Advertisement
ದೇವೇಗೌಡರೇ ಮೊದಲ ಆದ್ಯತೆಜಿಲ್ಲೆಯ ಎಲ್ಲಾ 6 ಮಂದಿ ಜೆಡಿಎಸ್ ಶಾಸಕರು, ಪಕ್ಷದ ಮುಖಂಡರು ಸಭೆ ಸೇರಿ, ಚರ್ಚೆ ನಡೆಸಿದ ನಂತರ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರು ಸ್ಪಷ್ಟಪಡಿಸಿದರು. ಸುದ್ದಿಗಾರರ ಜೊತೆ ಮಾತನಾಡಿ, ದೇವೇಗೌಡರೇ ಹಾಸನ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದು ಶಾಸಕರೆಲ್ಲರ ಬಯಕೆ. ನಮ್ಮ ಮೊದಲ ಆದ್ಯತೆಯೂ ಕೂಡ. ದೇವೇಗೌಡರು ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಭಿಪ್ರಾಯಗಳನ್ನು ಪಡೆದುಕೊಂಡು ಅಭ್ಯರ್ಥಿ ಆಯ್ಕೆಯ ನಿರ್ಧಾರ ಮಾಡುತ್ತೇವೆ ಎಂದರು.
ಅಭ್ಯರ್ಥಿ ಆಯ್ಕೆಯ ಹೊಣೆಯಿಂದ ಹೊರತಾಗಿರುವ ಕಾಂಗ್ರೆಸ್ ಮುಖಂಡರು ನೆಮ್ಮದಿಯಿಂದ ಇದ್ದರೆ, ಬಿಜೆಪಿ ಮುಖಂಡರು ಮಾತ್ರ ಅಭ್ಯರ್ಥಿಗಾಗಿ ಹುಡುಕಾಡುತ್ತಿದ್ದಾರೆ. ಕುರುಬ ಸಮುದಾಯದ ಮುಖಂಡ ನವಿಲೆ ಅಣ್ಣಪ್ಪ, ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ.ರವಿ, ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ ಹೆಸರುಗಳು ಕೇಳಿ ಬರುತ್ತಿವೆ. ಕೊನೆ ಕ್ಷಣದಲ್ಲಿ ಎ.ಮಂಜು ಅಭ್ಯರ್ಥಿಯಾದರೂ ಅಚ್ಚರಿಯಿಲ್ಲ. ಈಗಾಗಲೇ ಬಿಜೆಪಿ ಹೊಸ್ತಿಲಿನಲ್ಲಿ ನಿಂತಿರುವ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಎ.ಮಂಜು ಅವರು ದೇವೇಗೌಡರ ಕುಟುಂಬದಲ್ಲಿ ಅಭ್ಯರ್ಥಿ ಯಾರಾಗುವರು ಎಂಬುದನ್ನು ಕಾದು ನೋಡಿ ನಂತರ ನಿರ್ಧಾರ ತೆಗೆದುಕೊಳ್ಳಲು ಕಾಯುತ್ತಿದ್ದಾರೆ. ದೇವೇಗೌಡರ ಕುಟುಂಬದವರೂ ಈ ಬಗ್ಗೆ ಬಾಯಿ ಬಿಡುತ್ತಿಲ್ಲ. ದೇವೇಗೌಡರ ಕುಟುಂಬದವರೇ ಇಲ್ಲಿ ಅಭ್ಯರ್ಥಿ ಎಂಬುದಂತೂ ಖಚಿತ. ಆದರೆ, ಕುಟುಂಬದೊಳಗೆ ಯಾರು ಎಂಬ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸೀಟು ಹಂಚಿಕೆ ಕುರಿತು ಅಂತಿಮ ನಿರ್ಧಾರ ಹೊರ ಬೀಳುವವರೆಗೂ ಹಾಸನ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಗೊಂದಲ ಮುಗಿಯುವುದಿಲ್ಲ.
Related Articles
ಮಂಡ್ಯದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖೀಲ್ ಅಭ್ಯರ್ಥಿಯಾದರೆ, ಹಾಸನದಲ್ಲಿ ಎಚ್.ಡಿ.ರೇವಣ್ಣ ಅವರ ಪುತ್ರರಿಬ್ಬರಲ್ಲಿ ಒಬ್ಬರು ಅಭ್ಯರ್ಥಿಯಾಗುವುದು ಖಚಿತ. ನಿಖೀಲ್ ಅಭ್ಯರ್ಥಿಯಾಗದಿದ್ದರೆ ಹಾಸನದಲ್ಲಿ ದೇವೇಗೌಡರೇ ಅಭ್ಯರ್ಥಿ ಎಂಬುದು ಜೆಡಿಎಸ್ ಮುಖಂಡರ ಅಭಿಪ್ರಾಯ. ಹಾಗಾಗಿ, ಹಾಸನ ಅಭ್ಯರ್ಥಿ ನಿರ್ಧಾರದ ಕೊಂಡಿ ಮಂಡ್ಯ ಜಿಲ್ಲೆಯ ರಾಜಕಾರಣವನ್ನು ಅವಲಂಬಿಸಿದೆ. ವಯೋಮಾನದ ಕಾರಣದಿಂದ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದನ್ನು ದೇವೇಗೌಡರು ಪರೋಕ್ಷವಾಗಿ ಹಲವು ಬಾರಿ ಪ್ರಸ್ತಾಪಿಸಿದ್ದಾರೆ. ಆದರೆ, ಹಾಸನದಲ್ಲಿ ಮೊಮ್ಮಗನನ್ನು ಸ್ಪರ್ಧೆಗಿಳಿಸುವ ಸಂದರ್ಭ ಬಂದರೆ ದೇವೇಗೌಡರು ಮೈಸೂರು ಅಥವಾ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆಗಿಳಿಯುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗಾಗಿ, ಹಾಸನ ಹೊರತುಪಡಿಸಿ ಸುರಕ್ಷಿತ ಕ್ಷೇತ್ರದ ಬಗ್ಗೆ ದೇವೇಗೌಡರು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಗೌಡರ ಆಪ್ತ ಮೂಲಗಳು ಹೇಳುತ್ತಿವೆ.
Advertisement
ನಾನಿನ್ನೂ ತೀರ್ಮಾನ ಮಾಡಿಲ್ಲ
ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸುವ ಬಗ್ಗೆ ನನ್ನಲ್ಲಿಯೇ ಗೊಂದಲವಿದೆ. ನಾನಿನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ದೇವೇಗೌಡ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿ, ಹಾಸನ ಜಿಲ್ಲೆಯ ಜನ ನನ್ನನ್ನು ರಾಜಕೀಯದಲ್ಲಿ ಬೆಳೆಸಿದ್ದಾರೆ. ಹಾಗೆಯೆ, ರಾಮನಗರ ಜಿಲ್ಲೆಯ ಜನರೂ ನನ್ನ ರಾಜಕೀಯದ ಸಂಕಷ್ಟದ ಕಾಲದಲ್ಲಿ ಕೈ ಹಿಡಿದಿದ್ದಾರೆ. ನಾನು ಮತ್ತು ನನ್ನ ಪುತ್ರ ಮುಖ್ಯಮಂತ್ರಿಯಾಗಲೂ ರಾಮನಗರದ ಜನ ಕಾರಣೀಭೂತರಾಗಿದ್ದಾರೆ. ಆದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಯಬೇಕೇ, ಬೇಡವೇ ಎಂಬ ಗೊಂದಲದಲ್ಲಿದ್ದೇನೆ. ಈಗ 86ನೇ ವರ್ಷ ಪೂರ್ಣಗೊಳಿಸುತ್ತಿರುವ ನಾನು ಜನಪ್ರತಿನಿಧಿಯಾಗಿಯೇ ಪಕ್ಷ ಸಂಘಟನೆ, ಸಲಹೆ, ಸಹಕಾರ ನೀಡಬೇಕೆಂದೇನೂ ಇಲ್ಲ. ಚುನಾವಣೆಗೆ ನಿಲ್ಲದೆಯೇ ಆ ಕೆಲಸ ಮಾಡಬಹುದು. ವೈಯಕ್ತಿಕವಾಗಿ ಚುನಾವಣಾ ರಾಜಕಾರಣ ಸಾಕೆನಿಸಿದೆ. ಆದರೆ, ಸಿರಿಗೆರೆಯ ಸ್ವಾಮೀಜಿಯವರು ನಿವೃತ್ತಿ ಬಯಸಿ ಮಠದಿಂದ ಹೊರ ಬರಲು ಸಜ್ಜಾಗಿದ್ದರು. ಆಗ ಭಕ್ತರು ಬಿಡಲಿಲ್ಲ. ಹಾಗೆಯೇ, ನನ್ನ ಕಾರ್ಯಕರ್ತರು, ಅಭಿಮಾನಿಗಳೂ ನಾನು ಸ್ಪರ್ಧಿಸಲಾರೆ ಎಂದರೆ ಬಿಡಲಾರರು ನೋಡೋಣ ಎಂದರು.
ಹಾಸನ ಜಿಲ್ಲೆಯ ಜನ ನಿಮ್ಮ ಸ್ಪರ್ಧೆಯನ್ನೇ ಬಯಸಿದರೆ ಏನು ಮಾಡುವಿರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯುವಕರೂ ಮುಂದೆ ಬರಬೇಕಲ್ಲವೇ? ಲೋಕಸಭೆಯಲ್ಲಿ ಈಗ 100ಕ್ಕಿಂತ ಹೆಚ್ಚು ಯುವಕರೇ ಸಂಸದರಿದ್ದಾರೆ ಎಂದರು.
ಸ್ಪರ್ಧೆಗೆ ಪ್ರಜ್ವಲ್ ತಯಾರಿಪ್ರಜ್ವಲ್ ರೇವಣ್ಣ ಅವರು ಈ ಬಾರಿಯ ಸ್ಪರ್ಧೆಗೆ ಹಾತೊರೆಯುತ್ತಿದ್ದಾರೆ. ಆ ನಿಟ್ಟಿನಲ್ಲಿ ಸಿದಟಛಿತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಅವರ ತಾಯಿ ಭವಾನಿ ರೇವಣ್ಣ ಅವರೂ ಮಗನನ್ನು ಸ್ಪರ್ಧೆಗಿಳಿಸುವ ಎಲ್ಲಾ ತಯಾರಿ ಮಾಡುತ್ತಿದ್ದಾರೆ. ಆದರೆ, ಪ್ರಜ್ವಲ್ ತಂದೆ, ಜಿಲ್ಲಾ ಉಸ್ತುವಾರಿ ಸಚಿವ, ಎಚ್ .ಡಿ.ರೇವಣ್ಣ ಅವರು ಮಾತ್ರ ಇದುವರೆಗೂ ಮಗನ ಸ್ಪರ್ಧೆಯ ಬಗ್ಗೆ ತುಟಿ ಬಿಚ್ಚಿಲ್ಲ. ದೇವೇಗೌಡರೇ ಮತ್ತೂಮ್ಮೆ ಹಾಸನದಿಂದ ಸ್ಪರ್ಧಿಸಲಿ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಪಕ್ಷದ ಬಹುಪಾಲು ಮುಖಂಡರು ಮತ್ತು ಕಾರ್ಯಕರ್ತರೂ ಕೂಡ ದೇವೇಗೌಡರ ಸ್ಪರ್ಧೆಯನ್ನೇ ಬಯಸುತ್ತಿದ್ದಾರೆ. ಅಷ್ಟೇ ಏಕೆ, ಕಾಂಗ್ರೆಸ್ ಕಾರ್ಯಕರ್ತರೂ ಕೂಡ ದೇವೇಗೌಡರು ಸ್ಪರ್ಧಿಸಿದರೆ ತಮ್ಮ ಬೆಂಬಲ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ದೇವೇಗೌಡರ ಕುಟುಂಬದಲ್ಲಿನ ರಾಜಕೀಯ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ದೇವೇಗೌಡರು ಲೋಕಸಭಾ ಚುನಾವಣೆಗೆ ಹಾಸನದಿಂದ ಪ್ರಜ್ವಲ್ ರೇವಣ್ಣ ಅವರನ್ನು ಸ್ಪರ್ಧೆಗಿಳಿಸುವ ಮಾತನ್ನಾಡಿದ್ದರು. ನಂತರ, ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ.ರೇವಣ್ಣ ಅವರ ಮೊದಲ ಪುತ್ರ ಡಾ.ಸೂರಜ್ ರೇವಣ್ಣ ಅವರೂ ಜಿಲ್ಲೆಯಲ್ಲಿ ಓಡಾಡತೊಡಗಿದರು. ಹಿರಿತನ ಆಧರಿಸಿ ಪ್ರಜ್ವಲ್ ಬದಲು ಸೂರಜ್ ರೇವಣ್ಣ ಅಭ್ಯರ್ಥಿಯಾಗುವರೆಂಬ ಸುದ್ದಿಗಳೂ ಹರಿದಾಡಿದವು. ಹಾಗಾಗಿ, ಡಾ.ಸೂರಜ್ ರೇವಣ್ಣ ಸ್ಪರ್ಧಿಸುತ್ತಾರೋ, ಪ್ರಜ್ವಲ್ ರೇವಣ್ಣ ಸ್ಪರ್ಧೆಗಿಳಿಯುತ್ತಾರೋ, ದೇವೇಗೌಡರೇ ಸ್ಪರ್ಧೆಗಿಳಿದು ದಾಖಲೆ ನಿರ್ಮಿಸುತ್ತಾರೋ ಎಂಬುದು ಈಗ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಕಾಡುತ್ತಿರುವ ಪ್ರಶ್ನೆ. ಎನ್. ನಂಜುಂಡೇಗೌಡ