Advertisement

ಯಕ್ಷ ಪ್ರತಿಭೆ ಚಿತ್ತರಂಜನ್‌ಗೆ ಅಭಿನಂದನೆ

12:31 AM Oct 23, 2020 | mahesh |

ಪೆರ್ಲ: ಯಕ್ಷಪ್ರತಿಭೆ, ಧೀಂಗಿಣ ವೀರ ಚಿತ್ತರಂಜನ್‌ ಕಡಂದೇಲು ಅವರ ಯಕ್ಷಗಾನದ ವೀಡಿಯೋಗಳನ್ನು ಮೆಚ್ಚಿದ ಅಭಿಮಾನಿಯೊಬ್ಬರು ಮನೆಗೆ ಬಂದು ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಿದ ಅಪರೂಪದ ಘಟನೆ ಪಾಣಾಜೆ ಆರ್ಲಪದವು ಸಮೀಪದ ಪ್ರಕೃತಿ ರಮಣೀಯ ಕಾನನ ಪ್ರದೇಶ ಕಡಂದೇಲುವಿನಲ್ಲಿ ನಡೆದಿದೆ.

Advertisement

ಬೆಳ್ತಂಗಡಿ ಮಚ್ಚಿನ ಶ್ರೀ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಿಂದಿ ಶಿಕ್ಷಕ ಸುಧೀಂದ್ರ ಬಿ. ಅವರು ದೂರದ ಧರ್ಮಸ್ಥಳದಿಂದ ಚಿತ್ತರಂಜನ್‌ ಅವರನ್ನು ಅಭಿನಂದಿಸಲೆಂದೇ ಕಡಂದೇಲು ರಾಮಚಂದ್ರ ಭಟ್‌ ಅವರ ಮನೆಗೆ ಆಗಮಿಸಿದ್ದರು. ಚಿತ್ತರಂಜನ್‌ ಅವರ ಗಣಪತಿ ಸ್ತುತಿಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ತಾಯಿ ಜ್ಯೋತ್ಸಾ ಎಂ.ಕಡಂದೇಲು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶ್ರೀ ಪೇಜಾವರ ವಿಶ್ವೇಶತೀರ್ಥ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಪೆರ್ಲ ಶ್ರೀ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ನಾಟ್ಯ ಗುರು, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಬ್ಬಣಕೋಡಿ ರಾಮಭಟ್‌ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಡಂದೇಲು ಮನೆತನದವರಿಗೆ ಯಕ್ಷಗಾನ ಕಲೆಯು ರಕ್ತಗತವಾಗಿ ಬಂದಿದೆ. ಚಿತ್ತರಂಜನ್‌ ಹಾಗೂ ಚಿನ್ಮಯಕೃಷ್ಣ ಸಹೋದರರು ಇದಕ್ಕೆ ಉದಾಹರಣೆ ಎಂದರು.

ಚಿತ್ತರಂಜನ್‌ ಹಾಗೂ ಮನೆಯವರು ನಾಟ್ಯಗುರುಗಳಿಗೆ ಶಾಲು ಹೊದೆಸಿ, ಫಲಪುಷ್ಪ ನೀಡಿ ಗುರುವಂದನೆ ಸಲ್ಲಿಸಿದರು. ಸುಧೀಂದ್ರ ಬಿ.ಧರ್ಮಸ್ಥಳ ಅವರು ಬಾಲ ಪ್ರತಿಭೆ ಚಿತ್ತರಂಜನ್‌ಗೆ ಪೇಟ ತೊಡಿಸಿ, ಹಾರ ಹಾಕಿ, ಶಾಲು ಹೊದೆಸಿ ಸ್ಮರಣಿಕೆಯನ್ನು ನೀಡಿ ಅಭಿನಂದಿಸಿದರು. ಪ್ರತಿಭಾ ಪುರಸ್ಕಾರ ಸ್ವೀಕರಿಸಿ ಚಿತ್ತರಂಜನ್‌ ಮಾತನಾಡಿ, ತನ್ನೆಲ್ಲ ಸಾಧನೆಗೆ ನಾಟ್ಯಗುರುಗಳೇ ಕಾರಣ ಎಂದರು.

ಉಪನ್ಯಾಸಕ, ಯಕ್ಷಗಾನ ಕಲಾವಿದ ರಾಮಚಂದ್ರ ಭಟ್‌ ಪನೆಯಾಲ, ಪಾಣಾಜೆ ಸುಬೋಧ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಮೊಳಕ್ಕಾಲು ಶ್ರೀಕೃಷ್ಣ ಭಟ್‌, ಗಣಪತಿ ಭಟ್‌ ಶೆಟ್ಟಿಬೈಲ್‌ ಹಾಗೂ ಯೋಗ ಗುರು ಪ್ರಕಾಶಾನಂದ ವಾರಣಾಸಿ ಶುಭ ಹಾರೈಸಿದರು.

Advertisement

ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ ಸುಧೀಂದ್ರ ಬಿ.ಧರ್ಮಸ್ಥಳ ಅವರಿಗೆ ಕಡಂದೇಲು ಮನೆಯವರು ಗೌರವಾರ್ಪಣೆ ಸಲ್ಲಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಶಿವಕುಮಾರ ಕೆ. ಕಾಕೆಕೊಚ್ಚಿ ಅಧ್ಯಕ್ಷತೆ ವಹಿಸಿದರು. ಚಿತ್ತರಂಜನ್‌ಗೆ ಎಡನೀರು ಮೇಳದಲ್ಲಿ ಅನೇಕ ಅವಕಾಶಗಳನ್ನು ನೀಡಿದ ಮಠಾಧೀಶ ಶ್ರೀ ಕೇಶವಾನಂದಭಾರತೀ ಸ್ವಾಮೀಜಿ ಹಾಗ ಚಿತ್ತರಂಜನ್‌ನ ಭಾಗವತಿಕೆ ಗುರು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಅವರಿಗೆ ನುಡಿನಮನ, ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next