Advertisement

ಬಿಸಿಯೂಟ ಸಿಬಂದಿ ಬಳೆ ವಿವಾದ: ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿ: ಬಿಜೆಪಿ ಆರೋಪ

10:59 PM Jul 16, 2023 | Team Udayavani |

ಬೆಂಗಳೂರು: ಬಿಸಿಯೂಟ ಕಾರ್ಯಕರ್ತೆಯರು ಬಳೆ ಧರಿಸುವಂತಿಲ್ಲ ಎಂಬ ಪ್ರಧಾನ ಮಂತ್ರಿ ಪೋಷಣ್‌ ಅಭಿಯಾನದ ಮಾರ್ಗಸೂಚಿ ರಾಜ್ಯದಲ್ಲಿ ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿದೆ.

Advertisement

“ಇದು ಕಾಂಗ್ರೆಸ್‌ನ ಹಿಂದೂ ವಿರೋಧಿ ನಿಲುವು’ ಎಂದು ಬಿಜೆಪಿ ಬಣ್ಣಿಸಿದರೆ, “ಈ ಮಾರ್ಗಸೂಚಿ ಹೊರಡಿಸಿರುವುದು ಕೇಂದ್ರ ಸರಕಾರ’ ಎಂದು ಕಾಂಗ್ರೆಸ್‌ ತಿರುಗೇಟು ನೀಡಿದೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕೇಂದ್ರ ಸರಕಾರದ ಪೋಷಣ ಅಭಿಯಾನವು ಬಿಸಿಯೂಟ ತಯಾರಿಸುವ ಕಾರ್ಯಕರ್ತೆಯರು ಕೈಗೊಳ್ಳಬೇಕಾದ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಅದರಲ್ಲಿ ಶಾಲಾ ಮೇಲ್ವಿಚಾರಣ ಸಮಿತಿ ಸದಸ್ಯರು ಶಾಲೆಗಳಿಗೆ ಭೇಟಿ ನೀಡಿದಾಗ ಬಿಸಿಯೂಟ ಸಿಬಂದಿಗಳ ಕಾರ್ಯವೈಖರಿಯನ್ನು ಪರಿಶೀಲಿಸಬೇಕು.

ಬಿಸಿಯೂಟ ಸಿಬಂದಿ ಕೈ, ಕಾಲುಗಳನ್ನು ಸಾಬೂನಿನಿಂದ ತೊಳೆದು ಸ್ವತ್ಛಗೊಳಿಸುವುದು, ಅಡುಗೆ ಕೋಣೆಯ ಸ್ವತ್ಛತೆ ಕಾಪಾಡಿಕೊಳ್ಳುವುದು, ಗೋಡೆ, ಕಿಟಕಿಗಳಲ್ಲಿ ಹಲ್ಲಿ, ಜಿರಳೆ, ನೊಣಗಳನ್ನು ಮುಕ್ತಗೊಳಿಸುವುದು, ಪಾತ್ರೆಗಳನ್ನು ಮುಚ್ಚಿಡುವುದರ ಬಗ್ಗೆ ಸೂಚನೆ ನೀಡಲಾಗಿತ್ತು. ಹಾಗೆಯೇ ಕೈಗಳಲ್ಲಿ ಬಳೆ ತೊಟ್ಟಿರಬಾರದು, ಏಫ್ರಾನ್‌, ತಲೆಗವಸು ಮತ್ತು ಕೈ ಗವಸುಗಳನ್ನು ಧರಿಸಿರಬೇಕು ಎಂದು ಅಡುಗೆ ಸಿಬಂದಿಗೆ ಸೂಚಿಸಿತ್ತು.

ಈ ಮಾರ್ಗಸೂಚಿಯನ್ನು ರಾಜ್ಯ ಸರಕಾರವು ಕನ್ನಡಕ್ಕೆ ತರ್ಜುಮೆ ಮಾಡಿ ರಾಜ್ಯದ ಬಿಸಿಯೂಟ ಕಾರ್ಯಕರ್ತೆ ಯರಿಗೆ ಕಳುಹಿಸಿಕೊಟ್ಟು ಮಾರ್ಗಸೂಚಿಯನ್ನು ಪಾಲಿಸುವಂತೆ ಸೂಚಿಸಿತ್ತು.

Advertisement

ಆದರೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಈ ಮಾರ್ಗಸೂಚಿಯನ್ನು ಖಂಡಿಸಿ ಟ್ವೀಟ್‌ ಮಾಡಿದ್ದಾರೆ. ಹಿಂದೂಗಳ ವಿರುದ್ಧ ಸದಾ ವಿಷ ಕಾರುವ ಕಾಂಗ್ರೆಸ್‌ ಸರಕಾರದಿಂದ ಮತ್ತೂಂದು ದ್ವೇಷದ ಆದೇಶ ಹೊರಬಿದ್ದಿದೆ. ಬಿಸಿಯೂಟ ಕಾರ್ಯಕರ್ತೆಯರು ಕೈಗೆ ಬಳೆ ಧರಿಸಬಾರದು ಎಂದಿರುವ ಕಾಂಗ್ರೆಸಿಗರು ಆ ಬಳೆಗಳನ್ನು ತಾವು ಧರಿಸಿಕೊಳ್ಳಬೇಕು ಎಂದಿದ್ದಾರೆಯೇ? ಹಿಂದೂ ಆಚರಣೆಗಳನ್ನು ಹತ್ತಿಕ್ಕಬೇಕೆಂಬ ನಿಮ್ಮ ಪ್ರಯತ್ನಕ್ಕೆ ಧಿಕ್ಕಾರವಿರಲಿ. ಶಾಲೆಯ ತರಗತಿ ಕೋಣೆಯೊಳಗೆ ಬುರ್ಖಾ ಧರಿಸಬಾರದು ಎಂಬ ಆದೇಶದ ವಿರುದ್ಧ ರಕ್ತ ಕಣ್ಣಿರು ಸುರಿಸಿದ್ದ ಕಾಂಗ್ರೆಸ್‌, ಈಗ ಹಿಂದೂಗಳ ವಿಷಯದಲ್ಲಿ ದಮನಕಾರಿ ನೀತಿ ಅನುಸರಿಸುತ್ತಿದೆ. ಕೈಗೆ ಬಳೆ ಧರಿಸಬೇಕೇ, ಬೇಡವೇ ಎಂಬುದು ಅವರವರ ಆಯ್ಕೆ. ಸರಕಾರ ಇದರಲ್ಲಿ ಮೂಗು ತೂರಿಸದೇ ಹಿಂದೂಗಳ ವಿಷಯದಲ್ಲಿಯೂ ಸೌಜನ್ಯದಿಂದ ವರ್ತಿಸುವಂತೆ ಆಗ್ರಹಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದರು. ಹಲವು ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ರಾಜ್ಯ ಸರಕಾರದ ಈ ಮಾರ್ಗಸೂಚಿ ಹಿಂದೂ ವಿರೋಧಿ ಎಂದು ಬಣ್ಣಿಸಿದ್ದರು.

ಸಿಎಂ ಟ್ವೀಟ್‌
ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಸಿಯೂಟ ಕಾರ್ಯಕರ್ತೆಯರು ಬಳೆ ತೊಡುವುದನ್ನು ನಿಷೇಧಿಸಿ ರಾಜ್ಯ ಸರಕಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ ಎನ್ನುವ ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಹರಡಲಾಗುತ್ತಿದೆ. ವಾಸ್ತವದಲ್ಲಿ ಕೇಂದ್ರ ಸರಕಾರ ಪೋಷಣ್‌ ಯೋಜನೆಗೆ ಸಂಬಂಧಿಸಿ ಮಾರ್ಗಸೂಚಿ ಹೊರಡಿಸಿ, ಬಿಸಿಯೂಟದ ಕಾರ್ಯಕರ್ತೆಯರು ಬಳೆ ತೋಡುವುದನ್ನು ನಿಷೇಧಿಸಿದೆ ಎಂದು ಹೇಳಿದ್ದಾರೆ.

ಸರಕಾರಕ್ಕೆ ಮಾಡಲು ಬೇರೆ ಕೆಲಸವಿಲ್ಲ
ಹಾವೇರಿ: ಈ ಹಿಂದೆ ಬಿಸಿಯೂಟ ತಯಾರಕರು ಬಳೆ ಹಾಕಿಕೊಂಡೇ ಕೆಲಸ ಮಾಡಿದ್ದಾರೆ. ಅಂದು ಯಾವ ತೊಂದರೆಯೂ ಆಗಿರಲಿಲ್ಲ. ಈಗ ಏಕಾಏಕಿಯಾಗಿ ಈ ರೀತಿ ಮಾರ್ಗಸೂಚಿ ಹೊರಡಿಸಿದ್ದಾರೆ. ಸರಕಾರಕ್ಕೆ ಮಾಡಲು ಬೇಕಾದಷ್ಟು ಕೆಲಸಗಳಿದ್ದರೂ ಇಂಥ ಕೆಲಸಕ್ಕೆ ಬಾರದ ಆದೇಶ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಶಿಗ್ಗಾವಿಯಲ್ಲಿ ಹರಿಹಾಯ್ದರು.

 

Advertisement

Udayavani is now on Telegram. Click here to join our channel and stay updated with the latest news.

Next