ಬೆಳಗಾವಿ: ಐತಿಹಾಸಿಕ ರಾಜಹಂಸಗಢ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಉದ್ಘಾಟನೆಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಸಂಘರ್ಷ ಆರಂಭವಾಗಿದೆ.
ರಾಜಹಂಸಗಢ ಕೋಟೆಯಲ್ಲಿ 43 ಅಡಿ ಎತ್ತರದ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಕಾಮಗಾರಿ ಬಹುತೇಕ ಮುಗಿದಿದೆ.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಉದ್ಘಾಟನಾ ಸಮಾರಂಭ ನಿಗದಿಗೊಳಿಸಿದ್ದು, ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಸರಕಾರದ ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಯಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಸೇರಿದಂತೆ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ.
ಕಾಂಗ್ರೆಸ್-ಬಿಜೆಪಿ ಮಧ್ಯೆ ಮರಾಠಾ ಮತಗಳ ಓಲೈಕೆಗಾಗಿ ಕಿತ್ತಾಟ ಆರಂಭಗೊಂಡಿದ್ದು, ರಾಜಹಂಸಗಢದ ಶಿವಾಜಿ ಪ್ರತಿಮೆ ಸ್ಥಳಕ್ಕೆ ಎರಡೂ ಪಕ್ಷ ಗಳ ನಾಯಕರು ಪ್ರತ್ಯೇಕವಾಗಿ ಭೇಟಿ ನೀಡಿದರು. ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿ ಭೇಟಿ ನೀಡಿದ ಬೆನ್ನಲ್ಲೇ ಶಾಸಕ ರಮೇಶ ಜಾರಕಿಹೊಳಿ ಬೆಂಬಲಿಗರೊಂದಿಗೆ ಭೇಟಿ ನೀಡಿದರು.
ಕಾರು ಎದುರು-ಬದುರು
ರಾಜಹಂಸಗಢ ಕೋಟೆ ಬಳಿ ರಮೇಶ ಜಾರಕಿಹೊಳಿ ಹಾಗೂ ಚನ್ನರಾಜ ಹಟ್ಟಿಹೊಳಿ ಕಾರು ಎದುರು ಬದುರಾದ ಪ್ರಸಂಗವೂ ನಡೆ ಯಿತು.
ಚನ್ನರಾಜ ಹಟ್ಟಿಹೊಳಿ ಭೇಟಿ ನೀಡಿ ವಾಪಸ್ ಆಗುವಾಗ ಎದುರಿಗೆ ರಮೇಶ ಜಾರಕಿಹೊಳಿ ವಾಹನ ನಿಂತಿತ್ತು. ಎರಡೂ ಕಾರುಗಳು ಎದುರು ಬದುರಾಗಿ ಹೋಗಲು ಜಾಗ ಇರಲಿಲ್ಲ. ಆಗ ಇತ್ತಂಡಗಳ ಕಾರ್ಯಕರ್ತರು ಘೋಷಣೆ ಕೂಗಿದರು.