ಗುಂಡ್ಲುಪೇಟೆ: ಸಾಮಾಜಿಕ ನ್ಯಾಯದ ಪರವಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಕೋಮುವಾದಿ ಬಿಜೆಪಿಯನ್ನು ದೂರವಿಡಿ ಎಂದು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ. ಗಣೇಶಪ್ರಸಾದ್ ಮನವಿ ಮಾಡಿದರು.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚಿಕ್ಕಬೇಗೂರು, ಹೀರಿಬೇಗೂರು, ಅರಳಿಕಟ್ಟೆ, ಕೆಬ್ಬೇ ಪುರ, ಕುಲಗಾಣ, ಮೆಲಯೂರು, ಮೂಡ್ನಾಕೂಡು ಗ್ರಾಮದಲ್ಲಿ ಮತಯಾಚನೆ ಬಳಿಕ ಮಾತನಾಡಿದರು. ಕ್ಷೇತ್ರದ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಹಾಗೂ ಆರ್.ಧ್ರುವನಾರಾಯಣ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಶಾಶ್ವತ ಅಭಿವೃದ್ಧಿ ಕೆಲಸ ಮಾಡಿದರು ಎಂದರು.
ಬೇರೆ ಪಕ್ಷದಲ್ಲಿ ಇದು ಸಾಧ್ಯವಿಲ್ಲ: ಎಲ್ಲಾ ವರ್ಗದ ಜನರಿಗೂ ಅಧಿಕಾರ ನೀಡಿದ ಪಕ್ಷ ಕಾಂಗ್ರೆಸ್ ಆಗಿದೆ. ಚಾಮರಾಜನಗರ ಕ್ಷೇತ್ರದಲ್ಲಿ ಉಪ್ಪಾರ ಸಮಾಜದ ಪುಟ್ಟರಂಗಶೆಟ್ಟರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ, ಬೇರೆ ಪಕ್ಷದಲ್ಲಿ ಇದು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ರಾಜ್ಯ ಜನತೆಗೆ ನಾಲ್ಕು ಗ್ಯಾರಂಟಿ ಘೋಷಣೆ ಮಾಡಿದ್ದು, ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೊಳಿಸಲಿದೆ. ಉಚಿತ ಯೋಜನೆಗಳಿಂದ ಲಕ್ಷಾಂತರ ಮಂದಿಗೆ ಉಪಯೋಗ ವಾಗಲಿದೆ. ಆದ್ದರಿಂದ ಜನರ ಅಭಿವೃದ್ಧಿಯ ಪರ ನಿಂತಿರುವ ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಕೋರಿದರು.
ಬಿಜೆಪಿ ಸುಳ್ಳು ಭರವಸೆ ನಂಬಬೇಡಿ: ಬಿಜೆಪಿ ಕೇಂದ್ರ ಹಾಗೂ ರಾಜ್ಯ ನಾಯಕರು ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಅಧಿಕಾರ ಹಿಡಿದವರು. ಇಲ್ಲಿಯ ತನಕ ಒಂದು ಉದ್ಯೋಗವನ್ನು ಸೃಷ್ಟಿಸಿಲ್ಲ. ಆದ್ದರಿಂದ ಬಿಜೆಪಿಯ ಸುಳ್ಳು ಭರವಸೆಗಳಿಗೆ ನಂಬಿ ಮತ ಹಾಕದೆ ನುಡಿದಂತೆ ನಡೆದ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ಗ್ಯಾಸ್ ಬೆಲೆ 450 ರೂ. ಇದ್ದದ್ದು ಈಗ 1200 ರೂ. ಆಗಿದೆ. ಈ ಮೂಲಕ ಎರಡು ಪಟ್ಟು ಹೆಚ್ಚಳವಾಗಿ ಸಾಮಾನ್ಯ ಜನರಿಗೆ ಹೊರೆಯಾಗುತ್ತಿದೆ. ಯುವಕರು ಇದನ್ನು ಅರಿತುಕೊಳ್ಳಬೇಕು. ಮೋದಿಯಿಂದ ರಾಷ್ಟ್ರಕ್ಕೆ ಏನು ಲಾಭವಿಲ್ಲ. ಬಿಜೆಪಿ ಸರ್ಕಾರ ಕೇವಲ ಹೆಸರು ಬದಲಾವಣೆಕೊಂಡು ಕಾಂಗ್ರೆಸ್ ಯೋಜನೆ ಮುಂದುವರೆಸಿಕೊಂಡು ಹೋಗುತ್ತಿದೆ. ಜೊತೆಗೆ ಯಡಿಯೂರಪ್ಪ ಹೆಸರನ್ನು ಓಟ್ ಬ್ಯಾಂಕ್‌ಗಾಗಿ ಬಳಸಿಕೊಳ್ಳುತ್ತಿದ್ದಾರೆ. ವಿಧಾನ ಸಭಾ ಕ್ಷೇತ್ರದಾದ್ಯಂತ ಕಾಂಗ್ರೆಸ್ ಪರ ಅಲೆಯಿದ್ದು, ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಿ.ಎಂ.ಮುನಿರಾಜು, ಪಿ.ಬಿ.ರಾಜಶೇಖರ್, ಜಿಪಂ ಮಾಜಿ ಸದಸ್ಯರಾದ ಕೆರಹಳ್ಳಿ ನವೀನ್, ಡಿ.ನಾಗರಾಜು, ಬಿ.ಕೆ. ರವಿಕುಮಾರ್, ತಾಪಂ ಮಾಜಿ ಅಧ್ಯಕ್ಷ ಎಂ.ಬಿ.ರೇವಣ್ಣ, ತಾಪಂ ಮಾಜಿ ಸದಸ್ಯರಾದ ಕುಲಗಾಣ ರವಿಕುಮಾರ್, ಮುಕ್ಕಡಹಳ್ಳಿ ರವಿಕುಮಾರ್, ಎಪಿಎಂಸಿ ಸದಸ್ಯ ಆರ್. ಎಸ್.ನಾಗರಾಜು, ಮುಖಂಡರಾದ ಮೂಡ್ನಾಕೂಡು ಕುಮಾರ್, ಉದಯಕುಮಾರ್, ಹೀರಿಬೇಗೂರು ಗುರುಸ್ವಾಮಿ, ಕುಲಗಾಣ ಮಧುಕುಮಾರ್ ಸೇರಿದಂತೆ ಆಯಾಯ ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ಭ್ರಷ್ಟಾಚಾರ ಮುಕ್ತವಾಗಿಸಲು ಶ್ರಮಿಸುವೆ: ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಿದರೆ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಕ್ಷೇತ್ರದ ಕಾರ್ಯಕರ್ತರ ಕಷ್ಟ ಸುಃಖಗಳಿಗೆ ಸದಾ ಭಾಗಿಯಾಗುವೆ. ಕಚೇರಿ ಹಂತದಲ್ಲಿ ಸಾರ್ವಜನಿಕರ ಕೆಲಸಗಳು ಸುಲಭವಾಗಿ ಆಗುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಆಸ್ಪದ ನೀಡದೆ ಭ್ರಷ್ಟಾಚಾರ ಮುಕ್ತ ತಾಲೂಕಾಗಿಸಲು ಶ್ರಮಿಸುವುದಾಗಿ ಗಣೇಶ್‌ಪ್ರಸಾದ್ ತಿಳಿಸಿದರು.