ನವದೆಹಲಿ: ಉತ್ತರ ಪ್ರದೇಶದ ಲಖೀಂಪುರದಲ್ಲಿ ರೈತರು ಹಾಗೂ ಬಿಜೆಪಿ ನಡುವಿನ ಘರ್ಷಣೆಗೆ 9 ಮಂದಿ ಬಲಿಯಾದ ಘಟನೆಯ ಕುರಿತು ಕಾಂಗ್ರಸ್ ನಾಯಕ ರಾಹುಲ್ ಗಾಂಧಿ ಬುಧವಾರ ಕಿಡಿಕಾರಿದ್ದು, ‘ಲಕ್ನೋಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಲಖೀಂಪುರಕ್ಕೆ ಏಕೆ ಭೇಟಿ ನೀಡಲಿಲ್ಲ’ ಎಂದು ಪ್ರಶ್ನಿಸಿದ್ದಾರೆ. ಇದೆ ವೇಳೆ ಇಬ್ಬರು ಮುಖ್ಯಮಂತ್ರಿಗಳೊಂದಿಗೆ ಲಖೀಂಪುರಕ್ಕೆ ತೆರಳಲು ಅವಕಾಶ ನೀಡುವಂತೆ ರಾಹುಲ್ ಗಾಂಧಿ ಮಾಡಿರುವ ಮನವಿಯನ್ನು ಉತ್ತರ ಪ್ರದೇಶ ಸರಕಾರ ನಿರಾಕರಿಸಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ,’ನಾವು ರೈತರ ಪರ ಮಾತನಾಡಲು ಹೋದರೆ ರಾಜಕೀಯ ಮಾಡುತ್ತಿದ್ದೀರಿ ಎನ್ನುತ್ತೀರಿ, ನೀವು ಈ ವಿಚಾರದಲ್ಲಿ ಧ್ವನಿಯೆತ್ತಬಹುದು, ನಮಗೇಕೆ ಮಾತನಾಡುವ ಅವಕಾಶ ಇಲ್ಲ’ ಎಂದು ಮಾಧ್ಯಮಗಗಳನ್ನೇ ಪ್ರಶ್ನಿಸಿದರು.
ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿ, ‘ಅವರು ನಮ್ಮನ್ನು ಬಂಧಿಸಲಿ, ಹಲ್ಲೆ ಮಾಡಲಿ ಅಥವಾ ಏನೇ ಮಾಡಲಿ ನಮಗೆ ಅದು ಪರಿಣಾಮ ಬೀರುವುದಿಲ್ಲ. ನಾವು ರೈತರ ಪರ ಹೋರಾಟ ಮಾಡಿಯೇ ಸಿದ್ಧ’ ಎಂದರು.
‘ಭಾರತದಲ್ಲಿಂದು ಸರ್ವಾಧಿಕಾರವಿದೆ. ಬಿಜೆಪಿ ಮತ್ತು ಆರ್ ಎಸ್ ಎಸ್ ದೇಶದ ಸಾಂಸ್ಥಿಕ ಚೌಕಟ್ಟನ್ನು ನಿಯಂತ್ರಿಸುತ್ತಿದೆ’ ಎಂದರು.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾರನ್ನು ಬಂಧಿಸಿರುವ ಬಗ್ಗೆ ಮಾತನಾಡಿ, ‘ನಮಗೆ ಬಂಧನಕ್ಕಿಂತ ರೈತರನ್ನು ಕಾಪಾಡುವುದು ಮುಖ್ಯವಾಗಿದೆ. ನಾನು ಇಂದು ಇಬ್ಬರು ಮುಖ್ಯಮಂತ್ರಿಗಳೊಂದಿಗೆ ಲಖೀಂಪುರಕ್ಕೆ ತೆರಳಿ ರೈತರೊಂದಿಗೆ ಮಾತನಾಡುತ್ತೇನೆ’ ಎಂದರು.
ರಾಹುಲ್ ಗಾಂಧಿ ಅವರು ಛತ್ತೀಸ್ ಘಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಛನ್ನಿ ಅವರೊಂದಿಗೆ ಲಖೀಂಪುರ ಭೇಟಿಗೆ ಮುಂದಾಗಿದ್ದಾರೆ. ಅವರ ಭೇಟಿ ಸಾಧ್ಯವಾಗದಂತೆ ವಿಮಾನ ನಿಲ್ದಾಣದಲ್ಲಿ ಭಾರಿ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.
ರಾಹುಲ್ ಗಾಂಧಿ ಅವರನ್ನು ಬರಲು ಇತ್ತ ಬರಲು ಬಿಡಬಾರದು ಎಂದು ಲಕ್ನೋ ಪೊಲೀಸರು ದೆಹಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಮಂಗಳವಾರವೂ ಭೂಪೇಶ್ ಬಘೇಲ್ ಅವರನ್ನು ವಿಮಾನ ನಿಲ್ದಾಣದಲ್ಲೇ ತಡೆಯಲಾಗಿತ್ತು.