ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಲಿಬಾನ್ ಸಂಸ್ಕ್ರತಿಯನ್ನು ಹೊಂದಿದವರು,ಅವರು ಮುಖ್ಯಮಂತ್ರಿಯಾಗಿದ್ದಾಗ 24ಕ್ಕೂ ಅಧಿಕ ಹಿಂದೂಗಳ ಹತ್ಯೆಯಾಗಿದ್ದು, ಕಾಂಗ್ರೆಸ್ ಆಡಳಿತದಲ್ಲೇ ರಾಜ್ಯದಲ್ಲಿ ಅತಿ ಹೆಚ್ಚು ಕೊಲೆ, ಸುಲಿಗೆ, ಹತ್ಯಾಕಾಂಡ ಮತ್ತು ಗೋಹತ್ಯೆ ನಡೆಯುತ್ತಿತ್ತು ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕೇವಲ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಶರತ್ ಮಡಿವಾಳ, ದೀಪಕ್ ರಾವ್ ಸೇರಿ ಹಲವು ಹಿಂದೂ ಮುಖಂಡರ ಮತ್ತು ಕಾರ್ಯಕರ್ತರ ಹತ್ಯೆ ಮಾಡಲಾಗಿತ್ತು. ಸುಳ್ಯದಲ್ಲಿ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯನ್ನು ಚೂರಿಯಿಂದ ಇರಿದು ಕೊಲ್ಲಲಾಗಿತ್ತು. ಎಟಿಎಂ ಒಳಗೆ ಹೋಗಿದ್ದ ಮಹಿಳೆಯ ಮೇಲೆ ಬರ್ಬರ ಹಲ್ಲೆಯೂ ನಡೆದಿತ್ತು. ಈ ಎಲ್ಲ ದುರ್ಘಟನೆಗಳು ಸಿದ್ದರಾಮಯ್ಯ ಅವರ ಆಡಳಿತದಲ್ಲಿ ತಾಲಿಬಾನ್ ಸಂಸ್ಕ್ರತಿ ಇತ್ತು ಎಂಬುದಕ್ಕೆ ಸ್ಪಷ್ಟ ಉದಾಹರಣೆಗಳು ಎಂದು ಅವರು ತಿಳಿಸಿದ್ದಾರೆ.
ಅಫ್ಘಾನಿ ಸ್ಥಾನದಲ್ಲಿ ತಾಲಿಬಾನ್ ಹುಟ್ಟುವುದಕ್ಕೆ ಮುಂಚೆಯೇ ಭಾರತದಲ್ಲಿ ತಾಲಿಬಾನ್ ಸರ್ಕಾರ ಹುಟ್ಟು ಹಾಕಿದ್ದು ‘ಇಂದಿರಾ ಗಾಂಧಿ’, 1975 ರಲ್ಲಿ ತುರ್ತು ಪರಿಸ್ಥಿತಿ ಹೇರಿ, ದೇಶಭಕ್ತರು, ಮಾಧ್ಯಮದ ಪ್ರತಿನಿಧಿಗಳನ್ನೂ ಜೈಲಿಗಟ್ಟುವ ಮೂಲಕ 18 ತಿಂಗಳುಗಳ ಕಾಲ ತಾಲಿಬಾನ್ ಆಡಳಿತ ನಡೆಸಿದ ಪಕ್ಷ ಕಾಂಗ್ರೆಸ್. ದೇಶದಲ್ಲಿ ತಾಲಿಬಾನ್ ಹುಟ್ಟಿಗೆ ಕಾರಣವೇ ಕಾಂಗ್ರೆಸ್. ಸಿದ್ದರಾಮಯ್ಯ ತಾವು ಆಗ ಕಾಂಗ್ರೆಸ್‍ನಲ್ಲಿ ಇರಲಿಲ್ಲ ಎಂಬ ಒಂದೇ ಕಾರಣಕ್ಕೆ ಈ ವಿಚಾರದಲ್ಲಿ ಜಾಣ ಮರೆವನ್ನು ಪ್ರದರ್ಶಿಸಿದ್ದಾರಾ ಎಂದು ಪ್ರಶ್ನಿಸಿದರು. .
2019, 2020ರ ವಿಧಾನಸಭಾ ಉಪ ಚುನಾವಣೆಗಳಲ್ಲಿನ ಸತತ ಸೋಲು, 2020ರಲ್ಲಿ ವಿಧಾನಪರಿಷತ್ ಚುನಾವಣೆಯಲ್ಲೂ ಸೋಲು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆದ ಹಿನ್ನಡೆಯಿಂದ ಸಿದ್ದರಾಮಯ್ಯ ವಿಚಲಿತರಾಗಿದ್ದಾರೆ. ಅದೇ ಕಾರಣಕ್ಕೆ ಅವರು ಕ್ಷಣಕ್ಕೊಂದು ಮಾತಾಡುತ್ತಿದ್ದಾರೆ. ಮತ್ತೆ ಮತ್ತೆ ಸೋಲುವ ಭಯ ಅವರನ್ನು ಕಾಡುತ್ತಿರುವಂತಿದೆ ಎಂದರು.
ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಟಿಪ್ಪು ಜಯಂತಿಗೆ ಚಾಲನೆ ಕೊಟ್ಟದ್ದು ಮುಸ್ಲಿಂ ತುಷ್ಟೀಕರಣದ ಅವರ ಚಿಂತನೆಗೆ ಸ್ಪಷ್ಟ ಉದಾಹರಣೆ ಅಲ್ಲವೇ? ಮುಸ್ಲಿಂ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಅವರ ಉದ್ದೇಶ ಇದರ ಹಿಂದಿಲ್ಲವೇ? ಹಿಂದೂಗಳಿಗೆ ನೋವಾದರೂ ತೊಂದರೆ ಇಲ್ಲ ಎಂಬ ಅವರ ಚಿಂತನೆಗೆ ಇದು ಕೈಗನ್ನಡಿ ಅಲ್ಲವೇ ಎಂದು ಅವರು ಪ್ರಶ್ನಿಸಿದರು. .
ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಒಳಜಗಳವು ಮುಂದುವರಿದಿದ್ದು, “ಎತ್ತು ಏರಿಗೆ ಕೋಣ ನೀರಿಗೆ” ಎಂಬ ರೀತಿಯಲ್ಲಿ ಡಿಕೆಶಿ- ಸಿದ್ದರಾಮಯ್ಯ ನಡುವಿನ ಕಿತ್ತಾಟ ಮುಂದುವರಿದಿದೆ. “ಕೂಸು ಹುಟ್ಟುವ ಮೊದಲೇ ಕುಲಾವಿ” ಹೊಲಿಸುವ ಮಾದರಿಯಲ್ಲಿ ವಿಧಾನಸಭಾ ಚುನಾವಣೆ ಸಾಕಷ್ಟು ದೂರ ಇರುವಾಗಲೇ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿ ಹಲವು ನಾಯಕರು ಕಾಂಗ್ರೆಸ್ ಗೆದ್ದರೆ ಸಿಎಂ ಅಭ್ಯರ್ಥಿ ಯಾರು ಎಂಬ ಚರ್ಚೆಗೆ ಮುಂದಾಗಿದ್ದಾರೆ. ಇದು ಹತಾಶೆಯ ಪ್ರತೀಕವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.