ಬೆಂಗಳೂರು: ಸಮ್ಮಿಶ್ರ ಸರಕಾರ ರಚನೆಯಾಗಿ ಆರು ತಿಂಗಳು ಕಳೆದ ಬಳಿಕ ಕೊನೆಗೂ ಮೊದಲ ಬಾರಿಗೆ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಮತ್ತೊಂದೆಡೆ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಹೊಗೆಯಾಗತೊಡಗಿದೆ. ಏತನ್ಮಧ್ಯೆ ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ಸ್ಥಾನ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಂದೇಶ ರವಾನಿಸಿದ್ದಾರೆ.
ಸಂಪುಟ ವಿಸ್ತರಣೆ ಬಳಿಕ ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದಲ್ಲಿ ಎಲ್ಲರಿಗೂ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ಇಬ್ಬರು ಸಚಿವರನ್ನು ಬದಲಾಯಿಸಿದ್ದೇವೆ. 8 ಸ್ಥಾನಗಳ ಪೈಕಿ ಉತ್ತರಕರ್ನಾಟಕಕ್ಕೆ ಏಳು ಸ್ಥಾನ ಮೀಸಲಿಡಲಾಗಿದೆ ಎಂದರು.
ಸಚಿವರ ಮೌಲ್ಯಮಾಪನ ಮಾಡಿ ಪರಿಶೀಲಿಸುತ್ತೇವೆ. ಅಸಮಾಧಾನ ಸಹಜ. ಆದರೆ ಪಕ್ಷದಲ್ಲಿ ಈಗಾಗಲೇ 19 ಶಾಸಕರಿಗೆ ನಿಗಮ ಮಂಡಳಿ, ವಿವಿಧ ಹುದ್ದೆ ಸೇರಿದಂತೆ ಒಟ್ಟು 40 ಮಂದಿಗೆ ರಾಜಕೀಯವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಇದರಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಂತಾಗಿದೆ ಎಂದು ಹೇಳಿದರು.
ರಮೇಶ್ ಜಾರಕಿಹೊಳಿಗೆ ಬೆಳಗಾವಿ ಉಸ್ತುವಾರಿ ಕೊಡಲಾಗಿತ್ತು. ಆದರೆ ಅವರು ಅಭಿವೃದ್ಧಿ ಕಾರ್ಯಗಳತ್ತ ಹೆಚ್ಚು ಗಮನಹರಿಸಿಲ್ಲ. ಪಕ್ಷದ ಸಭೆಗಳಿಗೂ ವೈಯಕ್ತಿಕ ಕಾರಣ ನೀಡಿ ಗೈರುಹಾಜರಾಗುತ್ತಿದ್ದರು. ಹೀಗಾಗಿ ಅವರನ್ನು ಸಂಪುಟದಿಂದ ಕೈಬಿಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.