ಮಳವಳ್ಳಿ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರ ಸ್ವಾಮಿ ಜೆಡಿಎಸ್‌ನ ಡಾ.ಕೆ.ಅನ್ನದಾನಿ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಕಳೆದ ಬಾರಿಯ ಸೋಲಿನ ಸೇಡು ತೀರಿಸಿಕೊಂಡರು.
2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ಕೆ.ಅನ್ನದಾನಿ ವಿರುದ್ಧ 26670 ಮತ ಅಂತರದಿಂದ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರ ಸ್ವಾಮಿ ಈ ಬಾರಿಯ ಚುನಾವಣೆಯಲ್ಲಿ 46846 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.
ಕ್ಷೇತ್ರದಲ್ಲಿ 2004ರಿಂದಲೂ ತಮ್ಮದೇ ಆದ ಹಿಡಿತ ಸಾಧಿಸುತ್ತಾ ಬಂದಿದ್ದ ಪಿ.ಎಂ.ನರೇಂದ್ರ ಸ್ವಾಮಿ, 2008ರಲ್ಲಿ ಕಾಂಗ್ರೆಸ್ ಸಿಗದೇ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು. 2013ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು 558 ಮತ ಅಂತರದಿಂದ ಗೆಲುವು ಸಾಧಿಸಿದ್ದ ಅವರು, 2018ರ ಚುನಾವಣೆಯಲ್ಲಿ 26970 ಮತಗಳಿಂದ ಜೆಡಿಎಸ್ ಅಭ್ಯರ್ಥಿ ಡಾ.ಕೆ.ಅನ್ನದಾನಿ ವಿರುದ್ಧ ಸೋತಿದ್ದರು. ಈ ಬಾರಿ ಗೆಲುವಿನ ವಿಶೇಷ ತಂತ್ರ ರೂಪಿಸಿದ್ದ ಅವರಿಗೆ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಸೋಮಶೇಖರ್, ಕಾಂಗ್ರೆಸ್ ಸೇರ್ಪಡೆ ಆಗುವ ಮೂಲಕ ಬಲ ತುಂಬಿದರು.
ಅಲ್ಲದೇ ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರ ಸಹಕಾರ ಗೆಲುವಿಗೆ ಮತ್ತಷ್ಟು ಶಕ್ತಿ ಬಂದಿತು. ಜೆಡಿಎಸ್ ಅಭ್ಯರ್ಥಿ ಹಲವು ಸಂದರ್ಭದಲ್ಲಿ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ಟೀಕಿಸುವ ಭರದಲ್ಲಿ 62 ಸಾವಿರ ಮತಗಳಿಂದ ಸೋಲಿಸಿರುವೆ. ಐದು ವರ್ಷಗಳ ಕಾಲ ಮನೆಯಲ್ಲಿ ಇರಿ ಎಂದು ಆಡಿದ್ದ ಮಾತುಗಳಿಗೆ ಇದೀಗ ಕಾಂಗ್ರೆಸ್‌ನ ಪಿ.ಎಂ.ನರೇಂದ್ರಸ್ವಾಮಿ ಅವರು 46846 ಮತಗಳಿಂದ ಸೋಲಿಸಿ ಭರ್ಜರಿಯಾಗಿಯೇ ತಿರುಗೇಟು ನೀಡಿದ್ದಾರೆ. ಆರಂಭದಲ್ಲಿ ಪ್ರಬಲ ಸ್ಪರ್ಧೆಯ ಸುಳಿವು ನೀಡಿದ ಬಿಜೆಪಿ ಅಭ್ಯರ್ಥಿ ಜಿ.ಮುನಿರಾಜು 25116 ಮತ ಪಡೆದು ನಿರಾಸೆ ಮೂಡಿಸಿದ್ದಾರೆ.
ಇನ್ನೂ ಬಿಎಸ್‌ಪಿ ಎಂ.ಕೃಷ್ಣಮೂರ್ತಿ 2277 ಹಾಗೂ ನೋಟಾಗೆ 1256 ಮತಗಳು ಬಿದ್ದಿವೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ ಅಭಿವೃದ್ಧಿಗಾಗಿ ಮತ ನೀಡಿ ಗೆಲ್ಲಿಸಿ ಎಂದು ಪ್ರಚಾರ ನಡೆಸಿದರು. ಆದರೆ, ಜೆಡಿಎಸ್ ಅಭ್ಯರ್ಥಿ ಡಾ.ಕೆ.ಅನ್ನದಾನಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಮತ ಹಾಕಿ ಎನ್ನುತ್ತಿದ್ದರು. ಕೊನೆಗೂ ಕ್ಷೇತ್ರದ ಮತದಾರರು ಅಭಿವೃದ್ಧಿ ಜೈ ಎಂದಿದ್ದಾರೆ ಎನ್ನಬಹುದು. ಮತ ಏಣಿಕೆಯ ವೇಳೆ ಎರಡೇ ಸುತ್ತಿನಲ್ಲಿ ಅಲ್ಪ ಹಿನ್ನಡೆಯಲ್ಲಿದ್ದ ಅವರು ನಂತರ ಎಲ್ಲ ಸುತ್ತುಗಳಲ್ಲೂ ನಿರಂತರ ಮುನ್ನಡೆ ಸಾಧಿಸಿ ಗೆಲುವು ಸಾಧಿಸಿದ್ದಾರೆ.
ದಾಖಲೆ: ಕ್ಷೇತ್ರದ ಇತಿಹಾಸದಲ್ಲಿ ಅತಿಹೆಚ್ಚು ಅಂದರೆ 2018ರಲ್ಲಿ 103038 ಮತ ಪಡೆದಿದ್ದ ಡಾ.ಕೆ.ಅನ್ನದಾನಿ ಅವರ ದಾಖಲೆಯನ್ನು ಪಿ. ಎಂ.ನರೇಂದ್ರಸ್ವಾಮಿ 106498 ಮತ ಪಡೆದು ಅಳಿಸಿ ಹಾಕಿದ್ದಾರೆ. ಅಲ್ಲದೇ ಅತಿಹೆಚ್ಚಿನ ಅಂತರದ ಕಳೆದ ಬಾರಿಯ 26670ರ ದಾಖಲೆಯನ್ನು 46846 ಅಂತರದಿಂದ ಸೋಲಿಸಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.