Advertisement

ವಾಡಿ: ಮಾವನ ಕೊರಳಿಗೆ ಬಿಜೆಪಿ ಶಾಲು…ಆಕ್ರೋಶ ಹೊರಹಾಕಿದ ಸೊಸೆ

08:33 PM May 01, 2023 | Team Udayavani |

ವಾಡಿ: ಮಾವನ (ಪತಿಯ ತಂದೆ) ಕೊರಳಿಗೆ ಬಿಜೆಪಿ ಶಾಲು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ವೈರಲ್ ಮಾಡಿದ ಸ್ವಜಾತಿ ಮುಖಂಡರ ವಿರುದ್ಧ ಸೊಸೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ಚಿತ್ತಾಪುರ ಮತಕ್ಷೇತ್ರದ ವಾಡಿ ಪಟ್ಟಣದಲ್ಲಿ ನಡೆದಿದೆ.

Advertisement

ಸೋಮವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಥಳೀಯ ಸ್ವಜಾತಿ ಬಿಜೆಪಿ ನಾಯಕರ ಒತ್ತಾಯದ ಪಕ್ಷಾಂತರ ಘಟನೆಯನ್ನು ಖಂಡಿಸಿ ಕಿಡಿಕಾರಿದ ಪುರಸಭೆಯ ಮಾಜಿ ಅಧ್ಯಕ್ಷೆ, ಬಂಜಾರಾ ಸಮಾಜದ ನಾಯಕಿ ಮೈನಾಬಾಯಿ ರಾಠೋಡ, ಸ್ಥಳೀಯ ಕೆಲ ನಮ್ಮ ಬಂಜಾರಾ ಸಮಾಜದ ನಾಯಕರು ನನ್ನ ಮಾವ ಸೇವಾ ರಾಠೋಡ ಅವರಿಗೆ ೯೦ ವಯಸ್ಸು. ಸರಿಯಾಗಿ ಕಣ್ಣು ಕಾಣಲ್ಲ. ಕಿವಿಯೂ ಕೇಳಲ್ಲ. ಅವರೀಗ ಅರಳು ಮರಳು ಮಾನಸಿಕತೆ ಹೊಂದಿದ್ದಾರೆ. ಅಲ್ಲದೆ ರೆಸ್ಟ್ ಕ್ಯಾಂಪ್ ತಾಂಡಾದ ಪ್ರಭಾವಿ ಹಿರಿಯ ನಾಯಕರೂ ಆಗಿದ್ದಾರೆ. ಸಮಾಜದ ಸಭೆ ನಡೆಯುತ್ತಿದೆ ಬನ್ನಿ ಎಂದು ಕರೆದುಕೊಂಡು ಹೋಗುವ ಮೂಲಕ ಬಿಜೆಪಿಗರು ಮೋಸದಿಂದ ಅವರ ಕೊರಳಲ್ಲಿ ಕಮಲ ಶಾಲು ಹಾಕಿದ್ದಾರೆ. ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂಬ ಅರ್ಥದಲ್ಲಿ ಭಾವಚಿತ್ರ ಕ್ಲಿಕ್ಕಿಸಿ ವೈರಲ್ ಮಾಡಿದ್ದಾರೆ. ಬಹಳ ತಡವಾಗಿ ಮಾವನವರಿಗೆ ಈ ಎಡವಟ್ಟು ಗಮನಕ್ಕೆ ಬಂದಿದೆ. ಮಾವನವರ ಹಿಡಿತದಲ್ಲಿರುವ ರೆಸ್ಟ್ ಕ್ಯಾಂಪ್ ತಾಂಡಾದ ಸಾವಿರಾರು ಮತಗಳ ಮೇಲೆ ಕಣ್ಣಿಟ್ಟು ಬಿಜೆಪಿಯ ಬಂಜಾರಾ ನಾಯಕರು ಇಂಥಹ ಷಢ್ಯಂತ್ರಕ್ಕೆ ಕೈಹಾಕಿದ್ದಾರೆ ಎಂದು ಆರೋಪಿಸಿದರು.

ತಾಂಡಾದಲ್ಲಿ ನಾವು ಹಲವು ವರ್ಷಗಳ ಕಾಲ ಬಿಜೆಪಿ ಪಕ್ಷಕ್ಕಾಗಿ ದುಡಿದಿದ್ದೇವೆ. ಪ್ರಾಮಾಣಿಕ ಸೇವೆಯಿಂದ ಜನರ ಪ್ರೀತಿ ಗಳಿಸಿದ್ದೇವೆ. ಆದರೆ ೨೦೧೮ರ ವಾಡಿ ಪುರಸಭೆ ಚುನಾವಣೆ ಸಂದರ್ಭದಲ್ಲಿ ನಮಗೆ ಟಿಕೇಟ್ ನೀಡದೆ ಬಿಜೆಪಿ ನಾಯಕರು ವಂಚಿಸಿದರು. ನಮ್ಮನ್ನು ಆಗ ಕೀಳಾಗಿ ಕಂಡರು. ಆದರೆ ಪ್ರಿಯಾಂಕ್ ಖರ್ಗೆ ಅವರು ಯಾವೂದೇ ಬೇಸರವಿಟ್ಟುಕೊಳ್ಳದೆ ನಮಗೆ ಕಾಂಗ್ರೆಸ್ ಟಿಕೇಟ್ ಕೊಟ್ಟು ಗೆಲ್ಲಿಸಿದರು. ಪುರಸಭೆಯ ಅಧ್ಯಕ್ಷೆಯನ್ನಾಗಿಯೂ ಮಾಡಿದರು. ಅಲ್ಲದೆ ಪ್ರಿಯಾಂಕ್ ಅವರು ಬಂಜಾರಾ ಜನರ ಮೇಲೆ ಬಹಳ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಸಮಾಜಕಲ್ಯಾಣ ಸಚಿವರಾದಾಗ ನಮ್ಮ ಸಮುದಾಯಕ್ಕೆ ಹಲವು ಮಹತ್ವದ ಕೊಡುಗೆಗಳನ್ನು ಕೊಟ್ಟಿದ್ದಾರೆ, ಸೇವಾಲಾಲ ಸಾಂಸ್ಕೃತಿಕ ಭವನಗಳಿಗೆ ಅನುದಾನ ಕೊಟ್ಟಿದ್ದಾರೆ. ಸೇವಾಲಾಲ ಮಹಾರಾಜರ ಜನ್ಮಸ್ಥಳ ಅಭಿವೃದ್ಧಿಗೂ ಕೋಟಿಗಟ್ಟಲೇ ಅನುದಾನ ನೀಡಿದ್ದಾರೆ. ಅವರಿಂದ ಬಂಜಾರಾ ತಾಂಡಾಗಳು ಪ್ರಗತಿ ಕಂಡಿವೆ ಎಂದರು.

ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ನಮ್ಮ ಬಂಜಾರಾ ಸಮಾಜದ ವ್ಯಕ್ತಿಗೆ ಟಿಕೇಟ್ ನೀಡಿದ್ದಾರೆ ನಿಜ. ಹಲವು ಅಪರಾಧಗಳನ್ನು ಹೊತ್ತಿರುವ ಮತ್ತು ೪೦ಕ್ಕೂ ಹೆಚ್ಚು ಪಡಿತರ ಅಕ್ಕಿ ಕಳ್ಳ ಸಾಗಾಣಿಕೆಯ ಕೇಸ್ ಎದುರಿಸುತ್ತಿರುವ ವ್ಯಕ್ತಿ ಶಾಸಕನಾದರೆ ಕ್ಷೇತ್ರದ ಸ್ಥಿತಿ ಏನಾಗಬಹುದು? ಯುವಕರ ಭವಿಷ್ಯ ಏನಾಗಬಹುದು? ಅಭಿವೃದ್ಧಿಯ ದಿಕ್ಕು ಎತ್ತ ಸಾಗಬಹುದು? ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನದ ಜೇಬು ಸೇರಿಕೊಳ್ಳದೆ ಇರಲು ಸಾಧ್ಯವೇ? ಎಂದು ಪ್ರಶ್ನಿಸಿದ ಮೈನಾಬಾಯಿ ಗೋಪಾಲ ರಾಠೋಡ, ಬಂಜಾರಾ ಜನರು ಜಾತಿ ನೋಡಿ ಓಟ್ ಹಾಕಬಾರದು ಎಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೆಮೂದ್ ಸಾಹೇಬ, ಯುವ ಕಾಂಗ್ರೆಸ್ ಅಧ್ಯಕ್ಷ ಶರಣು ವಾರದ್, ಬಂಜಾರಾ ಹಿರಿಯ ಮುಖಂಡ ಸೇವಾ ರಾಠೋಡ, ಗೋಪಾಲ ರಾಠೋಡ, ಆನಂದ ಶಂಕರ ರಾಠೋಡ, ಅನೀಲ ಶಿವಬೋ, ಬಸವರಾಜ ಕೇಶ್ವಾರ ಇದ್ದರು.

Advertisement

ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಆರು ಬಾರಿ ಅವಕಾಶ ವಂಚನೆ: ಭಾವುಕರಾದ ಮಾಜಿ ಸಚಿವ ಎಸ್.ಆರ್.ಪಾಟೀಲ್

Advertisement

Udayavani is now on Telegram. Click here to join our channel and stay updated with the latest news.

Next