Advertisement
ಬೆಂಗಳೂರು: ಈ ಸಲ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್, ಗೆಲ್ಲುವ ಮಾನದಂಡವೆಂದು ಹೇಳಿಕೊಂಡು ಟಿಕೆಟ್ ಹಂಚಿಕೆಯಲ್ಲಿ ಪಕ್ಷಾಂತರಿಗಳಿಗೆ ಮಣೆ ಹಾಕುತ್ತಿರುವುದು ಪಕ್ಷ ನಿಷ್ಠರಲ್ಲಿ ವ್ಯಾಪಕ ಅಸಮಾಧಾನ ಹಾಗೂ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ಟಿಕೆಟ್‌ಗಾಗಿ ವಲಸಿಗ-ಮೂಲ ಕಾಂಗ್ರೆಸ್ಸಿಗರ ನಡುವೆ ತೀವ್ರ ಪೈಪೋಟಿ-ಜಿದ್ದಾಜಿದ್ದಿ ನಡೆದಿದ್ದು, ಇದು ಯಾವುದೇ ಕ್ಷಣದಲ್ಲಿ ಸ್ಫೋಟಿಸುವ ಸಾಧ್ಯತೆಗಳಿವೆ. ಹೀಗಾಗಿ ಕಾಂಗ್ರೆಸ್ ಪರಿಸ್ಥಿತಿ ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡದಂತಿದೆ.
Related Articles
ಇದಕ್ಕೆ ತಾಜಾ ನಿದರ್ಶನವೆಂದರೆ ಚಿಕ್ಕಮಗಳೂರಿನಲ್ಲಿ ಶನಿವಾರ ನಡೆದ ಮೂಲ ಕಾಂಗ್ರೆಸ್ಸಿಗರ ಸಭೆಯ ರಾದ್ಧಾಂತವೇ ಸಾಕ್ಷಿ. ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ತಮ್ಮಯ್ಯ ವಿರುದ್ಧ ಮೂಲ ಕಾಂಗ್ರೆಸ್ಸಿಗರು ಸಿಡಿದೆದ್ದಿದ್ದಾರೆ. ಅದೇ ರೀತಿ ಗುಬ್ಬಿಯಲ್ಲಿ ಶ್ರೀನಿವಾಸ್, ಮೊಳಕಾಲ್ಮೂರಿನಲ್ಲಿ ಎನ್.ವೈ. ಗೋಪಾಲಕೃಷ್ಣ, ಚಿಕ್ಕನಾಯಕನಹಳ್ಳಿಯಲ್ಲಿ ಕಿರಣ್‌ಕುಮಾರ್, ತುಮಕೂರು ಗ್ರಾಮಾಂತರದಲ್ಲಿ ನಿಂಗಪ್ಪ, ತುರುವೇಕೆರೆಯಲ್ಲಿ ಕಾಂತರಾಜು, ಗುರುಮಿಠಕಲ್‌ನಲ್ಲಿ ಬಾಬುರಾವ್ ಚಿಂಚನಸೂರು, ರಾಜಾಜಿನಗರದಲ್ಲಿ ಪುಟ್ಟಣ್ಣ, ಕಡೂರಿನಲ್ಲಿ ವೈ.ಎಸ್.ವಿ. ದತ್ತಗೆ ಟಿಕೆಟ್ ಕೊಡುವುದಕ್ಕೆ ಅಪಸ್ವರಗಳು ಕೇಳಿಬಂದಿವೆ. ಇನ್ನು ಪಕ್ಷಕ್ಕೆ ಸೇರಲಿದ್ಧಾರೆಂದು ಹೇಳಲಾಗುತ್ತಿರುವ ಆಯನೂರು ಮಂಜುನಾಥ್, ಅರಸೀಕೆರೆಯ ಶಿವಲಿಂಗೇಗೌಡರ ನಡೆಗೂ ಮೂಲ ಕಾಂಗ್ರೆಸ್ಸಿಗರಿಂದ ವಿರೋಧ ವ್ಯಕ್ತವಾಗುತ್ತಿದೆ.
Advertisement
ಮತ್ತೆ ಜಿಗಿಯುವುದಿಲ್ಲವೇ?ಕೆಲವರು ಹಣ, ಅಧಿಕಾರದ ಆಸೆಗಾಗಿ ಪಕ್ಷ ತೊರೆದು ಹೋದರು, ಮತ್ತೆ ಅವರೇ ಅಲ್ಲಿ ಅಧಿಕಾರ ಅನುಭವಿಸಿ ಇಲ್ಲವೇ ಅಲ್ಲಿ ಅಧಿಕಾರ ಸಿಗಲಿಲ್ಲವೆಂಬ ಕಾರಣಕ್ಕೆ ಬರುತ್ತಿದ್ದಾರೆ. ಇವರಿಗೆ ಪಕ್ಷ ನಿಷ್ಠೆ ಇರುವುದಿಲ್ಲ, ಸ್ವಾರ್ಥವೇ ಪ್ರಮುಖವಾಗಿರುತ್ತದೆ. ಅಂತಹವರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳುವುದರಿಂದ ಪಕ್ಷ ನಿಷ್ಠರಿಗೆ ದ್ರೋಹ ಮಾಡಿದಂತೆ ಅಲ್ಲವೇ? ಮತ್ತೆ ವಲಸಿಗರು ಪಕ್ಷದಲ್ಲೇ ಶಾಶ್ವತವಾಗಿ ಉಳಿಯುತ್ತಾರೆ ಎಂಬುದಕ್ಕೆ ಯಾವ ಖಾತರಿ. ಜೆಡಿಎಸ್, ಬಿಜೆಪಿಯಿಂದ ತಿರಸ್ಕೃತಗೊಂಡವರಿಗೆ ಟಿಕೆಟ್ ಕೊಡುವ ಪ್ರಯತ್ನ ಸರಿಯಲ್ಲ, ಒಂದು ವೇಳೆ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಅವರು ಮತ್ತೆ ಜಿಗಿಯುವುದಿಲ್ಲ ಎಂಬುದಕ್ಕೆ ಯಾವ ಗ್ಯಾರೆಂಟಿ ಎಂಬುದು ಮೂಲ ಕಾಂಗ್ರೆಸ್ಸಿಗರ ಪ್ರಶ್ನೆ. “ತ್ರಿಬಲ್ ಸಿ’ ಗೆ ಮನ್ನಣೆ
ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ “ಕ್ಯಾಷ್, ಕಾಸ್ಟ್ ಹಾಗೂ ಕ್ಯಾಂಡಿಡೇಟ್’ ಗೆ ಮನ್ನಣೆ ಕೊಡಲಾಗಿದೆ. ಹಣ ಬಲ, ತೋಳ್ಪಲ ಹಾಗೂ ಜಾತಿಬಲದಲ್ಲಿ ಚುನಾವಣೆ ಗೆಲ್ಲುತ್ತೇವೆ ಎಂಬ ಗುಂಗಿನಲ್ಲಿರುವುದು ಸರಿಯಲ್ಲ, ಪಕ್ಷದ ಸಿದ್ಧಾಂತಕ್ಕೆ ತಿಲಾಂಜಲಿ ನೀಡಿ ಹಾಗೂ ಸಿದ್ಧಾಂತಕ್ಕೆ ಬದ್ಧತೆ ಇಲ್ಲದವರಿಗೆ ಅವಕಾಶ ಕಲ್ಪಿಸಿದರೆ ಅದು ನಾಯಕರ ವೈಫಲ್ಯವೇ ಹೊರತು ಕಾರ್ಯಕರ್ತರ ವೈಫಲ್ಯವಲ್ಲ ಎಂಬ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. -ಎಂ.ಎನ್.ಗುರುಮೂರ್ತಿ