ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಹೆಚ್ಚು ಸ್ಥಾನ ಗೆದ್ದ ಬಿಜೆಪಿ ಕಚೇರಿ ಮುಂದೆ ಸಂಭ್ರಮಾಚರಣೆ ನಡೆಯುತ್ತಿದ್ದಂತೆ ತಲಾ ಒಂದು ಸ್ಥಾನ ಪಡೆದ ಕಾಂಗ್ರೆಸ್, ಜೆಡಿಎಸ್ ಕಚೇರಿಗಳು ಭಣಗುಡುತ್ತಿದ್ದವು.
ನಗರದ ಮತ ಎಣಿಕೆ ಕೇಂದ್ರಗಳ ಬಳಿಯೂ ಬೆಳಗ್ಗೆ ಜಮಾಯಿಸಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತ ರು ಮೈತ್ರಿ ಅಭ್ಯರ್ಥಿ ಸೋಲಿನತ್ತ ಹೋಗು ತ್ತಿರುವ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಜಾಗ ಖಾಲಿ ಮಾಡ ತೊಡಗಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ, ಶೇಷಾದ್ರಿಪುರಂನ ಜೆಡಿಎಸ್ ಕಚೇರಿ ಯತ್ತ ಯಾವುದೇ ನಾಯಕರು, ಕಾರ್ಯಕರ್ತರು ಸುಳಿಯಲೇ ಇಲ್ಲ. ಬೆಂಗಳೂರಿನ ಮಟ್ಟಿಗೆ ಮೂರೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಅನುಭವಿಸಿದ್ದರು.
ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿತ್ತು. ಆದರೆ, ಮೂರೂ ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದರಿಂದ ಕಾರ್ಯಕರ್ತರಲ್ಲಿ ನಿರುತ್ಸಾಹ ಮೂಡಿ ಯಾರೂ ಹೊರಗೆ ಬರಲೇ ಇಲ್ಲ. ಹೀಗಾಗಿ, ಎರಡೂ ಕಚೇರಿಗಳಲ್ಲಿ ಮೌನ ಆವರಿಸಿತ್ತು.
ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್, ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡರು ಒಂದೆರಡು ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಂತೆ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಭರವಸೆ ಮೂಡಿಸಿತಾದರೂ, ಕೆಲವೇ ಕ್ಷಣಗಳಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡು ನಂತರ ಕೊನೇವರೆಗೂ ಅದೇ ಲೀಡ್ ಮುಂದುವರಿಯಿತು.