ಬೆಂಗಳೂರು: ಶುಕ್ರವಾರದ ವಿಧಾನ ಸಭೆಯ ಅಧಿವೇಶನ ಸೋಮವಾರಕ್ಕೆ ಮುಂದೂಡಲ್ಪಡುವುದರೊಂದಿಗೆ ಮೈತ್ರಿ ಸರಕಾರದ ಉಳಿವಿನ ಕುರಿತಾದ ಊಹಾಪೋಹಗಳಿಗೆ ತಾತ್ಕಾಲಿಕ ವಿರಾಮವಷ್ಟೇ ಸಿಕ್ಕಿದಂತಾಗಿದೆ. ಈ ಎರಡು ದಿನಗಳಲ್ಲಿ ಸರಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೈತ್ರಿ ಸರಕಾರದ ನಡೆ ಏನಿರಬಹುದೆಂಬ ಕುತೂಹಲವೂ ಸಹಜವಾಗಿಯೇ ಮೂಡಿತ್ತು.
ಮೈತ್ರಿ ನಾಯಕರ ವಿರುದ್ಧ ಮುನಿಸಿಕೊಂಡು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಮುಂಬಯಿ ಸೇರಿಕೊಂಡಿರುವ 13 ಜನರ ನಿರ್ಧಾರದ ಮೇಲೆ ಸರಕಾರದ ಭವಿಷ್ಯ ನಿಂತಿದೆ ಎಂಬುದು ಸುಸ್ಪಷ್ಟ. ಹಾಗಾಗಿ ಶನಿವಾರ ಮತ್ತು ಆದಿತ್ಯವಾರ ಈ ಅತೃಪ್ತ ಶಾಸಕರನ್ನು ಹೇಗಾದರೂ ಸಂಪರ್ಕಿಸಿ ಅವರ ಮನ ಒಲಿಸುವ ಕೆಲಸಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಕೈ ಹಾಕಲಿದೆ ಎಂಬುದಂತೂ ಸ್ಪಷ್ಟ.
ಇದರ ಸೂಚನೆ ಸಿಕ್ಕಿ ಏನೋ ಎಂಬಂತೆ ಮುಂಬಯಿ ಹೊಟೇಲಿನಲ್ಲಿ ತಂಗಿರುವ 13 ಜನ ಶಾಸಕರು ಆದಿತ್ಯವಾರದಂದು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ ಮತ್ತು ಆ ವಿಡಿಯೋದಲ್ಲಿ ನಾವಿನ್ನೂ ಜೀವಂತವಾಗಿದ್ದೇವೆ ಮತ್ತು ಇಲ್ಲಿ ಕ್ಷೇಮವಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೇ, ಸೋಮವಾರ ನಡೆಯಲಿರುವ ವಿಶ್ವಾಸಮತ ಯಾಚನೆ ಕಲಾಪಕ್ಕೆ ಯಾವುದೇ ಕಾರಣಕ್ಕೆ ಹಾಜರಾಗುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ.
ನಾವು ಹಣ ಅಥವಾ ಅಧಿಕಾರದ ಆಶೆಯಿಂದ ಬಂದಿಲ್ಲ. ಸ್ವಾಭಿಮಾನದ ಉಳಿವಿಗೆ ಬಂದಿದ್ದೇವೆ ಹಾಗೂ ಮುಂಬರುವ ದಿನಗಳಲ್ಲಿ ಇನ್ನಷ್ಟು ವಿಚಾರಗಳನ್ನು ಬಹಿರಂಗಪಡಿಸಲಿದ್ದೇವೆ ಎಂದು ಅತೃಪ್ತ ಶಾಸಕರಲ್ಲಿ ಒಬ್ಬರಾಗಿರುವ ಕಾಂಗ್ರೆಸ್ ನ ಭೈರತಿ ಬಸವರಾಜ್ ಅವರು ಹೇಳಿದ್ದಾರೆ. ಇನ್ನುಳಿದಂತೆ ಗೋಪಾಲಯ್ಯ, ಬಿ.ಸಿ. ಪಾಟೀಲ್ ಹಾಗೂ ಎಸ್. ಟಿ. ಸೋಮಶೇಖರ್ ಸೇರಿದಂತೆ ಉಳಿದ ಅತೃಪ್ತ ಶಾಸಕರೆಲ್ಲರೂ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿರುವುದರಿಂದಲೇ ನಾವೆಲ್ಲಾ ಒಟ್ಟಿಗೆ ರಾಜೀನಾಮೆ ನೀಡಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.
ಅತೃಪ್ತ ಶಾಸಕರ ಈ ಒಗ್ಗಟ್ಟಿನ ಹೆಳಿಕೆ ಮೈತ್ರಿ ನಾಯಕರಿಗೆ ಇನ್ನಷ್ಟು ತಲೆನೋವು ಉಂಟುಮಾಡಿರುವುದು ಸುಳ್ಳಲ್ಲ.