ಚಾಮರಾಜನಗರ: ದೇಶದಲ್ಲಿ ಎದುರಾಗಿರುವ ಆರ್ಥಿಕ ಹಿಂಜರಿತಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಕಾರಣ. 1992ರಲ್ಲಿ ಹಣಕಾಸು ಸಚಿವರಾಗಿದ್ದ ಮನಮೋಹನಸಿಂಗ್ ಸೌಮ್ಯವಾಗಿ ಜಾರಿಗೆ ತಂದ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಕಠಿಣ ರೂಪದಲ್ಲಿ ಜಾರಿ ಮಾಡಿದ್ದಾರೆ ಎಂದು ಶಾಸಕ, ಮಾಜಿ ಸಚಿವ ಎನ್. ಮಹೇಶ್ ಹೇಳಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ಜಿಲ್ಲಾ ಸಮಿತಿಯಿಂದ ಭಾರತದ ಆರ್ಥಿಕ ಹಿಂಜರಿತ ಕಾರಣ ಪರಿಣಾಮ ಮತ್ತು ಪರಿಹಾರ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಸಮಾರಂಭದಲ್ಲಿ ಮಾತನಾಡಿ, ಮನಮೋಹನ ಸಿಂಗ್ ಹಾಗೂ ನರೇಂದ್ರ ಮೋದಿ ಇಬ್ಬರೂ ಬಂಡವಾಳಶಾಹಿ ಆರ್ಥಿಕ ತಜ್ಞರೇ. ಇಬ್ಬರ ನೀತಿಗಳೂ ಬಂಡವಾಳ ಶಾಹಿಗಳು, ಶ್ರೀಮಂತರಿಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನೇ ಹೊಂದಿವೆ.
ಬಿಜೆಪಿ ಸರ್ಕಾರದ ಹೊಸ ಆರ್ಥಿಕ ನೀತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೊಳ್ಳುವ ಶಕ್ತಿ ಶೇ.20ರಷ್ಟು ಕಡಿಮೆಯಾಗಿದೆ. ಇದು ಕಳೆದ 40 ವರ್ಷಗಳಲ್ಲೇ ಅತಿ ಕಡಿಮೆ ಪ್ರಮಾಣವಾಗಿದೆ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪೌಷ್ಟಿಕ ಆಹಾರ, ತರಕಾರಿ ಕೊಳ್ಳಲು ಸಾಧ್ಯವಾಗದೇ ಜನರು ಅನಾರೋಗ್ಯಕ್ಕೀಡಾಗುತ್ತಾರೆ. ಆರೋಗ್ಯ ವೆಚ್ಚವನ್ನೂ ಭರಿಸಲು ಸಾಧ್ಯವಾಗದೇ ಜನರು ಕಷ್ಟಪಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಆರ್‌ಸಿಪಿ ಒಪ್ಪಂದದಿಂದ ಅತಂತ್ರ: ಕೇಂದ್ರ ಸರ್ಕಾರ ಉದ್ಯೋಗ ಖಾತರಿ ಯೋಜನೆ ಹಾಗೂ ಕೃಷಿ ವಲಯಕ್ಕೆ ಹೆಚ್ಚಿನ ಬಂಡವಾಳ ಹೂಡಿ ಹಳ್ಳಿಗಾಡಿನ ಜನರಿಗೆ ಉದ್ಯೋಗ ಕೊಟ್ಟು ಕೂಲಿಯನ್ನು ಹೆಚ್ಚು ಮಾಡಿದಾಗ ಅವರಲ್ಲಿ ಆದಾಯ ಹೆಚ್ಚಾಗಿ ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಕೇಂದ್ರ ಸರ್ಕಾರ ಪುಣ್ಯಕ್ಕೆ ಆರ್‌ಸಿಪಿ ಒಪ್ಪಂದಕ್ಕೆ ಸಹಿ ಹಾಕಲಿಲ್ಲ. ಹಾಕಿದ್ದರೆ ಗ್ರಾಮೀಣ ಪ್ರದೇಶದ ಜನರ, ರೈತರ, ಕೃಷಿಕರ ಬದುಕು ಅತಂತ್ರವಾಗುತ್ತಿತ್ತು ಎಂದರು.
ಸರ್ಕಾರ ರೈತ, ಬಡವರನ್ನು ಉದ್ದಾರ ಮಾಡಿಲ್ಲ: ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳನ್ನು ಉದ್ದಾರ ಮಾಡಲು ಹೊರಟಿದೆಯೇ ಹೊರತು ದೇಶದ ಬಹುಜನರಾದ ರೈತರು, ಬಡವರನ್ನು ಉದ್ದಾರ ಮಾಡುವ ಕೆಲಸ ಮಾಡುತ್ತಿಲ್ಲ. ಇಂದು ಕೇಂದ್ರ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳಿಗೆ ಭೂಮಿ ಕೊಡುತ್ತಿದೆ. ರೈತ ಭೂಮಿ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಭಾರತ ದೇಶದ ನೈಸರ್ಗಿಕ ಸಂಪತ್ತನ್ನು ಕೊಳ್ಳೆಯೊಡೆಯುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಭಾರತ ಆರ್ಥಿಕ ಹಿಂಜರಿತ ಕಾಣುತ್ತಿದೆ. ರೈತರ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು. ಮೈಸೂರು ಸೇಷಿಯಂಟ್ ಕಾಲೇಜಿನ ವಾಣಿಜ್ಯ ನಿರ್ವಹಣಾ ವಿಭಾಗ ಸಹಾಯಕ ಪ್ರಾಧ್ಯಾಪಕ ಕ್ರಾಂತಿರಾಜ್ ಒಡೆಯರ್ ಎಂ. ಮುಖ್ಯಭಾಷಣ ಮಾಡಿದರು. ಜಿ.ಎನ್.ಸಹನಾ ಪ್ರಬಂಧ ಮಂಡಿಸಿದರು. ಸಂಘದ ಜಿಲ್ಲಾಧ್ಯಕ್ಷ ಎನ್.ಮಹೇಂದ್ರ ಅಧ್ಯಕ್ಷತೆ ವಹಿಸಿದ್ದರು.
ಬಿವಿಎಸ್ ಜಿಲ್ಲಾ ಸಂಯೋಜಕ ಪರ್ವತ್‌ರಾಜ್, ನಗರಸಭಾ ಸದಸ್ಯ ಪ್ರಕಾಶ್, ರೈತ ಹಿತರಕ್ಷಣಾ ಸಮಿತಿಯ ಆಲೂರು ಮಲ್ಲು, ಸಾಹಿತಿ ಮಂಜು ಕೋಡಿಉಗನೆ, ಜಿಲ್ಲಾ ಪ್ರೌಢ ಶಾಲಾ ಮುಖ್ಯೋಪಾಧ್ಯಯರ ಸಂಘದ ಅಧ್ಯಕ್ಷ ಎ.ಶಿವಣ್ಣ, ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪರಮೇಶ್ವರಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ನೇತ್ರಾವತಿ, ಗೌರವ ಅಧ್ಯಕ್ಷ ಮಹದೇವ ಸ್ವಾಮಿ, ಎಸ್‌ಸಿ- ಎಸ್‌ಟಿ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಕಾರ್ಯದರ್ಶಿ ಗಜೇಂದ್ರ, ಎಂ.ಡಿ.ಮಹದೇವಯ್ಯ ಹಾಜರಿದ್ದರು.