಧಿ ಸಿ ಬುಧವಾರ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಸೈಕಲ್ ಜಾಥಾ ನಡೆಸಲಾಯಿತು. ನಗರದ ನೌಬಾದ್‌ನಿಂದ ಆರಂಭವಾದ ಸೈಕಲ್ ಜಾಥಾ ಜಿಲ್ಲಾಧಿ ಕಾರಿ ಕಚೇರಿವರೆಗೆ ನಡೆಯಿತು. ತೈಲ ಬೆಲೆ ಏರಿಕೆ ಮಾಡಿರುವ ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವರಾದ ಬೀದರ ಉಸ್ತುವಾರಿ ಡಾ| ಶರಣಪ್ರಕಾಶ ಪಾಟೀಲ, ಎಐಸಿಸಿ ನಿರ್ದೇಶನದ ಮೇರೆಗೆ ಡೀಸೆಲ್-ಪೆಟ್ರೋಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಸಿದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಕಚ್ಚಾ ತೈಲ ಬೆಲೆ ಕಮ್ಮಿಯಾದರೂ, ಅದರ ಲಾಭ ಜನರಿಗೆ ತಲುಪಿಸದೇ ಸರ್ಕಾರ ಮೋಸ ಮಾಡುತ್ತಿದೆ ಎಂದು ಕಿಡಿಕಾರಿದರು.
35 ರೂ.ಗೆ ತೈಲ ಸಿಕ್ಕರೂ 100 ರೂ.ಗೆ ಜನರಿಗೆ ನೀಡಿ ಸಾರ್ವಜನಿಕರ ಜೇಬಿಗೆ ಕೇಂದ್ರ ಸರ್ಕಾರ ಕತ್ತರಿ ಹಾಕುತ್ತಿದೆ. ಸರ್ಕಾರ ಮನಸ್ಸು ಮಾಡಿದರೆ 60 ರೂ.ನಲ್ಲೇ ಲೀಟರ್ ಡೀಸೆಲ್-ಪೆಟ್ರೋಲ್ ನೀಡಬಹುದು. ಸಾರ್ವಜನಿಕರ ಹಣ ಲೂಟಿ ಮಾಡಿ ಕೇಂದ್ರದ ಬೊಕ್ಕಸ ತುಂಬುತ್ತಿದ್ದಾರೆ.
ಬಿಜೆಪಿಯವರಿಗೆ ಆಡಳಿತ ನಡೆಸಲು ಬರುತ್ತಿಲ್ಲ . ತಪ್ಪು ಆರ್ಥಿಕ ನೀತಿಗಳಿಂದ ಸರಕಾರ ದಿವಾಳಿಯಾಗಿದೆ ಎಂದು ಆರೋಪಿಸಿದ ಶರಣ ಪ್ರಕಾಶ, ತೈಲ ದರ ಕಡಿಮೆ ಮಾಡಿದರೆ ಎಲ್ಲದರ ಬೆಲೆ ಇಳಿಯುತ್ತದೆ ಎಂದು ಹೇಳಿದರು.
ಸೈಕಲ್ ಜಾಥಾದಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಶಾಸಕ ರಹೀಂ ಖಾನ್, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಎಂ.ಎ. ಸಮೀ, ಸಂಜಯ್ ಜಾಗಿರದಾರ್, ಇರ್ಷಾದ್ ಪೈಲ್ವಾನ್, ಅಮತರಾವ್ ಚಿಮಕೋಡೆ ಸೇರಿದಂತೆ ಇತರರಿದ್ದರು.