Advertisement

ಎಪಿಎಂಸಿ ಅಧಿಕಾರ ಹಿಡಿಯಲು ಕಾಂಗ್ರೆಸ್‌-ಬಿಜೆಪಿ ಯತ್ನ

03:18 PM Mar 14, 2017 | Team Udayavani |

ಹುಬ್ಬಳ್ಳಿ: ಇಲ್ಲಿನ ಅಮರಗೋಳದ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನು ತಮ್ಮ ಕಪಿಮುಷ್ಠಿಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ತೀವ್ರ ಪ್ರಯತ್ನ ನಡೆಸಿದ್ದಾರೆ. ಅಂತಿಮವಾಗಿ ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆಂಬುದು ತೀವ್ರ ಕುತೂಹಲ ಕೆರಳಿಸಿದೆ. 

Advertisement

ಎಪಿಎಂಸಿ ಅಧಿಕಾರದ ಚುಕ್ಕಾಣಿಹಿಡಿಯಲೇಬೇಕೆಂದು ಕಾಂಗ್ರೆಸ್‌ ಹಾಗೂ ಬಿಜೆಪಿಯ ಮುಖಂಡರು ಶತಾಯಗತಾಯ ಪ್ರಯತ್ನಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ಇತ್ತೀಚೆಗೆ ಸಭೆ ನಡೆಸಿ ತಮಗೆ ಬೆಂಬಲ ನೀಡಬೇಕೆಂದು ಜೆಡಿಎಸ್‌ ಬೆಂಬಲಿತ ಹಾಗೂ ಪಕ್ಷಾತೀತವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂಪರ್ಕ ಮಾಡಿದ್ದಾರೆ.

ಈ ವೇಳೆ ಪಕ್ಷಾತೀತ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನ ತಮಗೆ ಕೊಡಬೇಕೆಂದುಹೇಳಿದ್ದಾರೆಂದು ತಿಳಿದು ಬಂದಿದೆ. ಇತ್ತ ಬಿಜೆಪಿ ಮುಖಂಡರು ಸಹಿತ ಅಧಿಕಾರ ಹಿಡಿಯಲು ಪ್ರಯತ್ನ ನಡೆಸಿದ್ದು, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರಹಾಗೂ ಶಂಕರಣ್ಣ ಮುನವಳ್ಳಿ ಅವರಿಗೆ ಅದರ ಜವಾಬ್ದಾರಿ ವಹಿಸಿದ್ದಾರೆ. ಅವರು ಸಹಿತ ಪಕ್ಷಾತೀತ ಅಭ್ಯರ್ಥಿಗಳನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

ಆದರೆ ಪಕ್ಷಾತೀತರು ಮಾತ್ರ ಮೊದಲ ಅವಧಿಗೆ ಅಧ್ಯಕ್ಷ ಸ್ಥಾನ ತಮಗೆಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ. ಪಕ್ಷಾತೀತವಾಗಿ ಆಯ್ಕೆಯಾದವರು ಸಹಿತ ಪಕ್ಷಾತೀತವಾಗಿಯೇ ಆಡಳಿತ ನಡೆಸೋಣ ಎಂಬ ಅಭಿಪ್ರಾಯ ಹೊಂದಿದ್ದಾರೆಂದು ತಿಳಿದು ಬಂದಿದೆ. ಸೋಮವಾರ ರಾತ್ರಿಯ ವರೆಗೂ ಪಕ್ಷಾತೀತರನ್ನು ಸೆಳೆಯುವಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯವರು ನಡೆಸಿದ ಪ್ರಯತ್ನಗಳಲ್ಲಿ ಯಾವುದೇ ಫಲಪ್ರದ ಕಂಡುಬಂದಿಲ್ಲ.

ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಪಿ.ಸಿ. ಸಿದ್ದನಗೌಡ್ರ ಅವರ ಮಗ ಜಗನ್ನಾಥಗೌಡ್ರ ಹೆಸರು ಬಲವಾಗಿ ಕೇಳಿಬರುತ್ತಿದೆ. ಜೊತೆಗೆ ಈಶ್ವರಪ್ಪ ಕಿತ್ತೂರ ಹಾಗೂ ಸುರೇಶ ಕಿರೇಸೂರ ಈ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಇನ್ನು ಬಿಜೆಪಿಯಲ್ಲಿ ಶಂಕರಪ್ಪ ಬಿಜವಾಡ, ರಾಮಚಂದ್ರ ಜಾಧವ ಹೆಸರು ಕೇಳಿಬರುತ್ತಿದೆ.

Advertisement

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿಯೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕಸರತ್ತುಗಳ ಬಲುಜೋರಾಗಿದ್ದು, ಮಂಗಳವಾರ ನಡೆಯಲಿರುವ ಚುನಾವಣೆಯಲ್ಲಿ ಯಾರು ಎಪಿಎಂಸಿಯ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬುದು ಸಂಜೆಯೊಳಗೆ ಸ್ಪಷ್ಟವಾಗಲಿದೆ. ಒಟ್ಟು 14 ಸದಸ್ಯ ಬಲದ ಎಪಿಎಂಸಿಯಲ್ಲಿ 12 ಸದಸ್ಯರು ಚುನಾವಣೆ ಮೂಲಕ ಆರಿಸಿ ಬಂದಿದ್ದಾರೆ.

ಸಹಕಾರಿ ಸಂಘಗಳ ಎರಡು ಕ್ಷೇತ್ರಗಳಿಗೆ ಅವಿರೋಧ ಆಯ್ಕೆಯಾಗಿದ್ದಾರೆ. ರಾಜ್ಯ ಸರಕಾರವು ಮೂವರನ್ನು ನಾಮನಿರ್ದೇಶನ ಮಾಡಿದೆ. ಒಟ್ಟು 17 ಸದಸ್ಯ ಬಲ ಹೊಂದಿರುವ ಎಪಿಎಂಸಿಯಲ್ಲಿ ಅಧ್ಯಕ್ಷರಆಯ್ಕೆಗೆ 9 ಸದಸ್ಯರ ಬೆಂಬಲ ಬೇಕಾಗುತ್ತದೆ. ಆಯ್ಕೆಯಾದ 14 ಸದಸ್ಯರಲ್ಲಿ ಐವರು ಬಿಜೆಪಿ ಬೆಂಬಲಿತರು, ಐವರು ಪಕ್ಷಾತೀತರು, ಮೂವರು ಕಾಂಗ್ರೆಸ್‌ ಬೆಂಬಲಿತರು ಹಾಗೂ ಒಬ್ಬರು ಜೆಡಿಎಸ್‌ ಬೆಂಬಲಿತ ಸದಸ್ಯರಿದ್ದಾರೆ.

ಜೊತೆಗೆ ಮೂವರು ಕಾಂಗ್ರೆಸ್‌ ನ ನಾಮನಿರ್ದೇಶಿತ ಸದಸ್ಯರಿದ್ದಾರೆ. 17ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮತ ಚಲಾಯಿಸುವ ಅವಕಾಶ ಹೊಂದಿದ್ದು, ಕೃಷಿ ಕ್ಷೇತ್ರದಿಂದ ಆಯ್ಕೆಯಾದ 11 ಸದಸ್ಯರು ಮಾತ್ರ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next