Advertisement

ದ.ಕ.ದಿಂದಲೇ ಚುನಾವಣಾ ಸಿದ್ಧತೆ: ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌

07:35 AM Aug 03, 2017 | Team Udayavani |

ಮಂಗಳೂರು: ಮುಂದಿನ ವರ್ಷ ವಿಧಾನ ಪರಿಷತ್‌ ನೈಋತ್ಯ ಪದವೀಧರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಪಕ್ಷವು ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ವರ್ಷದ ಮೊದಲೇ ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಹೀಗಾಗಿ ದ.ಕ. ಜಿಲ್ಲೆಯಿಂದಲೇ ನನ್ನ ಚುನಾವಣಾ ಸಿದ್ಧತೆಯನ್ನು ಆರಂಭಿಸಿದ್ದೇನೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಎಸ್‌.ಪಿ. ದಿನೇಶ್‌ ಹೇಳಿದರು. 

Advertisement

ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ 2012ರಲ್ಲೂ ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷ ಅವಕಾಶ ನೀಡಿತ್ತು. ಆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಚ್‌. ಶಂಕರಮೂರ್ತಿ ಅವರ ವಿರುದ್ಧ ಕೇವಲ 918 ಮತಗಳಿಂದ ಸೋತಿದ್ದೇನೆ. ಅಂದು ಜೆಎಸ್‌ಡಿ ಅಭ್ಯರ್ಥಿ ಸ್ಪರ್ಧಿಸಿದ ಕಾರಣ ನಮ್ಮ ಮತ ವಿಭಜನೆಯಾಗಿ ಸೋಲಬೇಕಾಯಿತು ಎಂದರು.

ನೈಋತ್ಯ ಪದವೀಧರ ಕ್ಷೇತ್ರವು ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ದಾವಣಗೆರೆ ಜಿಲ್ಲೆಯ 2 ತಾಲೂಕುಗಳನ್ನೊಳಗೊಂಡಿದೆ. ಸುಮಾರು 30 ವಿಧಾನಸಭಾ ಕ್ಷೇತ್ರ ಹಾಗೂ 6 ಲೋಕಸಭಾ ಕ್ಷೇತ್ರಗಳನ್ನೊಳಗೊಂಡಿದೆ. ಹಿಂದಿನ ಚುನಾವಣೆಯಲ್ಲಿ 62,000 ಮತದಾರರಿ ದ್ದರೂ 32,000 ಮಂದಿ ಮಾತ್ರ ಮತ ಚಲಾಯಿಸಿದ್ದರು. ಅದರಲ್ಲೂ 2,400 ಮತಗಳು ಅಸಿಂಧು ವಾಗಿದ್ದವು ಎಂದರು.

ಹೊಸದಾಗಿ ಮತದಾರರ ಪಟ್ಟಿ
ಈ ಬಾರಿ ಸುಪ್ರೀಂ ಕೋರ್ಟ್‌ ಹಿಂದಿನ ಮತದಾರರ ಪಟ್ಟಿಯನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಮತದಾರರನ್ನು ಹೊಸದಾಗಿ ಪಟ್ಟಿಗೆ ಸೇರಿಸಿಕೊಳ್ಳಲಿದೆ. ಸೆಪ್ಟಂಬರ್‌ ಮೊದಲ ವಾರದಿಂದ ಈ ಪ್ರಕ್ರಿಯೆ ಆರಂಭಗೊಳ್ಳುವ ಸಾಧ್ಯತೆ ಇದೆ. ಹಿಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 12,500 ಮತದಾರರಿದ್ದು, ಹೆಚ್ಚಿನ ಪದವೀಧರನ್ನು ಪಟ್ಟಿಗೆ ಸೇರಿಸಿ ಗೆಲ್ಲುವ ನಿಟ್ಟಿನಲ್ಲಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಎಲ್ಲ ಬ್ಲಾಕ್‌ಗಳಲ್ಲೂ ಸಭೆ ನಡೆಸಲಿದ್ದೇನೆ. ಆ. 5ರ ವರೆಗೆ ಜಿಲ್ಲೆಯಲ್ಲಿ ಚುನಾವಣಾ ಸಿದ್ಧತೆ ನಡೆಸಲಾಗುವುದು ಎಂದು ಹೇಳಿದರು.

ಎಲ್ಲ ಕ್ಷೇತ್ರಗಳಲ್ಲೂ ಸಮಾವೇಶ
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಮಾತನಾಡಿ, ಕಾಂಗ್ರೆಸ್‌ನ ಬಲವರ್ಧನೆ ದೃಷ್ಟಿಯಿಂದ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಸಮಾವೇಶಗಳು ನಡೆಯಲಿವೆ. ಎಐಸಿಸಿ ಕಾರ್ಯದರ್ಶಿ ಯವರ ನಿರ್ದೇಶನದಂತೆ “ವನ್‌ ಬೂತ್‌ ವನ್‌ ಲೀಡರ್‌, ವನ್‌ ಬೂತ್‌ ಟೆನ್‌ ಯೂತ್‌’ ಎಂಬ ರೀತಿಯಲ್ಲಿ ಬೂತ್‌ ಮಟ್ಟದಲ್ಲೇ ಪಕ್ಷವನ್ನು ಬಲಪಡಿಸುವ ಕಾರ್ಯ ನಡೆಯಲಿದೆ ಎಂದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡ ರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಸುರೇಶ್‌ ಬಲ್ಲಾಳ್‌, ನವೀನ್‌ ಡಿ’ಸೋಜಾ, ಅಪ್ಪಿ, ಸುಭೋದಯ ಆಳ್ವ, ಟಿ.ಕೆ. ಸುಧೀರ್‌, ಅಬ್ದುಲ್‌ ಸಲೀಂ, ನಝೀರ್‌ ಬಜಾಲ್‌ ಉಪಸ್ಥಿತರಿದ್ದರು. 

ಆ. 5: ಕೆಪಿಸಿಸಿ ತಂಡ ಭೇಟಿ
ಆ. 5ರಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿಗಳು ಮಂಗಳೂರಿಗೆ ಭೇಟಿ ನೀಡಲಿದ್ದು, ಕಾಂಗ್ರೆಸ್‌ ಕಚೇರಿಯಲ್ಲಿ ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ ಎಂದು ಹರೀಶ್‌ ಕುಮಾರ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next