Advertisement

Belagavi; ದ್ವೇಷದ ರಾಜಕಾರಣಕ್ಕೆ ಬೆಲೆ ತೆರಬೇಕಾಗುತ್ತದೆ..: ಜಗದೀಶ್ ಶೆಟ್ಟರ್

04:27 PM Jun 14, 2024 | Team Udayavani |

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿರುವ ಪೊಕ್ಸೊ ಪ್ರಕರಣದ ಹಿಂದೆ ಬಹಳ ದೊಡ್ಡ ರಾಜಕೀಯ ಷಡ್ಯಂತ್ರ ಇದೆ ಎಂದು ನೂತನ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದರು.

Advertisement

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಈಗ ಇಕ್ಕಟ್ಟಿನಲ್ಲಿದೆ. ಸಚಿವ ನಾಗೇಂದ್ರ ಅವರು ಹಗರಣದ ಆರೋಪದ ಕಾರಣದಿಂದ ರಾಜೀನಾಮೆ ನೀಡಿದ್ದಾರೆ. ಇಂತಹ ತಪ್ಪುಗಳನ್ನು ಮುಚ್ಚಿಕೊಳ್ಳಲು ದೊಡ್ಡ ನಾಯಕರ ವಿರುದ್ಧ ಪ್ರಕರಣ ದಾಖಲಿಸುವ ಕ್ರಮಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದರು.

ಯಡಿಯೂರಪ್ಪ ವಿರುದ್ಧ ಈಗ ದಾಖಲಾಗಿರುವ ಪೊಕ್ಸೊ ಎರಡು ತಿಂಗಳ ಹಿಂದಿನ ಪ್ರಕರಣ. ಆಗ ಸ್ವತಃ ಗೃಹಸಚಿವರೇ ಈ ದೂರಿಗೆ ಅರ್ಥವಿಲ್ಲ ಎಂದು ಹೇಳಿದ್ದರು. ಆದರೆ ಈಗ ಎರಡು ದಿನಗಳಿಂದ ಇದಕ್ಕೆ ಬಹಳ ತೀವ್ರವಾದ ಮಹತ್ವ ನೀಡಿರುವುದು ರಾಜಕೀಯ ದ್ವೇಷದ ಸಂಶಯಕ್ಕೆ ಕಾರಣವಾಗಿದೆ ಎಂದರು.

ಬಿಜೆಪಿಯವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ವಿರುದ್ಧ ದೂರು ದಾಖಲು ಮಾಡಿದ್ದರು. ಅದಕ್ಕೆ ಅನುಗುಣವಾಗಿ ಅವರು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿದ್ದರು. ಆದರೆ ವಿಚಾರಣೆಗೆ ಹಾಜರಾಗಿ ಎರಡು ದಿನಗಳ ನಂತರ ಯಡಿಯೂರಪ್ಪ ವಿರುದ್ಧದ ಪ್ರಕರಣಕ್ಕೆ ತೀವ್ರತೆ ಕೊಟ್ಟಿರುವದು ಸಂಶಯಕ್ಕೆ ಕಾರಣವಾಗಿದೆ. ಈ ರೀತಿಯ ದ್ವೇಷದ ರಾಜಕಾರಣ ಮಾಡುವುದನ್ನು ಕಾಂಗ್ರೆಸ್ ಬಿಡಬೇಕು. ಇಲ್ಲದಿದ್ದರೆ ಮುಂದೆ ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next