ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಾಧಿಸಲು ಎರಡೂ ಪಕ್ಷಗಳ ಸಮನ್ವಯ ಸಮಿತಿ ರಚಿಸಿರುವ ಬೆನ್ನಲ್ಲೇ, ಲೋಕಸಭೆ ಚುನಾವಣೆಗೆ ಭರದ ತಯಾರಿ ನಡೆಸಿರುವ ಕಾಂಗ್ರೆಸ್, ಸರ್ಕಾರ ಹಾಗೂ ಪಕ್ಷದಲ್ಲಿನ ನಾಯಕರ ನಡುವಿನ ಗೊಂದಲ ನಿವಾರಣೆಗೆ ಪಕ್ಷದೊಳಗೆ ಸಮನ್ವಯ ಸಮಿತಿ ರಚನೆ ಮಾಡಿದ್ದು, ಮಾಜಿ ಸಚಿವ
ರಾಮಲಿಂಗಾ ರೆಡ್ಡಿ ಅವರಿಗೆ ಸಮಿತಿಯ ನೇತೃತ್ವ ವಹಿಸಲಾಗಿದೆ.
ಲೋಕಸಭೆ ಚುನಾವಣೆಗೆ ಈಗಿನಿಂದಲೇ ವ್ಯವಸ್ಥಿತವಾಗಿ ಸಿದ್ದತೆ ನಡೆಸಿರುವ ಕಾಂಗ್ರೆಸ್ ವಿವಿಧ ಸಮಿತಿಗಳನ್ನೂ ರಚನೆ ಮಾಡಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನಾ) ಹಾಗೂ ಕರ್ನಾಟಕ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದಲ್ಲಿ ನಾಯಕರ ನಡುವೆ ಗುಂಪುಗಾರಿಕೆ, ಪ್ರತಿಷ್ಠೆಗಳು ಹೆಚ್ಚಾಗಿ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಂದ ಕಾಂಗ್ರೆಸ್ ಹೈ ಕಮಾಂಡ್ ಈ ತೀರ್ಮಾನ ಮಾಡಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಪಕ್ಷದಲ್ಲಿ ಏಳು ಬಾರಿ ಶಾಸಕರಾಗಿ ಹಿರಿಯ ನಾಯಕರಾಗಿರುವ ರಾಮಲಿಂಗಾ ರೆಡ್ಡಿ ಅವರನ್ನು ಸಂಪುಟದಿಂದ ಹೊರಗಿಟ್ಟಿದ್ದರಿಂದ ಅವರೂ ಪಕ್ಷದ ರಾಜ್ಯ ನಾಯಕರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ಹೀಗಾಗಿ ಚುನಾವಣೆಯಲ್ಲಿ ಸಕ್ರೀಯವಾಗಿ ಬಳಸಿಕೊಳ್ಳಲು ಅವರನ್ನು ಸಮಾಧಾನ ಪಡಿಸಲು ಈ ಜವಾಬ್ದಾರಿ ವಹಿಸಲಾಗಿದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ. ಇಪ್ಪತ್ತೆಂಟು ಮಂದಿ ಈ ಸಮನ್ವಯ ಸಮಿತಿಯಲ್ಲಿ ಇರಲಿದ್ದು, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ವಿ.ಎಸ್. ಉಗ್ರಪ್ಪ, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಟಿ.ಬಿ. ಜಯಚಂದ್ರ, ವಿ. ಮುನಿಯಪ್ಪ, ರಮಾನಾಥ ರೈ, ಚಲುವರಾಯಸ್ವಾಮಿ, ರೋಷನ್ ಬೇಗ್, ಎಚ್. ಆಂಜನೇಯ, ಮೋಟಮ್ಮ, ಸಿ.ಎಂ.ಇಬ್ರಾಹಿಂ, ಪಿ.ಎಂ. ನರೇಂದ್ರ ಸ್ವಾಮಿ, ವಿನಯಕುಮಾರ್ ಸೊರಕೆ, ತನ್ವೀರ್ ಸೇ, ಡಾ.ಶರಣ ಪ್ರಕಾಶ್ ಪಾಟೀಲ್, ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ರಾಜ್ಯಸಭಾ ಸದಸ್ಯ ಎಂ.ವಿ.ರಾಜೀವ್ ಗೌಡ, ಶಾಸಕಿ ಅಂಜಲಿ ನಿಂಬಾಳ್ಕರ್, ಬಲ್ಕಿಸ್ ಭಾನು, ಮಂಜುಳಾ ನಾಯ್ಡು ಸಮಿತಿ ಸದಸ್ಯರಾಗಿದ್ದಾರೆ.
ಪ್ರಚಾರ ಸಮಿತಿ: ಚುನಾವಣೆಯಲ್ಲಿ ಪ್ರಚಾರ ತಂತ್ರಗಳನ್ನು ಹೆಣೆಯುವುದು ಹಾಗೂ ಸಾಮಗ್ರಿಗಳ ಸಿದ್ದತೆ ಮಾಡುವ ಕುರಿತಂತೆ ಕಾರ್ಯ ನಿರ್ವಹಿಸಲು ಕೇಂದ್ರದ ಮಾಜಿ ಸಚಿವ ಸಿ. ಎಂ. ಇಬ್ರಾಹಿಂ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಚಿವರಾದ ಯು.ಟಿ.ಖಾದರ್, ಪ್ರಿಯಾಂಕ್ ಖರ್ಗೆ, ಎಂ.ಟಿ.ಬಿ.ನಾಗರಾಜ್, ಶಿವಶಂಕರ ರೆಡ್ಡಿ, ಶಿವಾನಂದ ಪಾಟೀಲ್, ಮಾಜಿ ಸಂಸದ ಐ.ಜಿ. ಸನದಿ, ಜಿ.ಸಿ. ಚಂದ್ರಶೇಖರ್, ಐವಾನ್ ಡಿಸೋಜಾ, ವಿ.ಆರ್. ಸುದರ್ಶನ್, ಪ್ರೊ. ಬಿ.ಕೆ.ಚಂದ್ರಶೇಖರ್, ಎಚ್.ಎಂ. ರೇವಣ್ಣ, ಎಲ್. ಹನುಮಂತಯ್ಯ, ಎ.ಎಸ್.ಜಯಸಿಂಹ, ಅಬ್ದುಲ್ ಜಬ್ಟಾರ್, ವಿಜಯ್ ಸಿಂಗ್, ರಿಜ್ವಾನ್ ಅರ್ಷದ್, ಯು.ಬಿ. ವೆಂಟಕೇಶ್, ಮದನ್ ಪಟೇಲ್, ವಾಸಂತಿ ಶಿವಣ್ಣ, ಎಸ್.ಇ. ಸುಧೀಂದ್ರ, ಕಾಂತಾ ನಾಯ್ಕ, ಶಾರದಾ ಗೌಡ, ದಯಾನಂದ್ ಪಾಟೀಲ್, ಪರಸಮಾಲ್ ಜೈನ್, ಸುನಿಲ್ ಹನುಮಣ್ಣನವರ ಸದಸ್ಯರಾಗಿದ್ದಾರೆ.
ಮಾಧ್ಯಮ ಸಮನ್ವಯ ಸಮಿತಿ: ಕೆಪಿಸಿಸಿ ಉಪಾಧ್ಯಕ್ಷ ಡಾ.ಬಿ.ಎಲ್.ಶಂಕರ್ ನೇತೃತ್ವದಲ್ಲಿ 11 ಜನರ ಮಾಧ್ಯಮ ಸಮನ್ವಯ ಸಮಿತಿ ರಚಿಸಲಾಗಿದೆ. ಪ್ರೊ.ಕೆ.ಇ. ರಾಧಾಕೃಷ್ಣ, ಡಾ. ಎಲ್.ಹನುಮಂತಯ್ಯ, ರಿಜ್ವಾನ್ ಅರ್ಷದ್, ಎಂ. ರಾಮಚಂದ್ರಪ್ಪ, ನಟರಾಜ್ ಗೌಡ, ಸದಾನಂದ ಡಂಗನವರ, ಡಾ. ನಾಗಲಕ್ಷ್ಮೀ, ಸವಿತಾ ರಮೇಶ್ ಹಾಗೂ ವಿನಯ್ ರಾಜ್ ಅವರು ಸದಸ್ಯರಾಗಿದ್ದಾರೆ.
ಚುನಾವಣಾ ನಿರ್ವಹಣಾ ಸಮಿತಿ: ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಠೊಡ್, ಎಂ.ನಾರಾಯಣಸ್ವಾಮಿ, ಎಂ.ಎನ್. ಸೂರಜ್ ಹೆಗಡೆ, ಮೆಹರೋಜ್ ಖಾನ್ ಹಾಗೂ ಬಸವರಾಜ್ ಈ ಸಮಿತಿಯಲ್ಲಿದ್ದಾರೆ.
ಪ್ರದೇಶ ಚುನಾವಣಾ ಸಮಿತಿ; ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ಲೋಕಸಭಾ ಚುನಾವಣೆಗೆ ಪ್ರದೇಶ ಚುನಾವಣಾ ಸಮಿತಿ ರಚಿಸಲಾಗಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಸತೀಶ್ ಜಾರಕಿಹೊಳಿ, ಆರ್.ವಿ. ದೇಶಪಾಂಡೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್, ಸಂಸದರಾದ ಎಂ.ವೀರಪ್ಪ ಮೊಯಿಲಿ, ಕೆ.ಎಚ್. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್, ಆಸ್ಕರ್ ಫರ್ನಾಂಡಿಸ್, ಮಾಜಿ ಸಂಸದ ಕೆ. ರೆಹಮಾನ್ ಖಾನ್, ಶಾಸಕರಾದ ಅಮರೇಗೌಡ ಬಯ್ನಾಪುರ್, ಶಾಮನೂರು ಶಿವಶಂಕರಪ್ಪ, ರಾಮಲಿಂಗಾ ರೆಡ್ಡಿ,
ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್, ಎಐಸಿಸಿ ಕಾರ್ಯದರ್ಶಿಗಳಾದ ಎನ್.ಎಸ್. ಬೋಸರಾಜು, ಸಲೀಂ ಅಹಮದ್, ಮಾಜಿ ಸಚಿವೆ ಉಮಾಶ್ರಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯೆ ಜಲಜಾ ನಾಯ್ಕ ಅವರು ಸದಸ್ಯರಾಗಿದ್ದಾರೆ.
ಅಲ್ಲದೇ ರಾಜ್ಯದಿಂದ ನೇಮಕಗೊಂಡಿರುವ ಎಲ್ಲ ಎಐಸಿಸಿ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಪ್ರದೇಶ ಕಾಂಗ್ರೆಸ್ ಮುಂಚೂಣಿ ಘಟಕಗಳ ಅಧ್ಯಕ್ಷರು ಚುನಾವಣಾ ಸಮಿತಿಗೆ ಆಹ್ವಾನಿತ ಸದಸ್ಯರಾಗಿದ್ದಾರೆ.