ಹುಬ್ಬಳ್ಳಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯಲು, ಎಪಿಎಂಸಿಗಳಲ್ಲಿನ ಜನದಟ್ಟಣೆ ಕುಗ್ಗಿಸಲು, ತಾತ್ಕಾಲಿಕವಾಗಿ ಮಾರುಕಟ್ಟೆ ವಿಕೇಂದ್ರೀಕರಣ ವ್ಯವಸ್ಥೆ ಕೈಗೊಳ್ಳಬೇಕೆಂದು ಕೆಪಿಸಿಸಿ ಕೋವಿಡ್ -19 ಕಾರ್ಯಪಡೆ ಜಿಲ್ಲಾ ಘಟಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದೆ.
ಜಿಲ್ಲಾ ಉಸ್ತುವಾರಿ ಜಗದೀಶ ಶೆಟ್ಟರ ಅವರ ನಿವಾಸಕ್ಕೆ ತೆರಳಿದ್ದ ಧಾರವಾಡ ಗ್ರಾಮೀಣ ಹಾಗೂ ಹು-ಧಾ ಮಹಾನಗರ ಜಿಲ್ಲಾ ಕಾರ್ಯಪಡೆ ಅಧ್ಯಕ್ಷರಾದ ಶಾಸಕ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ತು ಮಾಜಿ ಸದಸ್ಯ ನಾಗರಾಜ ಛಬ್ಬಿ, ಕಾಂಗ್ರೆಸ್ ಮಹಾನಗರ ಹಾಗೂ ಗ್ರಾಮೀಣ ಜಿಲ್ಲಾಧ್ಯಕ್ಷರಾದ ಅಲ್ತಾಫ್ ಹಳ್ಳೂರು, ಅನಿಲಕುಮಾರ ಪಾಟೀಲ ಇನ್ನಿತರ ಮುಖಂಡರು ಮನವಿ ಸಲ್ಲಿಸಿದರು.
ಹುಬ್ಬಳ್ಳಿ ಎಪಿಎಂಸಿಗೆ ಪ್ರತಿನಿತ್ಯ 2500-3000 ವರೆಗೆ ರೈತರು, ದಲ್ಲಾಳಿಗಳು, ವ್ಯಾಪಾರಸ್ಥರು, ಗ್ರಾಹಕರು ಇನ್ನಿತರರು ಆಗಮಿಸುತ್ತಿದ್ದಾರೆ. ಸಾಮಾಜಿಕ ಅಂತರ ಉಲ್ಲಂಘನೆಯಾಗುತ್ತಿದೆ. ಇದರಿಂದ ಕೋವಿಡ್ 19 ವೈರಸ್ ಹರಡುವಿಕೆ ತಡೆ ಅಸಾಧ್ಯವಾಗಲಿದೆ. ಪೊಲೀಸರ ಆತಂಕದಲ್ಲಿ ಕೆಲ ರೈತರು ಸಿಕ್ಕ ಬೆಲೆಗೆ ತಮ್ಮ ಉತ್ಪನ್ನ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಲಾಕ್‌ಡೌನ್‌ನಂಥ ಸಂಕಷ್ಟದ ಸಮಯದಲ್ಲಿ ರೈತರಿಗೆ ಯೋಗ್ಯ ಬೆಲೆ ಸಿಗದೇ ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡುವಂತಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜೊತೆಗೆ ರೈತರ ಬೆಳೆಗೂ ನ್ಯಾಯಯುತ ಬೆಲೆ ಸಿಗಬೇಕೆಂದರೆ ಅಮರಗೋಳ ಎಪಿಎಂಸಿಯನ್ನು ತಾತ್ಕಾಲಿಕವಾಗಿ ವಿಭಜಿಸಿ ಹುಬ್ಬಳ್ಳಿ ಹೊರವಲಯದ ಟ್ರಕ್ ಟರ್ಮಿನಲ್ಸ್‌ಗಳಲ್ಲಿ ಮಾರುಕಟ್ಟೆಗೆ ಅವಕಾಶ ನೀಡಿದರೆ ಕುಂದಗೋಳ, ಕಲಘಟಗಿ, ಅಳ್ನಾವರ ಹುಬ್ಬಳ್ಳಿ ಸುತ್ತಲಿನ ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗಲಿದೆ. ಅಲ್ಲದೇ ಅಮರಗೋಳ ಎಪಿಎಂಸಿಯಲ್ಲಿ ಧಾರವಾಡ, ನವಲಗುಂದ, ಅಣ್ಣಗೇರಿ, ಗಾಮನಗಟ್ಟಿ ಸುತ್ತಲಿನ ಭಾಗದ ರೈತರಿಗೆ ಅವಕಾಶ ನೀಡುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಜನದಟ್ಟಣೆಯೂ ನಿವಾರಣೆಯಾಗಲಿದ್ದು ರೈತರ ಉತ್ಪನ್ನಗಳಿಗೂ ಯೋಗ್ಯ ಬೆಲೆ ದೊರೆಯುವಂತಾಗಲಿದೆ ಎಂದು ತಿಳಿಸಿದರು.
ಈ ಕುರಿತು ಎಪಿಎಂಸಿ ಅಧ್ಯಕ್ಷರು, ಕಾರ್ಯದರ್ಶಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಸಾಧ್ಯವಾದಲ್ಲಿ ಇನ್ನೊಂದು ಯೋಗ್ಯ ಸ್ಥಳದಲ್ಲಿ ಮಾರುಕಟ್ಟೆಗೆ ಅವಕಾಶ ನೀಡುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದರು. ಅಲ್ಲದೇ ರೈತರ ಇನ್ನಿತರೆ ಸಮಸ್ಯೆಗಳಾದ ಹತ್ತಿ, ಕಾಳು ಖರೀದಿ ವಿಳಂಬ ಹಾಗೂ ಬೀಜ-ರಸಗೊಬ್ಬರ ವಿತರಣೆ ಸೇರಿದಂತೆ ರೈತರ ಇನ್ನಿತರ ಸಮಸ್ಯೆಗಳ ಕುರಿತು ಚರ್ಚಿಸಲು ಶೀಘ್ರವೇ ರೈತರ ಸಮ್ಮುಖದಲ್ಲಿ ಕೃಷಿ ಮತ್ತು ತೋಟಗಾರಿಕೆ ಸಚಿವರ ಸಭೆ ನಡೆಸುವಂತೆ ಸಚಿವ ಜಗದೀಶ ಶೆಟ್ಟರ ಅವರಿಗೆ ಒತ್ತಾಯಿಸಲಾಯಿತು.
ಎಪಿಎಂಸಿ ಮಾಜಿ ಅಧ್ಯಕ್ಷ ಜಗನ್ನಾಥ ಸಿದ್ದನಗೌಡ್ರ, ಸದಸ್ಯ ಕೆಂಪಲಿಂಗಗೌಡ್ರ, ಕೆಪಿಸಿಸಿ ಸದಸ್ಯ ಸತೀಶ ಮೆಹರವಾಡೆ, ಪಾಲಿಕೆ ಮಾಜಿ ಸದಸ್ಯ ವಿಜನಗೌಡ ಪಾಟೀಲ, ರೈತ ಮುಖಂಡರಾದ ಪರುತಪ್ಪ ಬಳಗಣ್ಣವರ, ಸಿದ್ದಪ್ಪಣ್ಣ ಮೇಟಿ, ಗುರು ದಾನೇನವರ, ಮುತ್ತು ಉಗರಗೋಳ, ಗುರುಸಿದ್ದಪ್ಪ ಕಟಗಿ, ಮಲ್ಲಿಕಾರ್ಜುನ ಕುಂದನಹಳ್ಳಿ, ಪ್ರಸನ್ನಕುಮಾರ ಮಿರಜಕರ, ವಿರೂಪಾಕ್ಷಪ್ಪ, ಸಾಗರ ಗಾಯಕವಾಡ ಇನ್ನಿತರರು ಇದ್ದರು.