Advertisement

By-election: ಕೈ, ಬಿಜೆಪಿ ಟಿಕೆಟ್‌ ಈ ವಾರವೇ ಅಂತಿಮ?

01:57 AM Jun 24, 2024 | Team Udayavani |

ಬೆಂಗಳೂರು: ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರ ಹಾಗೂ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ನಡೆಯಬೇಕಿರುವ ಉಪ ಚುನಾ ವಣೆಗಳಿಗೆ ಬಿಜೆಪಿ-ಜೆಡಿಎಸ್‌ ಹಾಗೂ ಕಾಂಗ್ರೆಸ್‌ ತಾಲೀಮು ಆರಂಭಿಸಿವೆ.

Advertisement

ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಗಾಗಿ ಉಸ್ತುವಾರಿ ಸಮಿತಿಗಳನ್ನು ರಚಿಸಿ ಕಾಂಗ್ರೆಸ್‌ ಒಂದು ಹೆಜ್ಜೆ ಮುಂದೆ ಹೋಗಿದ್ದು, ಮಿತ್ರಪಕ್ಷಗಳಾದ ಬಿಜೆಪಿ-ಜೆಡಿಎಸ್‌ ಇನ್ನಷ್ಟೇ ತಾಲೀಮು ಆರಂಭಿಸಬೇಕಿದೆ. 2 ದಿನಗಳಲ್ಲಿ ಹೊಸದಿಲ್ಲಿಗೆ ತೆರಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದರೆ, ರಾಜ್ಯ ಸಂಸದರ ಸಭೆಯ ನೆಪದಲ್ಲಿ ದಿಲ್ಲಿಗೆ ಹೊರಟಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಉಪ ಚುನಾವಣೆ ವಿಚಾರವನ್ನು ಹೈಕಮಾಂಡ್‌ ಜತೆ ಚರ್ಚಿಸುವ ಸಾಧ್ಯತೆಗಳಿವೆ.

ಮಂಗಳವಾರ ಅಥವಾ ಬುಧವಾರ ಹೊಸದಿಲ್ಲಿಯತ್ತ ಪ್ರಯಾಣ ಬೆಳೆಸಲಿರುವ ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್‌ ಅಗರ್ವಾಲ್‌, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತಿತರ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ. ಅವಕಾಶ ಸಿಕ್ಕಿದರೆ ಗೃಹ ಸಚಿವ ಅಮಿತ್‌ ಶಾ ಅವರನ್ನೂ ಭೇಟಿ ಮಾಡಿ ಉಪ ಚುನಾವಣೆ ಕುರಿತು ಪ್ರಸ್ತಾವಿಸಬಹುದು ಎನ್ನಲಾಗಿದೆ.

ಶಿಗ್ಗಾಂವಿಯಲ್ಲಿ ಆಕಾಂಕ್ಷಿಗಳು ಹೆಚ್ಚು: ಶಿಗ್ಗಾಂವಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್‌ ಬೊಮ್ಮಾಯಿ, ಶಶಿಧರ್‌ ಎಲಿಗಾರ್‌, ಶ್ರೀಕಾಂತ್‌ ದುಂಡಿಗೌಡರ್‌ ಸಹಿತ ಅನೇಕರು ಆಕಾಂಕ್ಷಿಗಳಾಗಿದ್ದಾರೆ. ಸತತ ನಾಲ್ಕು ಅವಧಿಯಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಕ್ಷೇತ್ರವನ್ನು ಬಿಟ್ಟುಕೊಡಬಾರದೆಂದು ಬಿಜೆಪಿ ಪಣ ತೊಟ್ಟಿದೆ.

ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಬಗ್ಗೆ ಚಿಂತೆ: ನಾಲ್ಕು ಅವಧಿಯಿಂದ ಕಳೆದುಕೊಂಡಿರುವ ಶಿಗ್ಗಾಂವಿ ಕ್ಷೇತ್ರವನ್ನು ಮರಳಿ ಪಡೆಯುವ ತವಕದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಇದ್ದು,
ಅಜಂಫೀರ್‌ ಖಾದ್ರಿ, ಯಾಸಿರ್‌ ಖಾನ್‌ ಪಠಾಣ್‌ ಸಹಿತ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.
ಸಂಡೂರಿನಲ್ಲಿ ಯಾರಿಗೆ ಟಿಕೆಟ್‌? ಸಂಡೂರಿನಲ್ಲಿ ಬಿಜೆಪಿಯಿಂದ ಜೆಡಿಎಸ್‌ಗೆ ಹೋಗಿದ್ದ ನೇಮಿರಾಜ್‌ ಅವರನ್ನು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಚಿಂತನೆ ನಡೆದಿದ್ದು, ಕಾಂಗ್ರೆಸ್‌ನಲ್ಲಿ ಇ. ತುಕಾರಾಂ ಅವರ ಪುತ್ರಿ ಚೈತನ್ಯಾ ಸೌಪರ್ಣಿಕಾ ಹೆಸರು ಕೇಳಿಬರುತ್ತಿದೆ.

Advertisement

ಚನ್ನಪಟ್ಟಣದಲ್ಲಿ ಅಚ್ಚರಿಯ ಅಭ್ಯರ್ಥಿ: ಚನ್ನಪಟ್ಟಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಯಾರೇ ನಿಂತರೂ ನಾನೇ ನಿಂತಂತೆ ಎನ್ನುವ ಭಾವನಾತ್ಮಕ ಬಾಣ ಹೂಡಿದ್ದು, ಅವರ ಸಹೋದರ ಡಿ.ಕೆ. ಸುರೇಶ್‌ ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ. ಕೊನೆಯ ಕ್ಷಣದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿಯುವ ಕಲಿ ಯಾರು ಎಂಬುದಕ್ಕೆ ಸ್ಪಷ್ಟ ಉತ್ತರ ಸಿಗಬಹುದು. ಜೆಡಿಎಸ್‌ನಿಂದ ಕುಮಾರಸ್ವಾಮಿ ಪುತ್ರ ನಿಖೀಲ್‌ ಕುಮಾರಸ್ವಾಮಿ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದು, ಬಿಜೆಪಿಯ ಸಿ.ಪಿ. ಯೋಗೇಶ್ವರ್‌ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಕೊನೆಯ ಕ್ಷಣದಲ್ಲಿ ಸಂಸದ ಡಾ| ಸಿ.ಎನ್‌. ಮಂಜುನಾಥ್‌ ಅವರ ಪತ್ನಿ, ದೇವೇಗೌಡರ ಪುತ್ರಿ ಅನುಸೂಯಾ ಮಂಜುನಾಥ್‌ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಮೇಲ್ಮನೆಯಲ್ಲೂ ಒಂದು ಸ್ಥಾನ
ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಯಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿ ವಿಪಕ್ಷ ನಾಯಕರೂ ಆಗಿದ್ದ ಕೋಟ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರು ಸಂಸದರಾಗಿದ್ದಾರೆ. ಇದರಿಂದ ತೆರವಾಗಿರುವ ಸ್ಥಾನಕ್ಕೂ ಉಪಚುನಾವಣೆ ನಡೆಯಬೇಕಿದೆ. ಈ ಕುರಿತಾಗಿಯೂ ಚರ್ಚೆ ಆರಂಭವಾಗಿವೆ. ಮೇಲ್ಮನೆ ವಿಪಕ್ಷ ನಾಯಕ ಸ್ಥಾನಕ್ಕೂ ಆಯ್ಕೆ ನಡೆಯಬೇಕಿದ್ದು, ಜುಲೈ ತಿಂಗಳಿನಲ್ಲಿ ಅಧಿವೇಶನ ಆರಂಭವಾಗುವ ಮುನ್ನ ವಿಪಕ್ಷ ನಾಯಕನ ಆಯ್ಕೆಗೆ ಬಿಜೆಪಿ ಕಸರತ್ತು ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next