Advertisement

ಆ.19 ರಿಂದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ರಾಜ್ಯ ಪ್ರವಾಸ

05:35 PM Aug 16, 2022 | Team Udayavani |

ಬೆಂಗಳೂರು: ಆಗಸ್ಟ್ 19ರಿಂದ ಸಪ್ಟೆಂಬರ್ 8ರವರೆಗೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ನಿರ್ಧರಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ನನಗೆ ಮಹತ್ವದ ಜವಾಬ್ದಾರಿಯನ್ನು ವಹಿಸಿದ್ದಾರೆ. ಇಂದು ಪ್ರಚಾರ ಸಮಿತಿ ಕಾರ್ಯಾಲಯವನ್ನು ಸಹ ಆರಂಭಿಸಿದ್ದೇವೆ. ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ನಡೆಸಿದ್ದು ಪದಾಧಿಕಾರಿಗಳ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದ್ದೇವೆ. ಇನ್ನೊಂದು ವಾರದಲ್ಲಿ ಅಧಿಕೃತ ಪಟ್ಟಿ ಪ್ರಕಟವಾಗಲಿದೆ. ಕ್ರಿಯಾಶೀಲರಾಗಿರುವ ಅನೇಕರಿಗೆ ಉಪಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಜವಾಬ್ದಾರಿ ನೀಡಿದ್ದೇವೆ. ಪ್ರಚಾರ ಹಾಗೂ ಮಾಧ್ಯಮ ವಿಭಾಗಕ್ಕೂ ಸಹ ಪ್ರತ್ಯೇಕ ಸಮಿತಿಗಳನ್ನು ಮಾಡಲಿದ್ದೇವೆ. ಇನ್ನೆರಡು ದಿನಗಳಲ್ಲಿ ಮೊದಲ ಹಂತದ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾಗಿ ತಿಳಿಸಿದರು.

ಪ್ರವಾಸ ವಿವರ: ಆಗಸ್ಟ್ 19ರಂದು ಕಲಬುರ್ಗಿಯಿಂದ ಪ್ರವಾಸ ಆರಂಭವಾಗಲಿದೆ. 20ರಂದು ಹುಬ್ಬಳ್ಳಿ, ಧಾರವಾಡ, ಅಂದು ಸಂಜೆ ಕಾರವಾರ, 21, 22 ದಾವಣಗೆರೆ 23 ಚಿತ್ರದುರ್ಗ 24 ಶಿವಮೊಗ್ಗ, 26ಕ್ಕೆ ಮೈಸೂರು, 27ಕ್ಕೆ ಚಾಮರಾಜನಗರ, 29 ತುಮಕೂರು, ಸೆಪ್ಟೆಂಬರ್ 1 ರಂದು ಮಂಗಳೂರು, 2ರಂದು ಉಡುಪಿ, 3ರಂದು ತುಮಕೂರು, 5ರಂದು ಕೊಪ್ಪಳ, 6ರಂದು ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆ, 7 ರಂದು ರಾಯಚೂರಿನಲ್ಲಿ ಸಭೆ ನಡೆಯಲಿದೆ. ಉಳಿದ ಜಿಲ್ಲೆಗಳಿಗೆ ಎರಡನೇ ಹಂತದಲ್ಲಿ ಭೇಟಿ ನೀಡಲಿದ್ದೇನೆ ಎಂದರು.

ರಾಜ್ಯದ ಎಲ್ಲಾ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲೂಕು ಮುಖಂಡರು ಮತ್ತು ಮುಂಚೂಣಿಯ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಮುಖಂಡರನ್ನು ಉದ್ದೇಶಿಸಿ ಸ್ಥಳೀಯವಾಗಿ ಆಯಾ ಸ್ಥಳದಲ್ಲಿಯೇ ಸಭೆಗಳನ್ನು ನಡೆಸಿ ಚರ್ಚಿಸುತ್ತೇನೆ. ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಜೊತೆ ನಾವು ಚರ್ಚಿಸಿದ ವಿಚಾರವನ್ನು ಸಹ ಅವರೊಂದಿಗೆ ವಿನಿಮಯ ಮಾಡಿಕೊಳ್ಳುತ್ತೇವೆ. ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿರುವ ಸಾಧನೆಗಳು ಹಾಗೂ ಪಕ್ಷದ ಹಿರಿಯ ನಾಯಕರು ದೇಶಕ್ಕೆ ನೀಡಿದ ಕೊಡುಗೆಯನ್ನು ಪರಿಣಾಮಕಾರಿಯಾಗಿ ವಿವರಿಸುವ ಜೊತೆಗೆ ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಗುರಿ ಹೊಂದಿದ್ದೇವೆ. ರಾಜ್ಯದಲ್ಲಿ ನಮ್ಮ ಅಧಿಕಾರದಲ್ಲಿ ಮಾಡಿರುವ ಸಾಧನೆಯನ್ನು ಸಹ ನಮ್ಮ ಪಕ್ಷದ ನಾಯಕರಿಗೆ ವಿವರಿಸಿ ತನ್ಮೂಲಕ ಇದನ್ನ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತೇವೆ. ಬಿಜೆಪಿಯ ವೈಫಲ್ಯಗಳು ನಮಗೆ ಪ್ರಮುಖ ಅಸ್ತ್ರ. 2014ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೀಡಿದ ಭರವಸೆಗಳು ಹಾಗೂ ಈಡೇರಿಸುವಲ್ಲಿ ಮಾಡಿರುವ ವೈಫಲ್ಯವನ್ನು ಜನರಿಗೆ ವಿವರಿಸುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಯಾವ ರೀತಿ ಭ್ರಷ್ಟಾಚಾರ ನಡೆಸುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅಕ್ರಮದ ಮೂಲಕವೇ ಅಧಿಕಾರಕ್ಕೆ ಬಂದಿರುವ ಬಿಜೆಪಿ 40 ಪರ್ಸೆಂಟ್ ಕಮಿಷನ್ ದಂಧೆ ನಡೆಸಿದೆ. ಪಿಎಸ್ಐ ನೇಮಕದಲ್ಲಿ ಅಕ್ರಮ ನಡೆದಿದೆ. ಭ್ರಷ್ಟಾಚಾರದಲ್ಲಿ ಕರ್ನಾಟಕ ಮಾದರಿಯಾಗಿದೆ. ಇಂದು ಮುಖ್ಯಮಂತ್ರಿ ರಾಜೀನಾಮೆಗೆ ಅವರ ಸಂಪುಟ ಸದಸ್ಯರೇ ಒತ್ತಾಯಿಸುವ ದಿನ ಬಂದಿದೆ. ನಮ್ಮ ಅಧಿಕಾರ ಇದ್ದಾಗ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಿದ್ದೆವು. ಆದರೆ ಇಂದು ಉತ್ತರ ಪ್ರದೇಶ ಮಾದರಿ ಆಡಳಿತದ ಮಾತು ಕೇಳಿ ಬರುತ್ತಿದೆ. ನಾವೇ ಇತರರಿಗೆ ಮಾದರಿಯಾಗುವ ಪ್ರಯತ್ನ ಮಾಡುತ್ತಿಲ್ಲ. ಎಲ್ಲ ಮಹನೀಯರ ಇತಿಹಾಸವನ್ನು ತೀರುಚುವ ಪ್ರಯತ್ನವನ್ನು ಈ ರಾಜ್ಯ ಸರ್ಕಾರ ಮಾಡುತ್ತಿದೆ. ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಅವಹೇಳನ ಮಾಡಲಾಗುತ್ತಿದೆ. ಇದು ಅಲ್ಲದೆ ಇನ್ನು ಹಲವು ವಿಚಾರಗಳನ್ನು ನಾವು ಇಂದು ನಡೆಸಿದ ಸಭೆಯಲ್ಲಿ ಚರ್ಚಿಸಿದ್ದೇವೆ ಎಂದರು.

Advertisement

ಪ್ರಣಾಳಿಕೆ ಸಮಿತಿ ಸಹ ತನ್ನ ಕಾರ್ಯವನ್ನು ಆರಂಭಿಸಿದೆ. ಮತ್ತೆ ರಾಜ್ಯ ನಾಯಕರು ನಮಗೆ ಸಲಹೆ ನೀಡುವ ಹಾಗೂ ಪ್ರನಾಳಿಕೆ ಸಮಿತಿಗೆ ಮಾರ್ಗದರ್ಶನ ನೀಡುವ ಕಾರ್ಯ ಮಾಡಲಿದ್ದಾರೆ. ಭಾರತ್ ಜೋಡೋ ಯಾತ್ರೆಯ ಬಳಿಕ ರಾಜ್ಯ ನಾಯಕರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗ ನಾನೊಬ್ಬನೇ ಪ್ರವಾಸ ಕೈಗೊಳ್ಳಲಿದ್ದು ಆಯಾ ಜಿಲ್ಲೆಯ ಕಾಂಗ್ರೆಸ್ ನಾಯಕರು ನನಗೆ ಸಾಥ್ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಪ್ರಿಯಾಂಕ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next