ಬೆಂಗಳೂರು: ಒಂದೆಡೆ ಬಣಗಳ ಹಗ್ಗಜಗ್ಗಾಟ, ಮತ್ತೂಂದೆಡೆ ಅದೇ ಬಣಗಳ ಬೆಂಬಲಿತ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಉದ್ದವಾಗುತ್ತಿರುವುದರಿಂದ “ಕೈ’ ನಾಯಕರಿಗೆ ಎರಡನೇ ಅಭ್ಯರ್ಥಿಗಳ ಪಟ್ಟಿ ಅಕ್ಷರಶಃ ಕಬ್ಬಿಣದ ಕಡಲೆಯಾಗಿ ಪರಿಣಮಿಸುತ್ತಿದೆ.
ಉಳಿದ ನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಹುತೇಕ ಕಡೆ 3-4 ಆಕಾಂಕ್ಷಿಗಳಿದ್ದಾರೆ. ಒಬ್ಬರ ಆಯ್ಕೆ, ಉಳಿದವರ ಮುನಿಸಿಗೆ ಕಾರಣವಾಗುತ್ತಿದೆ. ಇದು ಮುಂಬರುವ ಚುನಾವಣೆಯಲ್ಲಿ ಒಳ ಏಟು ಕೊಡುವ ಆತಂಕವೂ ಇದೆ. ಹಾಗಾಗಿ, ಇದ್ದವರಲ್ಲಿ ಯಾರಿಗೆ ಮಣೆ ಹಾಕುವುದು ಹಾಗೂ ಯಾರನ್ನು ಕೈಬಿಡುವುದು ಎಂಬ ಜಿಜ್ಞಾಸೆ ಕಾಂಗ್ರೆಸ್ ಅನ್ನು ಕಾಡತೊಡಗಿದೆ. ಇದೆಲ್ಲದರ ಪರಿಣಾಮ ಎರಡನೇ ಪಟ್ಟಿ ಕಗ್ಗಂಟಾಗಿ ಉಳಿದಿದೆ.
ಅಭ್ಯರ್ಥಿಗಳ ಆಯ್ಕೆ ನಂತರ ಎದುರಾಗಬಹುದಾದ ಬಂಡಾಯ, ಪ್ರತಿರೋಧ, ಪಕ್ಷಾಂತರದಂತಹ ಪರಿಣಾಮ ಗಳನ್ನು ಅಳೆದು-ತೂಗಿ ಎರಡನೇ ಪಟ್ಟಿ ಸಿದ್ಧಪಡಿಸ ಲಾಗುತ್ತಿದೆ. ಇಲ್ಲಿ ಕಾಂಗ್ರೆಸ್ ಮುಂದೆ ಎರಡು ರೀತಿಯ ಟಾಸ್ಕ್ ಗಳಿವೆ. ಒಂದು- 100 ಸೀಟುಗಳ ಪೈಕಿ ಕನಿಷ್ಠ 30-40 ಸೀಟುಗಳನ್ನು ಗೆಲ್ಲಲೇಬೇಕು ಎಂಬ ಗುರಿ. ಮತ್ತೂಂದು ಬಂಡಾಯ ಆಗದಂತೆ ನೋಡಿಕೊಳ್ಳು ವುದು. ಇದಕ್ಕಾಗಿ ನಿರೀಕ್ಷಿತ ಅತೃಪ್ತರಿಗೆ ಪಕ್ಷ ಅಧಿ ಕಾರಕ್ಕೆ ಬರುತ್ತಿದ್ದಂತೆ ನಿಗಮ- ಮಂಡಳಿಗಳ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳನ್ನು ತೋರಿಸಿ ಈಗಿನಿಂದಲೇ ಸಮಾಧಾನಗೊಳಿಸುವ ತಂತ್ರ ಅನುಸರಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
50 ಸೀಟುಗಳ ಆಯ್ಕೆ ಅಂತಿಮ?: “ನೂರರಲ್ಲಿ ಈಗಾಗಲೇ ಹೆಚ್ಚು-ಕಡಿಮೆ ಅರ್ಧಕ್ಕರ್ಧ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದೆ. ಉಳಿದ 50 ಸೀಟುಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಮಾರ್ಚ್ 30ಕ್ಕೆ ಪಕ್ಷದ ಸಿಇಸಿ ಸಭೆ ನಡೆಯಲಿದೆ. ಇದಾದ ನಂತರ ಮೂರ್‍ನಾಲ್ಕು ದಿನಗಳಲ್ಲಿ ಅಂತಿಮಗೊಳ್ಳಲಿದೆ. ಏಪ್ರಿಲ್ ಮೊದಲ ವಾರದಲ್ಲಿ ಪಟ್ಟಿ ಬಿಡುಗಡೆ ಮಾಡುವ ಉದ್ದೇಶ ಇದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರ ಸಮನ್ವಯದೊಂದಿಗೇ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತಿದೆ. ಗೊಂದಲಕ್ಕೆ ಅವಕಾಶವೇ ಇರುವುದಿಲ್ಲ’ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.
ಈ ಮಧ್ಯೆ ಬೆಳಗಾದರೆ ಬೇಷರತ್ತಾಗಿ ಒಂದೊಂದು ಕಡೆಯಿಂದ ಒಬ್ಬೊಬ್ಬ ನಾಯಕರು ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಲು ಬರುತ್ತಿದ್ದಾರೆ. “ಕೈ’ ನಾಯಕರು ಕೂಡ ನಗುಮೊಗದಿಂದ ಬರಮಾಡಿಕೊಳ್ಳುತ್ತಿದ್ದಾರೆ. ಮೇಲ್ನೋಟಕ್ಕೆ ಬೇಷರತ್ತು ಆಗಿದ್ದರೂ, ಈಗಿರುವ ಪಕ್ಷದಲ್ಲಿನ ಅತೃಪ್ತಿ ಹಾಗೂ ಹಲವು ನಿರೀಕ್ಷೆಗಳನ್ನು ಹೊತ್ತುಕೊಂಡೇ ಅವರೆಲ್ಲಾ ಕಾಂಗ್ರೆಸ್ ಬಾಗಿಲು ತಟ್ಟುತ್ತಿರುವುದು ಗೊತ್ತಿರುವ ಸಂಗತಿ. ಹೀಗೆ ಸೇರ್ಪಡೆಗೊಂಡವರಿಗೆ ಮಣೆ ಹಾಕಿದರೆ, ಈಗಾಗಲೇ ವರ್ಷದಿಂದ ಚುನಾವಣಾ ಅಖಾಡಕ್ಕೆ ಭೂಮಿಕೆ ಸಿದ್ಧಪಡಿಸಿಕೊಂಡಿರುವ ಮೂಲ ಕಾಂಗ್ರೆಸ್ಸಿಗರಿಗೆ ಸಹಜವಾಗಿ ನಿರಾಸೆ ಉಂಟಾಗಲಿದೆ. ಆಗ ಅದು ಬಂಡಾಯದ ಕಿಡಿಹೊತ್ತಿಸುವ ಸಾಧ್ಯತೆ ಇದೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಇದನ್ನು ಕಾಣಬಹುದು. ಒಂದು ವೇಳೆ ಈ “ಅತಿಥಿ’ಗಳಿಗೆ ಮಣೆ ಹಾಕದಿದ್ದರೆ, ತಟಸ್ಥವಾಗಿ ಉಳಿಯುವ ಸಾಧ್ಯತೆ ಇದೆ. ಆಗ, ಪ್ರತಿನಿಧಿಸುವ ಸಮುದಾಯವೂ ಅವರನ್ನೇ ಹಿಂಬಾಲಿಸಬಹುದು. ಆಗಲೂ ಪಕ್ಷಕ್ಕೇ ತೊಂದರೆ. ಈ ಹಿನ್ನೆಲೆಯಲ್ಲಿ ಎರಡನೇ ಅಭ್ಯರ್ಥಿಗಳ ಪಟ್ಟಿಯು ಗಜಪ್ರಸವದಂತಾಗಿದೆ.
ಅರಕಲಗೂಡಿನ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಬೇಕೋ-ಬೇಡವೋ ಗೊಂದಲವಿದೆ. ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ವಿರುದ್ಧ ಸ್ಪರ್ಧೆಗೆ ಮಹಡಿ ಮನೆ ಸತೀಶ್, ತಮ್ಮಯ್ಯ, ಬಿ.ಎಚ್.ಹರೀಶ್, ಗಾಯತ್ರಿ ಶಾಂತೇಗೌಡ ಸೇರಿದಂತೆ ನಾಲ್ವರ ನಡುವೆ ಪೈಪೋಟಿ ನಡೆದಿದ್ದು ಯಾರು ಸೂಕ್ತ ಎಂಬ ತೀರ್ಮಾನಕ್ಕೆ ಬರಲು ಕಷ್ಟವಾಗುತ್ತಿದೆ.
ಇತ್ತೀಚೆಗೆ ಬಿಜೆಪಿ ತೊರೆದು ಪಕ್ಷ ಸೇರಿದ ವಿ.ಎಸ್.ಪಾಟೀಲ್, ಮೋಹನ ಲಿಂಬಿಕಾಯಿ, ಬಾಬುರಾವ್ ಚಿಂಚನಸೂರ್ ಭವಿಷ್ಯ ಏನು ಎಂಬುದು ತೀರ್ಮಾನವಾಗಿಲ್ಲ. ಇನ್ನು ಸೇರ್ಪಡೆಗೊಂಡವರು ಕಾಂಗ್ರೆಸ್‌ನಲ್ಲಿಯ ಯಾವ ಬಣದೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂಬುದೂ ಕುತೂಹಲಕಾರಿ ಆಗಿದೆ. ಈ ಮೊದಲೇ ಸ್ಥಳೀಯವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರ ಬಣಗಳಿವೆ. ಇವರಲ್ಲಿ ಯಾರೊಬ್ಬರೊಂದಿಗೆ ಗುರುತಿಸಿಕೊಂಡರೂ ಮತ್ತೂಬ್ಬರಿಗೆ ಮುನಿಸು.
– ವಿಜಯಕುಮಾರ್ ಚಂದರಗಿ