Advertisement

ಕಾಂಗ್ರೆಸ್‌ನಲ್ಲಿ ಬಳ್ಳಾರಿ ಅಭ್ಯರ್ಥಿ ಆಯ್ಕೆ ಮುಗಿಯದ ಗೊಂದಲ

06:00 AM Oct 11, 2018 | Team Udayavani |

ಬೆಂಗಳೂರು: ಉಪ ಚುನಾವಣೆಯಲ್ಲಿ ಎರಡು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್‌ಗೆ ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.

Advertisement

ಬಳ್ಳಾರಿಯಲ್ಲಿ ಬಿ.ರಾಮುಲು ವಿರುದ್ಧ ಗೆಲ್ಲುವ ಅಭ್ಯರ್ಥಿಗೆ ಕಾಂಗ್ರೆಸ್‌ ತೀವ್ರ ಹುಡುಕಾಟ ನಡೆಸಿದ್ದು, ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಬುಧವಾರ ಇಡೀ ದಿನ ನಡೆಸಿದ ನಿರಂತರ ಸಭೆಯಲ್ಲಿಯೂ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ.

ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರರ ಸಹೋದರ ವೆಂಕಟೇಶ್‌ ಪ್ರಸಾದ್‌ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಆದರೆ, ಅವರಿಗೆ ಟಿಕೆಟ್‌ ನೀಡಿದರೆ ಜಿಲ್ಲೆಯ ಐವರು ಕಾಂಗ್ರೆಸ್‌ ಶಾಸಕರು ಸೇರಿದಂತೆ ಯಾವ ಜಿಲ್ಲಾ ಮುಖಂಡರು ಅವರ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ನೇರವಾಗಿಯೇ ಪಕ್ಷದ ನಾಯಕರ ಎದುರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ನಾಗೇಂದ್ರ ಸಹೋದರ ವೆಂಕಟೇಶ್‌ ಪ್ರಸಾದ್‌ಗೆ ಟಿಕೆಟ್‌ ನೀಡಿದರೆ ರಾಮುಲು ಸಹೋದರಿ ಶಾಂತಾ ವಿರುದ್ಧ ಪ್ರಬಲ ಅಭ್ಯರ್ಥಿಯಾಗುತ್ತಾರೆ ಎಂಬ ಲೆಕ್ಕಾಚಾರ ರಾಜ್ಯ ನಾಯಕರದ್ದಾಗಿದ್ದು, ಆದರೆ, ಬಳ್ಳಾರಿ ಜಿಲ್ಲಾ ಮುಖಂಡರು ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರತ್ಯೇಕ ಅಭಿಪ್ರಾಯ ಬರೆಸಿಕೊಂಡ ಡಿಕೆಶಿ: ಬಳ್ಳಾರಿ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಹೆಗಲಿಗೆ ವಹಿಸಿದ್ದರಿಂದ ಬುಧವಾರ ಇಡೀ ದಿನ ಬಳ್ಳಾರಿ ಜಿಲ್ಲೆಯ ಶಾಸಕರು ಹಾಗೂ ಜಿಲ್ಲಾ ಮುಖಂಡರೊಂದಿಗೆ ಡಿ.ಕೆ. ಶಿವಕುಮಾರ್‌ ಪ್ರತ್ಯೇಕ ಸಭೆ ನಡೆಸಿದರು. ಅಲ್ಲದೇ ಅಭ್ಯರ್ಥಿಯಾಗುವವರ ಬಗ್ಗೆ ಪ್ರತಿಯೊಬ್ಬರಿಂದಲೂ ಲಿಖೀತ ಅಭಿಪ್ರಾಯ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಬಹುತೇಕ ಮುಖಂಡರು ಬಿ.ನಾಗೇಂದ್ರರ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅವರು ಕಾಂಗ್ರೆಸ್‌ನಲ್ಲಿಯೇ ಉಳಿಯುತ್ತಾರೆ ಎನ್ನುವುದಕ್ಕೆ ಯಾವುದೇ ಭರವಸೆಯಿಲ್ಲ. ಚುನಾವಣೆಯಲ್ಲಿ ಅವರ ಸಹೋದರ ಗೆದ್ದರೆ, ತಮಗೆ ಮಂತ್ರಿ ಸ್ಥಾನಕ್ಕೂ ಪಟ್ಟು ಹಿಡಿದರೆ ಜಿಲ್ಲೆಯಲ್ಲಿ ಬೇರೆ ಶಾಸಕರಿಗೆ ಮರ್ಯಾದೆ ಇಲ್ಲದಂತಾಗುತ್ತದೆ ಎಂಬ ಆತಂಕವನ್ನು ಬಹತೇಕರು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ವೆಂಕಟೇಶ್‌ ಪ್ರಸಾದ್‌ ಬದಲಿಗೆ ಶಿರಗುಪ್ಪ ಮಾಜಿ ಶಾಸಕ ಬಿ.ಎಂ. ನಾಗರಾಜ್‌ ಅಥವಾ ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ನೆಟ್ಟಕಲ್ಲಪ್ಪ ಅವರಿಗೆ ನೀಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.

ತುಕಾರಾಂ ಒಲವು: ಸಂಡೂರು ಶಾಸಕ ಈ ತುಕಾರಾಂ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಒಲವು ತೋರಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಹಾಲಿ ಶಾಸಕರಿರುವುದರಿಂದ ಚುನಾವಣೆಯಲ್ಲಿ ಜಯಗಳಿಸಿದರೆ ಅನಗತ್ಯವಾಗಿ ಮತ್ತೂಂದು ಉಪ ಚುನಾವಣೆಯನ್ನು ಮೈಮೇಲೆ ಎಳೆದುಕೊಂಡಂತಾಗುತ್ತದೆ ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ರಾಜ್ಯ ನಾಯಕರು ಅವರ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬುಧವಾರ ಸಚಿವ ಡಿ.ಕೆ. ಶಿವಕುಮಾರ್‌ ಮನೆಯಲ್ಲಿ ನಡೆದ ಸಭೆಗೆ ಶಾಸಕರಾದ ಆನಂದ್‌ ಸಿಂಗ್‌, ಪಿ.ಟಿ.ಪರಮೇಶ್ವರ್‌ ನಾಯ್ಕ ಹಾಗೂ ಬಳ್ಳಾರಿ ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಗೈರಾಗಿದ್ದರಿಂದ ಅವರ ಅಭಿಪ್ರಾಯ ಪಡೆಯಲು ಡಿ.ಕೆ.ಶಿವಕುಮಾರ್‌ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಗುರುವಾರವೂ ಬಳ್ಳಾರಿ ಅಭ್ಯರ್ಥಿ ಆಯ್ಕೆ ಕುರಿತಂತೆ ಮತ್ತೂಂದು ಸುತ್ತಿನ ಸಭೆ ನಡೆಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಎಲ್ಲಿದ್ದಾನಪ್ಪ ನಿಮ್ಮ ನಾಯಕ ?
ಬಳ್ಳಾರಿ ಲೋಕಸಭಾ ಕ್ಷೇತ್ರ ಎಸ್ಟಿ ಸಮುದಾಯಕ್ಕೆ ಮೀಸಲಾಗಿದ್ದು, ಕಾಂಗ್ರೆಸ್‌ ಪಕ್ಷದಲ್ಲಿ ಎಸ್ಟಿ ಸಮುದಾಯದ ನಾಯಕರು ಎಂದು ಹೇಳಿಕೊಂಡಿರುವ ಪೌರಾಡಳಿತ ಸಚಿವ ರಮೇಶ್‌ ಜಾರಕಿಹೊಳಿ ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲಿ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಪರೋಕ್ಷ ಸವಾಲು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವ ರಮೇಶ್‌ ಜಾರಕಿಹೊಳಿ, ನಾಯಕ ಸಮುದಾಯಕ್ಕೆ ಅನ್ಯಾಯವಾಗಿದೆ ಇನ್ನೊಂದು ಮಂತ್ರಿ ಸ್ಥಾನ ನೀಡಬೇಕೆಂದು ಪಕ್ಷದ ನಾಯಕರ ವಿರುದ್ದ ಬಂಡಾಯವೆದ್ದು, ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಪರ ಲಾಬಿ ನಡೆಸಿ, ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ಬಹಿರಂಗವಾಗಿಯೇ ಆರೋಪ ಮಾಡಿದ್ದರು.ಅದೇ ವಿಷಯವನ್ನು ಪ್ರಸ್ತಾಪಿಸಿರುವ ಸಚಿವ ಡಿ.ಕೆ.ಶಿವಕುಮಾರ್‌ ಎಲ್ಲಿದ್ದಾರಪ್ಪಾ ನಿಮ್ಮ ನಾಯಕ ಸಮುದಾಯದ ನಾಯಕರು. ಈಗ ಚುನಾವಣೆ ಬಂದಿದೆ ಬಂದು ಅವರ ಶಕ್ತಿಯನ್ನು ತೋರಿಸಲು ಹೇಳು. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದು ಅವರ ಶಕ್ತಿ ಸಾಬೀತು ಪಡಿಸಲಿ ಎಂದು ಶಾಸಕ ನಾಗೇಂದ್ರ ಅವರ ಎದುರು ಸವಾಲಿನ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

ಬಳ್ಳಾರಿ ಜಿಲ್ಲೆಯ ಕೆಲವು ಶಾಸಕರು ಸಭೆಗೆ ಬಾರದಿರುವುದರಿಂದ ಗುರುವಾರ ಮತ್ತೂಮ್ಮೆ ಸಭೆ ನಡೆಸಲು ತೀರ್ಮಾನಿಸಲಾಗಿದೆ. ನನ್ನ ಸಹೋದರ ವೆಂಕಟೇಶ್‌ ಪ್ರಸಾದ್‌ ಕೂಡ ಟಿಕೆಟ್‌ ಆಕಾಂಕ್ಷಿಯಾಗಿದ್ದು, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಯಾರಿಗೆ ಟಿಕೆಟ್‌ ನೀಡಿದರೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ.
– ಬಿ. ನಾಗೇಂದ್ರ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ.

Advertisement

Udayavani is now on Telegram. Click here to join our channel and stay updated with the latest news.

Next