ಹೊಸದಿಲ್ಲಿ : ‘ಕಾಂಗ್ರೆಸ್ ಗೆ ಅರ್ಥವಾಗುವುದು ಹಣ ಮಾತ್ರ; ರಾಷ್ಟ್ರ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇತ್ಲಿ ಅವರಿಂದು ಕಾಂಗ್ರೆಸ್ ಪಕ್ಷವನ್ನು ಜಾಲಾಡಿದರು.
‘ಕಾಂಗ್ರೆಸ್ ಪಕ್ಷಕ್ಕೆ ಹಿಂದೆ ಘಟಾನುಘಟಿಗಳ ನಾಯಕತ್ವ ಇತ್ತು. ಆದರೆ ಇಂದು ಕಾಂಗ್ರೆಸ್ ಹೊಂದಿರುವ ನಾಯಕತ್ವಕ್ಕೆ ದಾಳಿ ನಡೆಸುವ ಯುದ್ಧ ವಿಮಾನಗಳ ಪ್ರಾಥಮಿಕ ಜ್ಞಾನ ಕೂಡ ಇಲ್ಲವಾಗಿದೆ’ ಎಂದು ಜೇತ್ಲಿ ಹೇಳಿದರು.
ಕಾಂಗ್ರೆಸ್ ನಾಯಕತ್ವವನ್ನು ಟೀಕಿಸುವಲ್ಲಿ ಒಟ್ಟಾವಿಯೋ ಕ್ವಟ್ರೋಚ್ಚಿ ಯನ್ನು ಪರೋಕ್ಷವಾಗಿ ಉಲ್ಲೇಖೀಸಿದ ಜೇತ್ಲಿ, “ಇಂದಿನ ಕಾಂಗ್ರೆಸ್ ನಾಯಕ ಅಂದು ಚಿಕ್ಕ ಮಗುವಿದ್ದಾಗ ‘ಕ್ಯೂ’ ಎಂಬಾತನ ತೊಡೆಯಲ್ಲಿ ಆಡಿಕೊಂಡಿದ್ದ. ಅಂತಹ ನಾಯಕನಿಗೆ ರಾಷ್ಟ್ರ ಭದ್ರತೆ ಏನೆಂದು ಗೊತ್ತಿರುವುದಾದರೂ ಹೇಗೆ ?” ಎಂದು ಜೇತ್ಲಿ ಕಟಕಿಯಾಡಿದರು.
”ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಒಂದು ವಿಶೇಷತೆ ಇತ್ತು. ಅದೆಂದರೆ ನೀವು ಖರೀದಿಗೆಂದು ಆಯ್ಕೆ ಮಾಡಿದ ವಿಮಾನದಲ್ಲಿ ನಿಮಗೆ ವ್ಯಾಪಾರಕ್ಕೆ (ಲಾಭಕ್ಕೆ) ಅವಕಾಶ ಇಲ್ಲವೆಂದಾದಲ್ಲಿ ನೀವು ಆ ವಹಿವಾಟನ್ನೇ ವಿಳಂಬಿಸುವುದು ಅಥವಾ ಅಸಾಧ್ಯಗೊಳಿಸುವುದೇ ಆ ವಿಶೇಷತೆ ಆಗಿತ್ತು” ಎಂದು ಜೇತ್ಲಿ ಹೇಳಿದರು.
ಲೋಕಸಭೆಯಲ್ಲಿ ಇಂದು ಬುಧವಾರದ ಕಲಾಪ ವೇಳೆಯಲ್ಲಿ ಕಾಂಗ್ರೆಸ್ ಪಕ್ಷ ರಫೇಲ್ ಡೀಲ್ ವಿಷಯದಲ್ಲಿ ವಿವಾದಾತ್ಮಕ ಟೇಪ್ ರೆಕಾರ್ಡಿಂಗ್ ಬಳಸಿಕೊಂಡು ಬಿಜೆಪಿಯನ್ನು ಹಣಿಯಲು ಯತ್ನಿಸಿತ್ತು. ಆದರೆ ಆ ಆಡಿಯೋ ಕ್ಲಿಪ್ಪಿಂಗ್ ಸಾಚಾ ಎಂಬುದನ್ನು ಖಾತರಿಪಡಿಸುವಲ್ಲಿ ವಿಫಲವಾಯಿತು.