Advertisement

ಕಾಂಗ್ರೆಸ್‌ ಭದ್ರಕೋಟೆ ಛಿದ್ರಗೊಳಿಸಿದ ಬಿಜೆಪಿ

10:28 PM Feb 02, 2023 | Team Udayavani |

ಬಾಗಲಕೋಟೆ: ವಿಶ್ವಗುರು ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದಿಂದ ಬಸವನಾಡು ಎಂಬ ಖ್ಯಾತಿ ಪಡೆದರೆ, ಆಲಮಟ್ಟಿ ಜಲಾಶಯದಿಂದ ಆವರಿಸಿದ ಹಿನ್ನೀರಿನಿಂದ ಮುಳುಗಡೆಗೊಂಡು ಮುಳುಗಡೆ ಜಿಲ್ಲೆ ಎಂಬ ಹಣೆಪಟ್ಟಿಯೂ ಈ ಜಿಲ್ಲೆ ಕಟ್ಟಿಕೊಂಡಿದೆ. ಇದೆಲ್ಲದರ ನಡುವೆ ರಾಜಕೀಯ ಕ್ಷೇತ್ರದಲ್ಲಿ  ಸದಾ ಗಮನ ಸೆಳೆಯುವ ವೈಶಿಷ್ಟ್ಯತೆ ಮೆರೆದಿದೆ. ಅದಕ್ಕೆ ಕಾರಣ ಹಲವು.

Advertisement

ನಾಡಿನ ಮುಖ್ಯಮಂತ್ರಿ, ದೇಶಕ್ಕೆ ರಾಷ್ಟ್ರಪತಿ (ಹಂಗಾಮಿ)ಯಾಗಿದ್ದ ಬಿ.ಡಿ. ಜತ್ತಿ ಅವರನ್ನು ಜಮಖಂಡಿ ಕ್ಷೇತ್ರ ನೀಡಿದ್ದರೆ; ರಾಜಕೀಯ ಲೆಕ್ಕಾಚಾರದ ಲಾಭ-ನಷ್ಟಗಳ ಮಧ್ಯೆಯೇ ಹುನಗುಂದ ಕ್ಷೇತ್ರದ ಎಸ್‌.ಆರ್‌. ಕಂಠಿ ಅವರಿಗೂ ನಾಡಿನ ಸಿಎಂ ಆಗುವ ಯೋಗ ಒಲಿದು ಬಂದಿತ್ತು. ರಾಮಕೃಷ್ಣ ಹೆಗಡೆ ಅವರನ್ನು ಸಿಎಂ ಆಗಿದ್ದಾಗಲೇ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದ, ಬ್ಯಾರೇಜ್‌ ಹೀರೋಗೆ ಜಯಕಾರ ಹಾಕಿದ ಈ ಬಸವನಾಡು, ಕಷ್ಟದಲ್ಲಿ ಬಂದಿದ್ದ ಸಿದ್ದರಾಮಯ್ಯ ಅವರಿಗೆ ರಾಜಕೀಯ ಪುರ್ನಜನ್ಮ ನೀಡಿದ ಪರೋಪಕಾರಿ ಜಿಲ್ಲೆಯೂ ಹೌದು.

1983ರವರೆಗೂ ಜಿಲ್ಲೆಯ ಏಳೂ ಕ್ಷೇತ್ರಗಳು ಕಾಂಗ್ರೆಸ್‌ನ ಭದ್ರನೆಲೆ. ಬಳಿಕ ಅಲ್ಲಲ್ಲಿ ಜೆಎನ್‌ಪಿ (ಜನತಾ ಪಾರ್ಟಿ) ಹಿಡಿತ ಸಾಧಿಸಲು ಹವಣಿಸಿತು. 1983 ಮತ್ತು 1985ರ ವಿಧಾನಸಭೆ ಚುನಾವಣೆಗಳಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ, ಐದರಲ್ಲಿ ಜೆಎನ್‌ಪಿ ಗೆದ್ದಿತ್ತು. ಕ್ರಮೇಣ ಬಿಜೆಪಿಯತ್ತ ವಾಲಿದ ಮತದಾರರು, 2004ರ ಹೊತ್ತಿಗೆ ಕೇಸರಿ ಪಕ್ಷ ಸಂಪೂರ್ಣ ಅರಳಲು ಕಾರಣರಾದರು. ಜಿಲ್ಲೆಯ  ಮೊದಲ ಬಿಜೆಪಿ ಶಾಸಕ ಎಂಬ ಖ್ಯಾತಿ ಗುಳೇದಗುಡ್ಡದಿಂದ 1983ರಲ್ಲಿ ಆಯ್ಕೆಯಾಗಿದ್ದ ಮಲ್ಲಿಕಾರ್ಜುನ ಬನ್ನಿ ಅವರದ್ದು.  ಲಿಂಗಾಯಿತರೇ ಪ್ರಬಲರಾಗಿರುವ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ, ಮುಧೋಳ ಮೀಸಲು ಕ್ಷೇತ್ರವಾಗಿದೆ. 2008ರಲ್ಲಿ ನಡೆದ ಕ್ಷೇತ್ರ ಪುನರ್‌ವಿಂಗಡಣೆಯ ಬಳಿಕ ಗುಳೇದಗುಡ್ಡ ಕ್ಷೇತ್ರ ಮಾಯವಾಗಿ, ತೇರದಾಳ ಅಸ್ತಿತ್ವಕ್ಕೆ ಬಂದಿದೆ. ಸ್ವಾತಂತ್ರ್ಯ ಬಳಿಕ ಇದ್ದ ಜಿಲ್ಲೆಯ ವಿಧಾನಸಭೆ ಮತಕ್ಷೇತ್ರಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕ್ಷೇತ್ರದ ಹೆಸರು ಬದಲಾದರೂ, ಸಂಖ್ಯೆಯಲ್ಲಿ ಯಥಾವತ್ತಾಗಿ ಮುನ್ನಡೆದಿವೆ.

ಬಾಗಲಕೋಟೆ :

ಬಸವನಾಡಿನ ಜಿಲ್ಲಾ ಕೇಂದ್ರವಾದ ಬಾಗಲಕೋಟೆ ಕ್ಷೇತ್ರದಲ್ಲಿ ಈವರೆಗೆ 15 ವಿಧಾನಸಭೆ (ಒಂದು ಉಪ ಚುನಾವಣೆ) ನಡೆದಿವೆ. ಈ ಕ್ಷೇತ್ರದಲ್ಲಿ ರಡ್ಡಿ ಸಮುದಾಯದ ಪ್ರಾಬಲ್ಯಕ್ಕೆ ಬ್ರೇಕ್‌ ಹಾಕಿ, ಜಂಗಮ ಸಮಾಜದ ವಶಕ್ಕೆ ಪಡೆ ಖ್ಯಾತಿ ಹಾಲಿ ಶಾಸಕ ಡಾ| ವೀರಣ್ಣ ಚರಂತಿಮಠ ಅವರದ್ದು. ಹಾಗೆಯೇ ಸತತ 33 ವರ್ಷಗಳ ಕಾಲ ಸೋಲುತ್ತಲೇ ಬಂದಿದ್ದ ಕಾಂಗ್ರೆಸ್‌ಗೆ ಗೆಲುವು ತಂದುಕೊಟ್ಟ ಹೆಗ್ಗಳಿಕೆ ಮಾಜಿ ಸಚಿವ ಎಚ್‌.ವೈ. ಮೇಟಿಗಿದೆ. 1957 ಮತ್ತು 1962ರಲ್ಲಿ ಬಿ.ಟಿ. ಮುರನಾಳ ಇಲ್ಲಿಂದ ಗೆದ್ದಿದ್ದರು. 1962ರಲ್ಲಿ ಕಾಂಗ್ರೆಸ್‌ 150 ಸ್ಥಾನ ಗೆದ್ದರೂ ಸಿಎಂ ಆಗಬೇಕಿದ್ದ ಎಸ್‌. ನಿಜಲಿಂಗಪ್ಪ ಸೋತಿದ್ದರು. ಆಗ ಮುರನಾಳ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಆ ವರ್ಷ ನಡೆದ ಉಪ ಚುನಾವಣೆಯಲ್ಲಿ ನಿಜಲಿಂಗಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಮುರನಾಳ ಅವರನ್ನು ಎಂಎಲ್‌ಸಿ ಮಾಡಲಾಗಿತ್ತು. 1967ರಲ್ಲಿ ಕಾಂಗ್ರೆಸ್‌ನ ಎಂ.ಬಿ. ತಮ್ಮಣ್ಣ, 1972ರಲ್ಲಿ ಮತ್ತೆ ಬಿ.ಟಿ. ಮುರನಾಳ ಗೆದ್ದರು. 1978ರಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಪರಪ್ಪ ಕಳ್ಳಿಗುಡ್ಡ ಆಯ್ಕೆಗೊಂಡರು. ಜಿ.ವಿ. ಮಂಟೂರರು 1983ರಲ್ಲಿ ಪಕ್ಷೇತರ ಹಾಗೂ 1985ರಲ್ಲಿ  ಜನತಾದಳದಿಂದ ಗೆದ್ದಿದ್ದರು. 1989, 1994, 1998ರಲ್ಲಿ ಜನತಾದಳದ ಅಜಯಕುಮಾರ ಸರನಾಯಕ ಗೆದ್ದಿದ್ದರು. ಆಗ ದೇವೇಗೌಡರು ಮತ್ತು ರಾಮಕೃಷ್ಣ ಹೆಗಡೆ ಮಧ್ಯೆ ಭಿನ್ನಾಭಿಪ್ರಾಯದಿಂದ ಜನತಾದಳ ಇಬ್ಭಾಗವಾದಾಗ, ಸರ ನಾಯಕರು ಸಚಿವ-ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಲೋಕಜನಶಕ್ತಿ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದರು. ಆಗ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಪಿ.ಎಚ್‌.ಪೂಜಾರ ಮೊದಲ ಬಾರಿಗೆ ಗೆದ್ದು, ಕಮಲ ಅರಳಿಸಿದ್ದರು. 1999ರ ಚುನಾವಣೆಯಲ್ಲೂ ಅವರೇ ಜಯಗಳಿಸಿದರು. ಈ ಕ್ಷೇತ್ರದಲ್ಲಿ ಈವರೆಗೆ ನಡೆದ 15 ಚುನಾವಣೆಗಳಲ್ಲಿ ಏಳು ಬಾರಿ ಕಾಂಗ್ರೆಸ್‌, ಎರಡು ಬಾರಿ ಜನತಾದಳ ಮತ್ತು ನಾಲ್ಕು ಬಾರಿ ಬಿಜೆಪಿ ಆಯ್ಕೆಯಾಗಿದೆ. ಒಂದು ಬಾರಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ.

Advertisement

 ಹುನಗುಂದ :

ರಾಜ್ಯದ ಹಂಗಾಮಿ ಸಿಎಂ ಆಗಿದ್ದ ಎಸ್‌.ಆರ್‌. ಕಂಠಿ ಅವರು 1967ರ ವರೆಗೆ ಪ್ರತಿನಿಧಿಸಿದ ಕ್ಷೇತ್ರವಿದು. ಬಳಿಕ 1967ರಲ್ಲಿ ಕಾಂಗ್ರೆಸ್‌ನಿಂದ ಕೆ.ಎಸ್‌. ರುದ್ರಪ್ಪ ಇಲ್ಲಿಂದ ಆಯ್ಕೆಯಾಗಿದ್ದರು. 1972ರಲ್ಲಿ ಎಸ್‌.ಬಿ. ನಾಗರಾಳ ಇಲ್ಲಿಂದ ಗೆದ್ದಿದ್ದರು. 1978ರಲ್ಲಿ ಎಸ್‌.ಎಸ್‌. ಕವಿಶೆಟ್ಟಿ ಆಯ್ಕೆಯಾದರೆ, 1983 ಮತ್ತು 1985ರಲ್ಲಿ ಎಸ್‌.ಎಸ್‌. ಕಡಪಟ್ಟಿ ಎರಡು ಬಾರಿ ಆಯ್ಕೆಯಾಗಿದ್ದರು. ಮುಂದೆ 1989ರಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಎಸ್‌.ಆರ್‌. ಕಾಶಪ್ಪನವರ  1994, 1999ರಿಂದ 2002ರ ವರೆಗೂ ಸತತವಾಗಿ ನಾಲ್ಕು ಬಾರಿ ಆಯ್ಕೆಯಾಗಿದ್ದರು. ಕಾಶಪ್ಪನವರ ಅಕಾಲಿಕ ನಿಧನದ ಬಳಿಕ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ ಗೌರಮ್ಮ ಕಾಶಪ್ಪನವರ ಗೆದ್ದಿದ್ದರು. ಮುಂದೆ 2004ರ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ದೊಡ್ಡನಗೌಡ ಪಾಟೀಲ ಇಲ್ಲಿಂದ ಗೆದ್ದರು. ಅವರೂ ಸತತ ಎರಡು ಬಾರಿ ಗೆದ್ದು, 2013ರಲ್ಲಿ ನಡೆದ ಚುನಾವಣೆಯಲ್ಲಿ ವಿಜಯಾನಂದ ಕಾಶಪ್ಪನವರ ಎದುರು ಸೋತಿದ್ದರು. ಮುಂದೆ 2018ರಲ್ಲಿ ಪುನಃ ದೊಡ್ಡನಗೌಡರು ಗೆದ್ದು, ಸದ್ಯ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಇಲ್ಲಿಯವರೆಗೆ ನಡೆದ 14 ಸಾರ್ವತ್ರಿಕ, ಒಂದು ಉಪ ಚುನಾವಣೆ ಸೇರಿ ಒಟ್ಟು 15 ಚುನಾವಣೆಯಲ್ಲಿ 10 ಬಾರಿ ಕಾಂಗ್ರೆಸ್‌ ಗೆದ್ದರೆ, ಎರಡು ಬಾರಿ ಜನತಾದಳ ಗೆದ್ದಿದೆ. ಬಿಜೆಪಿ ಮೂರು ಬಾರಿ ಗೆಲುವು ಸಾಧಿಸಿದೆ.

ಬಾದಾಮಿ :

ಲಿಂಗಾಯತ, ವಾಲ್ಮೀಕಿ ಹಾಗೂ ಕುರುಬ ಸಮಾಜದ ಸಮಾನ ಮತಗಳಿರುವ ಈ ಕ್ಷೇತ್ರ, ಚಾಲುಕ್ಯರ ನಾಡು ಎಂಬ ಖ್ಯಾತಿ ಪಡೆದಿದೆ. ಹಿಂದೆ ಅಸ್ತಿತ್ವದಲ್ಲಿದ್ದ ಗುಳೇದಗುಡ್ಡ ಕ್ಷೇತ್ರ, ಈಗ ಬಾದಾಮಿ ಕ್ಷೇತ್ರದಲ್ಲಿ ವಿಲೀನವಾಗಿದೆ. ಕಳೆದ 2018ರ ಚುನಾವಣೆಯಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತೀ ಕಡಿಮೆ ಮತಗಳ ಅಂತರದಿಂದ ಗೆಲ್ಲಿಸಿ, ರಾಜಕೀಯ ಪುನರ್‌ಜನ್ಮ ನೀಡಿದ ಖ್ಯಾತಿ ಬಾದಾಮಿಗಿದೆ. ಇಲ್ಲಿ  ಚಿಮ್ಮನಕಟ್ಟಿ, ಪಟ್ಟಣಶೆಟ್ಟಿ ಕುಟುಂಬದವರು ಅತೀ ಹೆಚ್ಚು ಬಾರಿ ಕ್ಷೇತ್ರ ಪ್ರತಿನಿಧಿಸಿದ ಖ್ಯಾತಿ ಪಡೆದಿದ್ದಾರೆ. ಒಟ್ಟು 14 ಚುನಾವಣೆಯಲ್ಲಿ 10 ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸಿದರೆ, 1957ರಿಂದ 1983ರ ಸತತವಾಗಿ ಗೆದ್ದು ತನ್ನ ಭದ್ರಕೋಟೆ ಎನಿಸಿಕೊಂಡಿದ್ದ ಕಾಂಗ್ರೆಸ್‌ಗೆ ಆಘಾತ ನೀಡಿದ್ದು 1985ರಲ್ಲಿ ಜೆಎನ್‌ಪಿಯಿಂದ ಗೆದ್ದ ಆರ್‌.ಟಿ. ದೇಸಾಯಿ. ಮುಂದೆ 1989ರಲ್ಲಿ ನಡೆದ ಚುನಾವಣೆಯಲ್ಲಿ ಜನತಾದಳದಿಂದ ಎಂ.ಕೆ. ಪಟ್ಟಣಶೆಟ್ಟಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಇಲ್ಲಿ ಬಿಜೆಪಿ ಎರಡು ಬಾರಿ ಮಾತ್ರ ಗೆದ್ದಿದೆ.

ತೇರದಾಳ :

ಸ್ವತಂತ್ರಪೂರ್ವ ಮತ್ತು ಸ್ವತಂತ್ರ್ಯ ಬಳಿಕ 2008ರವರೆಗೆ ಅಸ್ತಿತ್ವವೇ ಇಲ್ಲದ ತೇರದಾಳ, ಕ್ಷೇತ್ರ ಪುನರ್‌ವಿಂಗಡಣೆಯ ಬಳಿಕ ಹೊಸದಾಗಿ ಉದಯವಾಗಿದೆ. ಅದಕ್ಕೂ ಮೊದಲು ಅಸ್ತಿತ್ವದಲ್ಲಿದ್ದ ಗುಳೇದಗುಡ್ಡ ಕ್ಷೇತ್ರದಲ್ಲಿ ಒಟ್ಟು 11 ವಿಧಾಸನಭೆ ಚುನಾವಣೆ ನಡೆದಿದ್ದು,  ಏಳು ಬಾರಿ ಕಾಂಗ್ರೆಸ್‌ ಗೆದ್ದಿದೆ. ಮತ್ತೂಂದು ವಿಶೇಷವೆಂದರೆ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷಕ್ಕೆ ಗೆಲುವು ನೀಡಿದ್ದು ಈ ಗುಳೇದಗುಡ್ಡ. ಇಲ್ಲಿಂದ 1983ರಲ್ಲಿ ಮಲ್ಲಿಕಾರ್ಜುನ ಬನ್ನಿ ಅವರು ಮೊದಲ ಬಾರಿಗೆ ಶಾಸಕರಾಗಿದ್ದರು. ಇನ್ನು 1994ರಲ್ಲಿ ಇಲ್ಲಿಂದ ಜನತಾ ದಳ ಶಾಸಕರಾಗಿ, ಕೃಷಿ ಸಚಿವರಾಗಿದ್ದ ಎಚ್‌.ವೈ. ಮೇಟಿ ರಾಜೀನಾಮೆ ನೀಡಿ ಲೋಕಸಭೆಗೆ ಸ್ಪರ್ಧೆ ಮಾಡಿ ಆಯ್ಕೆಯಾಗಿದ್ದರು. ಬಳಿಕ 1994ರಿಂದ 2008ರ ಅವಧಿಯಲ್ಲಿ ನಡೆದ ಮೂರು ಚುನಾವಣೆಯಲ್ಲಿ ಒಂದು ಬಾರಿ ಕಾಂಗ್ರೆಸ್‌, 2004ರಲ್ಲಿ ಜೆಡಿಎಸ್‌ ಗೆದ್ದಿದೆ. ಅಲ್ಲಿಂದ ಗುಳೇದಗುಡ್ಡ ಕ್ಷೇತ್ರ, ಬಾದಾಮಿಗೆ ವಿಲೀನಗೊಂಡು, ಜಮಖಂಡಿ ತಾಲೂಕಿನ ಹೋಬಳಿ ಕೇಂದ್ರ ತೇರದಾಳ, ಹೊಸ ಕ್ಷೇತ್ರವಾಗಿ ಉದಯವಾಗಿದೆ. ಹೊಸ ಕ್ಷೇತ್ರಕ್ಕೆ 2008ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಗೆದ್ದಿದ್ದು ಬಿಜೆಪಿಯ ಸಿದ್ದು ಸವದಿ. ಬಳಿಕ 2013ರಲ್ಲಿ ಕಾಂಗ್ರೆಸ್‌ನಿಂದ ನಟಿ ಉಮಾಶ್ರೀ ಇಲ್ಲಿ ಗೆದ್ದು ಸಚಿವರೂ ಆಗಿದ್ದರು. ಮುಂದೆ 2018ರಲ್ಲಿ ಬಿಜೆಪಿಯಿಂದ ಸಿದ್ದು ಸವದಿ ಪುನಃ ಗೆದ್ದಿದ್ದಾರೆ.

ಮುಧೋಳ :

ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಿದು. ಇಲ್ಲಿಯವರೆಗೆ ನಡೆದ 14 ಚುನಾವಣೆಯಲ್ಲಿ ಅರ್ಧ ಪಾಲು ಕಾಂಗ್ರೆಸ್‌ ಗೆದ್ದರೆ, ಇನ್ನರ್ಧ ಜನತಾ ಪರಿವಾರ, ಬಿಜೆಪಿ ಗೆಲ್ಲುತ್ತ ಬಂದಿದೆ. ಕಳೆದ 2004ರಿಂದ ಇಲ್ಲಿಯವರೆಗೆ ಸತತ ಬಿಜೆಪಿಯ ಗೋವಿಂದ ಕಾರಜೋಳ ಗೆಲ್ಲುತ್ತ ಬಂದಿದ್ದಾರೆ. ಕಾಂಗ್ರೆಸ್‌ನಿಂದ 1957ರಲ್ಲಿ ಹೀರಾಲಾಲ ಶಹಾ, 1962ರಲ್ಲಿ ನಿಂಗಪ್ಪ ಕಲ್ಲಪ್ಪ ನಾಯ್ಕ, 1967 ಮತ್ತು 1972ರಲ್ಲಿ ಎನ್‌.ಕೆ. ಪಾಂಡಪ್ಪ, 1978ರಲ್ಲಿ ಕಾಳೆಜಯವಂತ ಹಾದಿಮನಿ, 1983ರಲ್ಲಿ ಅಶೋಕ ಕಟ್ಟಿಮನಿ ಅವರು ಕಾಂಗ್ರೆಸ್‌ನಿಂದ ಗೆದ್ದಿದ್ದರು. 1985ರಲ್ಲಿ ಮೊದಲ ಬಾರಿಗೆ ಕ್ಷೇತ್ರ ಜನತಾದಳಕ್ಕೆ ಒಲಿದಿದ್ದು, ಆಗ ಬಿ.ಜಿ. ಜಮಖಂಡಿ ಗೆದ್ದಿದರು. 1989ರಲ್ಲಿ ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಆರ್‌.ಬಿ. ತಿಮ್ಮಾಪುರ ಗೆಲ್ಲುವ ಮೂಲಕ ಅತೀ ಚಿಕ್ಕ ವಯಸ್ಸಿನಲ್ಲೇ ಶಾಸಕರಾದ ಖ್ಯಾತಿ ಪಡೆದರು. ಮುಂದೆ 1994ರಲ್ಲಿ ನಡೆದ ಚುನಾವಣೆಯಲ್ಲಿ ಜನತಾದಳದಿಂದ ಗೋವಿಂದ ಕಾರಜೋಳ ಮೊದಲ ಬಾರಿಗೆ ಗೆದ್ದರು. ಬಳಿಕ ಒಂದು ಬಾರಿ ತಿಮ್ಮಾಪುರ, ಮತ್ತೂಂದು ಬಾರಿ ಕಾರಜೋಳ ಗೆದ್ದಿದ್ದು, 2004ರ ಬಳಿಕ ಇಡೀ ಕ್ಷೇತ್ರದ ಜನ ಕಾರಜೋಳರ ಕೈಬಿಟ್ಟಿಲ್ಲ.  ಸತತ ನಾಲ್ಕು ಬಾರಿ ಗೆದ್ದ ಖ್ಯಾತಿ ಅವರದ್ದು.

ಬೀಳಗಿ :
ಆಲಮಟ್ಟಿ ಜಲಾಶಯದಿಂದ ಅತೀ ಹೆಚ್ಚು ಹಳ್ಳಿಗಳು ಮುಳುಗಡೆಯಾದ ಕ್ಷೇತ್ರವಿದು. ಕ್ಷೇತ್ರ ಪುನರ್‌ವಿಂಗಡಣೆಗೂ ಮುಂಚೆ ಜಮಖಂಡಿ ತಾಲೂಕಿನ 33 ಹಳ್ಳಿಗಳು ಇದರಲ್ಲಿದ್ದವು. 2008ರ ಬಳಿಕ ಮೂರು ತಾಲೂಕು, 140ಕ್ಕೂ ಹೆಚ್ಚು ಹಳ್ಳಿ ಹೊಂದಿರುವ ಜಿಲ್ಲೆಯ ಅತೀದೊಡ್ಡ ಕ್ಷೇತ್ರವಾಗಿದೆ. ಇಲ್ಲಿಯೂ ಬಹುಪಾಲು ರಡ್ಡಿ ಸಮುದಾಯದ ಪ್ರಾಬಲ್ಯವೇ ಇತ್ತು. ಅದನ್ನು ಭೇದಿಸಿ, 1989ರಲ್ಲಿ ರಡ್ಡಿಯೇತರ ಲಿಂಗಾಯತ ಗಾಣಿಗ ಸಮುದಾಯದ ಜಿ.ಜಿ. ಯಳ್ಳಿಗುತ್ತಿ (ಜನತಾ ದಳದಿಂದ) ಇಲ್ಲಿಂದ ಆಯ್ಕೆಯಾಗಿದ್ದರು. ಈವರೆಗೆ ನಡೆದ ಒಟ್ಟು 14 ಚುನಾವಣೆಗಳಲ್ಲಿ 9 ಬಾರಿ ಕಾಂಗ್ರೆಸ್‌ ಗೆದ್ದರೆ, ಎರಡು ಬಾರಿ ಜನತಾ ದಳ ಗೆದ್ದಿದೆ. 1957ರಿಂದ 1999ರವರೆಗೆ ಎರಡು ಬಾರಿ ಮಾತ್ರ ಜನತಾ ದಳ, ಉಳಿದ ಅವಧಿಗೆ ಕಾಂಗ್ರೆಸ್‌ ಗೆಲ್ಲುತ್ತಲೇ ಬಂದಿದೆ. 1994 ಮತ್ತು 1999ರಲ್ಲಿ ಜೆ.ಟಿ. ಪಾಟೀಲರು ಗೆದ್ದಿದ್ದರು. 2004ರಲ್ಲಿ ಮೊದಲ ಬಾರಿಗೆ ಬಿಜೆಪಿ ಅರಳಿಸಿದ ಖ್ಯಾತಿ ಮುರುಗೇಶ ನಿರಾಣಿ ಅವರಿಗಿದೆ. ಅಲ್ಲಿಂದ 2013ರ ಚುನಾವಣೆವರೆಗೆ ಸತತ ಎರಡು ಬಾರಿ ಗೆದ್ದಿದ್ದ ನಿರಾಣಿ, 2013ರಲ್ಲಿ ಮತ್ತೆ ಜೆ.ಟಿ. ಪಾಟೀಲರ ಎದುರು ಸೋತಿದ್ದರು. ಪುನಃ 2018ರಲ್ಲಿ ನಿರಾಣಿ ಬಿಜೆಪಿಯಿಂದ ಗೆದ್ದಿದ್ದಾರೆ.

ಜಮಖಂಡಿ :
ದೇಶಕ್ಕೆ ಹಂಗಾಮಿ ರಾಷ್ಟ್ರಪತಿ, ಎರಡು ಬಾರಿ ನಾಡಿಗೆ ಮುಖ್ಯಮಂತ್ರಿಗಳನ್ನು ನೀಡಿದ ಕ್ಷೇತ್ರವಿದು. ಕೃಷ್ಣೆಯ ಮಡಿಲಿಗೆ ರೈತರೇ ಶ್ರಮದಾನದ ಮೂಲಕ ಬ್ಯಾರೇಜ್‌ ಕಟ್ಟಿದ ಖ್ಯಾತಿಯೂ ಈ ಕ್ಷೇತ್ರಕ್ಕಿದೆ. 1967ರ ಚುನಾವಣೆವರೆಗೂ ಬಿ.ಡಿ. ಜತ್ತಿ ಅವರು ಈ ಕ್ಷೇತ್ರ ಪ್ರತಿನಿಧಿಸಿದ್ದರು. ಜಮಖಂಡಿ ಮುಂಬಯಿ ಪ್ರಾಂತ್ಯದಲ್ಲಿದ್ದಾ ಗ, ಮುಂಬಯಿ ಸರಕಾರದಲ್ಲೂ ಪ್ರಬಲ ಖಾತೆ ನಿರ್ವಹಿಸಿದ ಖ್ಯಾತಿ ಜತ್ತಿ ಅವರಿಗಿದೆ. 1972ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಪಿ.ಎಂ. ಬಂಡಿ, 1978ರಲ್ಲಿ ವಿ.ವಿ. ಪತ್ತಾರ ಅವರು ಕಾಂಗ್ರೆಸ್‌ನಿಂದ ಗೆದ್ದರೆ; 1983, 1985ರಲ್ಲಿ ಜನತಾ ದಳದಿಂದ ಜಿ.ಎಸ್‌. ಬಾಗಲಕೋಟ ಗೆದ್ದರು. ಮುಂದೆ 1989 ಮತ್ತು 1994, 1999ರವರೆಗೆ ಸತತ ಮೂರು ಬಾರಿ ಕಾಂಗ್ರೆಸ್‌ನಿಂದ ಆರ್‌.ಎಂ. ಕಲೂತಿ ಆಯ್ಕೆಗೊಂಡಿದ್ದರು. 2004ರಲ್ಲಿ ಮೊದಲ ಬಾರಿಗೆ ಇಲ್ಲಿ ಬಿಜೆಪಿ ಗೆದ್ದಿದ್ದು, ಕಾಂಗ್ರೆಸ್‌ನ ಹ್ಯಾಟ್ರಿಕ್‌ ಸಾಧನೆಯನ್ನು ಸಿದ್ದು ಸವದಿ ಮುರಿದಿದ್ದರು. ಬಳಿಕ 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯಾದಾಗ ಇದೇ ತಾಲೂಕಿನಲ್ಲಿ ತೇರದಾಳ ಹೊಸ ಕ್ಷೇತ್ರ ಉದಯವಾಯಿತು. ಹೀಗಾಗಿ ಹಾಲಿ ಶಾಸಕ ಸಿದ್ದು ಸವದಿ ತೇರದಾಳಕ್ಕೆ ಹೋದರೆ, ಬಿಜೆಪಿಯಿಂದ ಶ್ರೀಕಾಂತ ಕುಲಕರ್ಣಿ ಗೆದ್ದಿದ್ದರು. ಅಲ್ಲಿಂದ 2013, 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಿದ್ದು ನ್ಯಾಮಗೌಡ ಗೆದ್ದಿದ್ದರು. 2019ರಲ್ಲಿ ಸಿದ್ದು ನ್ಯಾಮಗೌಡರ ಅಕಾಲಿಕ ನಿಧನದಿಂದ ತೆರ ವಾದ ಕ್ಷೇತ್ರವನ್ನು ಅವರ ಪುತ್ರ ಆನಂದ ನ್ಯಾಮಗೌಡ ಪ್ರತಿನಿಧಿಸುತ್ತಿದ್ದಾರೆ.

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next