ಸೇಡಂ: ಯುವಕನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣ ಹಿನ್ನೆಲೆ ಮುಧೋಳ ಪಿಐ ಆನಂದರಾವ ಅಮಾನತು ಮಾಡಲಾಗಿದೆ.
ಯುವಕ ರಾಘವೇಂದ್ರ ರವಿ ಅನಂತಯ್ಯ ಎಂಬಾತನ ಮೇಲೆ ಗ್ರಾಮದ ಸಂದಪ್ಪ ಹಾಗೂ ಸಹಚರರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜರುಗಿತ್ತು. ಘಟನೆ ಸಂಬಂಧ ಗಾಯಗೊಂಡ ಯುವಕನ ದೂರು ಮುಧೋಳ ಪಿಐ ಆನಂದರಾವ ದೂರು ಪಡೆಯದೇ ಇರುವುದರಿಂದಲೇ ಹಲ್ಲೆ ನಡೆದಿರುವುದಾಗಿ ಕಾಂಗ್ರೆಸ್ ದೂರಿ, ಪಿಐ ತಲೆದಂಡಕ್ಕೆ ಆಗ್ರಹಿಸಿ ಪ್ರತಿಭಟಿಸಿತ್ತು.
ಇದಕ್ಕೆ ಮಣಿದ ಅಧಿಕಾರಿಗಳು ಪಿಐ ಅಮಾನತು ಮಾಡಿ ಆದೇಶಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದ್ದಾರೆ.
ಶುಕ್ರವಾದ ಸಂಜೆವರೆಗೆ ಆರೋಪಿತರನ್ನು ಬಂಧಿಸಬೇಕು ಮತ್ತು ಪಿಐ ಅಮಾನತಿಗೆ ಆಗ್ರಹಿಸಿ, ಮೌಖಿಕ ದೂರನ್ನು ಶರಣಪ್ರಕಾಶ ಪಾಟೀಲ ಮುಧೋಳ ಠಾಣೆಯಲ್ಲಿ ನೀಡಿದ್ದರು. ಶನಿವಾರ ಮಧ್ಯಾಹ್ನದ ವರೆಗೆ ಗೃಹ ಮಂತ್ರಿಗಳು ಮತ್ತು ಎಸ್ಪಿ ಕರ್ತವ್ಯಲೋಪ ಎಸಗಿದ ಅಧಿಕಾರಿಯನ್ನು ಅಮಾನತ್ತು ಮಾಡುವ ಭರವಸೆ ನೀಡಿದ್ದರು. ಅದಕ್ಕಾಗಿ ತಾವು ಧರಣಿ ಹಿಂಪಡೆದಿರುವುದಾಗಿ ಅವರು ತಿಳಿಸಿದ್ದಾರೆ.
ಈ ಸಂಬಂಧ ಮುಧೋಳದಲ್ಲಿ ನೂರಾರು ಜನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಜಮಾಯಿಸಿ ಪೊಲೀಸ್ ಠಾಣೆ ಎದುರು ಧರಣಿಗೆ ಮುಂದಾಗಿದ್ದರು.
ಬಿಜೆಪಿ ರಸ್ತೆ ತಡೆ: ಮುಧೋಳ ಪಿಐ ಆನಂದರಾವ ಅಮಾನತ್ತು ಖಂಡಿಸಿ ಇದಕ್ಕೆ ಕಾರಣರಾದ ಎಸ್ಪಿ ಮತ್ತು ಡಿಎಸ್ಪಿ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ನೇತೃತ್ವದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಲಾಗುತ್ತಿದೆ. ಟೈರಗೆ ಬೆಂಕಿ ಹಚ್ಚಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರಂತರ ಎರಡು ಗಂಟೆಗಳಿಂದ ರಾಜ್ಯ ಹೆದ್ದಾರಿ ಬಂದ್ ಮಾಡಲಾಗಿದೆ.
ಈ ವೇಳೆ ಅಧಿಕಾರಿಗಳ ಮೇಲೆ ಡಾ. ಶರಣಪ್ರಕಾಶ ಪಾಟೀಲ ದಬ್ಬಾಳಿಕೆ ನಡೆಸುತ್ತಿದ್ದಾರೆ. ತಪ್ಪು ಮಾಹಿತಿ ನೀಡಿದ ಪಿಐ ಆನಂದರಾವ ಅಮಾನತು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.