ಸುರಪುರ: ತಾಲೂಕು ವೀರಶೈವ ಸಮಿತಿ ಅಧ್ಯಕ್ಷ ಡಾ| ಸುರೇಶ ಸಜ್ಜನ್ ಅವರು ಬೆಂಗಳೂರನ ವರ್ಚವೆಲ್ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಹಿನ್ನೆಲೆಯಲ್ಲಿ ತಾಲೂಕು ವೀರಶೈವ ಲಿಂಗಾಯತ ಸಮಿತಿ ವತಿಯಿಂದ ಜ.7ರಂದು ಬೆಳಗ್ಗೆ ವೀರಶೈವ ಕಲ್ಯಾಣ ಮಂಟಪದಲ್ಲಿ ಅಭಿನಂಧನಾ ಮತ್ತು ಜನಪದ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವೀರಶೈವ ಸಮಿತಿಯ ಪ್ರಮುಖ ಶಾಂತಪ್ಪ ಬೂದಿಹಾಳ ತಿಳಿಸಿದ್ದಾರೆ.
ರಂಗಂಪೇಟೆಯ ಬಸವೇಶ್ವರ ಉಚಿತ ಪ್ರಸಾದ ನಿಲಯದಲ್ಲಿ ಬುಧವಾರ ಜರುಗಿದ ತಾಲೂಕು ವೀರಶೈವ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ವಿದ್ವನ್ಮಣಿ ಮತ್ತು ಸಮಾಜದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ಮಾತ್ರ ಈ ಪದವಿ ಪ್ರದಾನ ಮಾಡಲಾಗುತ್ತದೆ. ಸಜ್ಜನ್ ಅವರು ಕಳೆದ ಹಲವು ವರ್ಷಗಳಲ್ಲಿನ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಈ ಪದವಿ ನೀಡಿ ಗೌರವಿಸಲಾಗಿದ್ದು, ಇದು ವೀರಶೈವ ಸಮಾಜಕ್ಕೆ ಮತ್ತು ತಾಲೂಕಿಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಸಮಿತಿಯು ಡಾ| ಸಜ್ಜನ್ ಅವರನ್ನು ಅದ್ಧೂರಿಯಾಗಿ ಸನ್ಮಾನಿಸಲು ತಿರ್ಮಾನಿಸಿದ್ದು, ಇದರ ಅಂಗವಾಗಿ ಜನಪದ ಸಂಭ್ರಮ ಕಾರ್ಯಕ್ರಮ ಮತ್ತು ಸಜ್ಜನ್ ಅವರು ಬೆಳೆದು ಬಂದ ದಾರಿ ಕುರಿತು ಕೃತಿ ಬಿಡುಗಡೆ ಸಮಾರಂಭ ನಡೆಯಲಿದೆ. ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠದಪ್ರಭುಲಿಂಗ ಸ್ವಾಮೀಜಿ, ದೇವಪುರ ಮಠದ ಶಿವಮೂರ್ತಿ ಶಿವಾಚಾರ್ಯರು, ರುಕಾಪುರದ ಗುರುಶಾಂತಮೂರ್ತಿ ಶಿವಾಚಾರ್ಯರು, ಶ್ರೀಗಿರಿಮಠದ ಬಸವಲಿಂಗ ದೇವರು ಸಾನ್ನಿಧ್ಯ ವಹಿಸುವರು. ಸಮಿತಿ ಗೌರವಾಧ್ಯಕ್ಷ ಬಸವಲಿಂಗಪ್ಪ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಂಗಳೂರನ ಜೋಗ್ಲಿ ಸಿದ್ದರಾಜ್ ತಂಡದವರು ಜನಪದ ಗೀತೆ ಗಾಯನ ಮಾಡುವರು. ಧಾರವಾಡದ ಇಮಾಮ್‌ಸಾಬ್ ವಲ್ಲೆಪ್ಪನವರ ತಂಡದವರು ಭಾವಭಕ್ತಿ ಗೀತೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ವಿವರಿಸಿದರು.
ಸಮಾಜದ ಮುಖಂಡರಾದ ಎಸ್.ಎನ್. ಕನಕರಡ್ಡಿ, ಮನೋಹರ ಜಾಲಹಳ್ಳಿ, ಸಂಗಣ್ಣ ಯಕ್ಕೆಳ್ಳಿ, ವಿರೇಶ ನಿಷ್ಠಿ ದೇಶಮುಖ, ಬಸವಲಿಂಗಪ್ಪ ಸಜ್ಜನ್, ಮಂಜುನಾಥ ಗುಳಗಿ, ಶಿವಶರಣಪ್ಪ ಹೆಡಗಿನಾಳ ಇದ್ದರು. ಕ್ಷೀರಲಿಂಗಯ್ಯ ಹಿರೇಮಠಬೋನ್ಹಾಳ ಸ್ವಾಗತಿಸಿ, ನಿರೂಪಿಸಿದರು. ಶಾಂತರಾಜ್ ಬಾರಿ ವಂದಿಸಿದರು.