Advertisement

Congress ಆಕಾಂಕ್ಷಿ ಓಟ, ಬಿಜೆಪಿಯತ್ತ ನೋಟ? ಬಿಜೆಪಿ ಪ್ರಭಾವಿ ಮುಖಂಡರ ಭೇಟಿಯಾದ ಆಕಾಂಕ್ಷಿ

09:28 AM Jun 19, 2024 | Team Udayavani |

ಬಳ್ಳಾರಿ: ಗಣಿನಗರಿ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಸ್ಥಾನದ ಸುದ್ದಿ ಮತ್ತೊಮ್ಮೆ ಸದ್ದು ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷದ ಪ್ರಭಲ ಆಕಾಂಕ್ಷಿಯೊಬ್ಬರು ಬಿಜೆಪಿ ಮುಖಂಡರ ಬಾಗಿಲು ಬಡಿದಿದ್ದಾರೆ ಎಂಬ ಗುಮಾನಿ ಹರಿದಾಡುತ್ತಿದೆ.

Advertisement

ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಕಳೆದ ವರ್ಷದಿಂದ ಹೆಚ್ಚು ಸದ್ದು ಮಾಡುತ್ತಿದೆ. ಕಳೆದ ವರ್ಷ ಒಂದು ವರ್ಷದ ಮೇಯರ್ ಅವಧಿಯನ್ನು ಇಬ್ಬರು ಆಕಾಂಕ್ಷಿಗಳು ತಲಾ ಆರು ತಿಂಗಳು ವಿಭಜಿಸಿಕೊಂಡು ಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು. ವಿಧಾನಸಭೆ ಚುನಾವಣೆಯಿಂದ ಒಬ್ಬರು ಆರು ತಿಂಗಳ ಅವಧಿಯನ್ನು ಪೂರ್ಣಗೊಳಿಸಿದರೆ, ಇನ್ನುಳಿದ ಆರು ತಿಂಗಳ ಅವಧಿಗೆ ಆಕಾಂಕ್ಷಿಗಳ ನಡುವಿನ ಪೈಪೋಟಿಯಿಂದ ಕೊನೆಗೆ ಕೇವಲ ಮೂರು ತಿಂಗಳ ಅವಧಿ ಮಾತ್ರ ದಕ್ಕಿತು. ಆದರೆ, ಲೋಕಸಭೆ ಚುನಾವಣೆ ಇವರ ಹಂಗಾಮಿ ಅವಧಿಯನ್ನು ಇನ್ನಷ್ಟು ಹೆಚ್ಚಲು ಕಾರಣವಾಯಿತು.

ಪಾಲಿಕೆಯ ಮೂರನೇ ಅವಧಿಯಲ್ಲಿಯೂ ಮೇಯರ್ ಸ್ಥಾನಕ್ಕಾಗಿ ಆಕಾಂಕ್ಷಿಗಳ ನಡುವೆ ಪೈಪೋಟಿ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಈಗಾಗಲೇ ಒಮ್ಮೆ ಮೇಯರ್ ಸ್ಥಾನ ಕೈ ತಪ್ಪಿರುವ ಪ್ರಭಲ ಕಾಂಗ್ರೆಸ್ ಮೇಯರ್ ಆಕಾಂಕ್ಷಿಯೊಬ್ಬರು ಬಿಜೆಪಿ ಪ್ರಭಲ ಮುಖಂಡರ ಕದ ತಟ್ಟಿ, ಮೇಯರ್ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಕೋರಿದ್ದಾರೆ ಎಂದು ತಿಳಿದು ಬಂದಿದೆ.

ಪಾಲಿಕೆಯ ಮೂರನೇ ಅವಧಿಯ ಪ್ರಸಕ್ತ ಸಾಲಿನ ಮೇಯರ್ ಸ್ಥಾನ ಸಾಮಾನ್ಯಕ್ಕೆ ಮತ್ತು ಉಪ ಮೇಯರ್ ಸ್ಥಾನ ಓಬಿಸಿಗೆ ಮೀಸಲಾಗಿದೆ. ಮೇಯರ್ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಸಂಖ್ಯೆಯೂ ಜಾಸ್ತಿಯಿದೆ. ಹಾಗಾಗಿ ಈ ಹಿಂದೆಯೇ ಪಾಲಿಕೆಯ ಮೊದಲ ಅವಧಿಯಲ್ಲೇ ಮೇಯರ್ ಸ್ಥಾನ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಈ ಬಾರಿ ಶತಾಯಗತಾಯ ಮೇಯರ್ ಆಗಲೇಬೇಕೆಂದು ಪಟ್ಟುಹಿಡಿರುವ ಅವರು, ಮೇಯರ್ ಆಯ್ಕೆಯಂದು ಒಂದು ವೇಳೆ ಚುನಾವಣೆ ನಡೆದರೆ ಬಿಜೆಪಿ ಸದಸ್ಯರು ತಮ್ಮನ್ನು ಬೆಂಬಲಿಸುವAತೆ ಬಿಜೆಪಿಯ ಪ್ರಭಲ ಮುಖಂಡರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಕುರಿತು ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಅವರನ್ನು ಸಂಪರ್ಕಿಸಿದಾಗ, ಪಕ್ಷದಲ್ಲಿ ಸದ್ಯ ಅಂತಹವರು ಯಾರೂ ಇಲ್ಲ. ನಮ್ಮ ಗಮನಕ್ಕೂ ಬಂದಿಲ್ಲ. ಒಂದು ವೇಳೆ ಬಿಜೆಪಿ ಮುಖಂಡರ ಹಳೆಯ ಸ್ನೇಹಿತರಾರಾದರೂ ಸಂಪರ್ಕಿಸಿರಬಹುದೇನೋ ನಮಗೆ ಗೊತ್ತಿಲ್ಲ. ಏನೇ ಆದರೂ, ಜೂ.೧೯ರಂದು ಬೆಂಗಳೂರಿನಿಂದ ಇಬ್ಬರು ವೀಕ್ಷಕರು ಬರಲಿದ್ದು, ಅವರೇ ಎಲ್ಲ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ, ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ. ಚುನಾವಣೆಯಿಲ್ಲದೇ ಕಾಂಗ್ರೆಸ್ ಪಕ್ಷದ ಮೇಯರ್ ಆಯ್ಕೆಯಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಇನ್ನು ನಗರ ಶಾಸಕ ನಾರಾ ಭರತ್ ರೆಡ್ಡಿ ಅವರನ್ನು ಸಂಪರ್ಕಿಸಿದಾಗ, ಮೇಯರ್ ಆಕಾಂಕ್ಷಿ ಬಿಜೆಪಿ ಮುಖಂಡರನ್ನು ಸಂಪರ್ಕಿಸಿರುವ ಬಗ್ಗೆ ಮಾಹಿತಿಯಿಲ್ಲ. ಬಳ್ಳಾರಿಗೆ ಆಗಮಿಸುವ ವೀಕ್ಷಕರು, ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಯಾರು ಸಕ್ರಿಯವಾಗಿ ಕೆಲಸ ಮಾಡಿದ್ದಾರೆ, ಪಕ್ಷಕ್ಕೆ ಯಾರು ನಿಷ್ಠಾವಂತರಾಗಿದ್ದಾರೆ ಎಂಬ ಹಲವಾರು ವಿಷಯಗಳನ್ನು ಪರಿಗಣಿಸಿ ಅಂತಿಮ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next