ನವದೆಹಲಿ: ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮುಂಬರುವ ಲೋಕಸಭೆ ಚುನಾವಣೆಗೆ ತಮ್ಮ ಮೈತ್ರಿಯನ್ನು ಶನಿವಾರ ಖಚಿತಪಡಿಸಿವೆ. ಪಕ್ಷಗಳು ದೆಹಲಿ, ಗುಜರಾತ್ ಮತ್ತು ಹರಿಯಾಣಕ್ಕೆ ತಮ್ಮ ಸೀಟು ಹಂಚಿಕೆ ಒಪ್ಪಂದಗಳನ್ನು ಹಂಚಿಕೊಂಡಿವೆ. ಎಎಪಿ-ಕಾಂಗ್ರೆಸ್ ನಾಯಕರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳ ಪೈಕಿ ಆಪ್ ನಾಲ್ಕು ಕ್ಷೇತ್ರದಲ್ಲಿ ಹಾಗೂ ಕಾಂಗ್ರೆಸ್ ಮೂರು ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದೆ.
ಅದರಂತೆ ಆಮ್ ಆದ್ಮಿ ಪಕ್ಷವು ದಕ್ಷಿಣ ದೆಹಲಿ, ಪಶ್ಚಿಮ ದೆಹಲಿ, ಪೂರ್ವ ದೆಹಲಿ ಮತ್ತು ನವದೆಹಲಿ ಲೋಕಸಭಾ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು ಮತ್ತು ಕಾಂಗ್ರೆಸ್ ಚಾಂದಿನಿ ಚೌಕ್, ವಾಯವ್ಯ ದೆಹಲಿ ಮತ್ತು ಈಶಾನ್ಯ ದೆಹಲಿ ಕ್ಷೇತ್ರಗಳಿಂದ ಸ್ಪರ್ಧಿಸಲಿದೆ ಎಂದು ಹೇಳಿದೆ.
ಮಾಧ್ಯಮದ ಜೊತೆ ಮಾತನಾಡಿದ ಆಮ್ ಆದ್ಮಿ ಪಕ್ಷದ ನಾಯಕ ಸಂದೀಪ್ ಪಾಠಕ್ ಲೋಕಸಭೆ ಚುನಾವಣೆಯಲ್ಲಿ INDIA ಒಕ್ಕೂಟದ ಭಾಗವಾಗಿ ಎರಡೂ ಪಕ್ಷಗಳು ಒಟ್ಟಾಗಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇವೆ. ಈ ಮೈತ್ರಿಯಿಂದಾಗಿ ಬಿಜೆಪಿ ಮಾಡಿದ ತಂತ್ರ ಉಲ್ಟಾ ಆಗಲಿದೆ. ಜೊತೆಗೆ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಆಪ್ ಪರವಾಗಿ ಸೌರಭ್ ಭಾರದ್ವಾಜ್, ಅತಿಶಿ, ಸಂದೀಪ್ ಪಾಠಕ್ ಉಪಸ್ಥಿತರಿದ್ದರು. ಕಾಂಗ್ರೆಸ್ ಕಡೆಯಿಂದ ಮುಕುಲ್ ವಾಸ್ನಿಕ್, ದೀಪಕ್ ಬಬಾರಿಯಾ ಮತ್ತು ಅರವಿಂದರ್ ಸಿಂಗ್ ಲವ್ಲಿ ಉಪಸ್ಥಿತರಿದ್ದರು.