Advertisement
ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಕರ್ನಾಟಕ ಸಮಗ್ರ ನೀರು ನಿರ್ವಹಣೆ ಹೂಡಿಕೆಯಲ್ಲಿ ಕುಂದಾಪುರದಲ್ಲಿ ಜಲಸಿರಿ ಕಾಮಗಾರಿ ನಡೆದಿದೆ. ಕೊಲ್ಕತ್ತಾದ ಮೆ| ಜಿ.ಕೆ.ಡಬ್ಲ್ಯು ಕನ್ಸಲ್ಟ್ ಸಂಸ್ಥೆ ತಾಂತ್ರಿಕ ಸಲಹೆಯಡಿ ಲಕ್ಷ್ಮೀ ಎಂಜಿನಿಯರಿಂಗ್ ಸಂಸ್ಥೆ ಕಾಮಗಾರಿ ನಡೆಸಿದೆ. 23.1 ಕೋ.ರೂ. ವೆಚ್ಚದ ಯೋಜನೆ ಕಳೆದ ವರ್ಷ ಪೂರ್ಣಗೊಂಡಿದೆ. ಇನ್ನು 5 ವರ್ಷಗಳ ಕಾಲ ಇದೇ ಗುತ್ತಿಗೆದಾರ ಸಂಸ್ಥೆಯೇ ಇದರ ನಿರ್ವಹಣೆ ಮಾಡಲಿದ್ದು ಅದಕ್ಕಾಗಿ 12.4 ಕೋ. ರೂ. ನೀಡಲಾಗುತ್ತದೆ. ಅಂದರೆ ಒಟ್ಟು ವೆಚ್ಚ 35.5 ಕೋ.ರೂ. ಆಗುತ್ತದೆ.
ನಿಯಮದ ಪ್ರಕಾರ ಸಂಸ್ಥೆ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 6,100 ನಳ್ಳಿಗಳ ಸಂಪರ್ಕ ಮಾಡಬೇಕಿತ್ತು. ಪುರಸಭೆ ವತಿಯಿಂದ ಅದಕ್ಕೂ ಮೊದಲೇ 3,375 ಸಂಪರ್ಕ ಇತ್ತು. ಜಲಸಿರಿ ಯೋಜನೆ ಬಳಿಕ 4,735 ನಳ್ಳಿಗಳಿವೆ. ಅಂದರೆ ಗುತ್ತಿಗೆದಾರ ಸಂಸ್ಥೆ ಮಾಡಿದ್ದು 4 ವರ್ಷದಲ್ಲಿ 1,360 ಹೊಸ ಸಂಪರ್ಕಗಳನ್ನು ಮಾತ್ರ. ಇದರ ನಿರ್ವಹಣೆಗೆ ವಾರ್ಷಿಕ 1.25 ಕೋ.ರೂ. ನಿರ್ವಹಣೆ ಶುಲ್ಕ ಎಂದು ಪುರಸಭೆಯಿಂದ ಪಡೆಯುತ್ತದೆ. ಸಂಸ್ಥೆಗೆ ಇಷ್ಟೆಲ್ಲ ನೀಡಿಯೂ ಜಪ್ತಿ ಘಟಕದ ನಿರ್ವಹಣೆ, ಡೀಸೆಲ್, ವಿದ್ಯುತ್ ಬಿಲ್ನ್ನು ಪುರಸಭೆಯೇ ವ್ಯಯಿಸುತ್ತಿದೆ ಎಂದರು. ಹಾಗಾದರೆ ಸಂಸ್ಥೆ ಮಾಡುತ್ತಿರುವುದು ಏನು ಎನ್ನುವುದಕ್ಕೆ ಉತ್ತರವೇ ಇಲ್ಲ. ಕೇವಲ 4,375 ನಳ್ಳಿ ಸಂಪರ್ಕ ನಿರ್ವಹಣೆಗೆ 1.25 ಕೋ.ರೂ. ಪಡೆದರೆ ಜನರೇಟರ್ ಬಿಲ್, ವಿದ್ಯುತ್ ಬಿಲ್ ಎಂದು ಪುರಸಭೆಗೆ ಮತ್ತಷ್ಟೇ ಮೊತ್ತ ಬರುತ್ತದೆ. ಬರೀ ಇಷ್ಟು ಸಂಪರ್ಕಕ್ಕೆ 2.5 ಕೋ.ರೂ. ವ್ಯಯಿಸುವ ಪುರಸಭೆ ಬಹುಶಃ ದೇಶದಲ್ಲೇ ಇರಲಾರದು!
Related Articles
ಪುರಸಭೆಗೆ ಜಪ್ತಿಯ ಜಂಬೂ ನದಿಯಿಂದ ಶುದ್ಧೀಕರಿಸಿದ ಕುಡಿಯುವ ನೀರು ಪೈಪ್ಲೈನ್ ಮೂಲಕ ಬರುತ್ತದೆ. ಹಾಗೆ ನೀರು ತರುವಾಗ ಪೈಪ್ಲೈನ್ ಹಾದು ಹೋಗುವ ಗ್ರಾ.ಪಂ.ಗಳ ಜನರಿಗೂ ನೀರು ವಿತರಿಸಲಾಗುತ್ತಿದೆ. ಈ ವ್ಯವಸ್ಥೆ ಜಲಸಿರಿ ಬರುವ ಮೊದಲೇ ಅನುಷ್ಠಾನದಲ್ಲಿ ಇದೆ. ಈ ಪಂಚಾಯತ್ಗಳು ಪುರಸಭೆಗೆ ಕೊಡುವ ನೀರಿನ ಬಳಕೆಯ ಹಣವನ್ನೂ ಜಲಸಿರಿ ನಿರ್ವಹಣೆಯ ಸಂಸ್ಥೆಯೇ ಪಡೆಯುವುದು ಕಾನೂನು ಬಾಹಿರ. ಇದಿನ್ನೂ ಪುರಸಭೆ ಹಂತದಲ್ಲೇ ಇತ್ಯರ್ಥ ಮಾಡಲಾಗಲಿಲ್ಲ.
Advertisement
ನಿರ್ವಹಣೆ ಮಾಡದೆ ಕೈಕೊಟ್ಟ ಸಂಸ್ಥೆಪಂಚಾಯತ್ಗಳಿಗೆ ಹೋಗುವ ನೀರಿನ ನಿರ್ವಹಣೆ ಸಂಸ್ಥೆ ಮಾಡುತ್ತಿಲ್ಲ. ಜಪ್ತಿ ಘಟಕದ ನಿರ್ವಹಣೆ ಮಾಡುತ್ತಿಲ್ಲ. ಹಾಗಿದ್ದ ಮೇಲೆ ಪಂಚಾಯತ್ ನೀರಿನ ಮೊತ್ತ ಸಂಸ್ಥೆಗೆ ಯಾಕೆ ಕೊಡಬೇಕು ಎಂದು ಪುರಸಭೆಯ ಅನೇಕ ಸಭೆಗಳಲ್ಲಿ ಚರ್ಚೆಯಾಗಿದೆ. ಶಾಸಕರ, ಎಸಿ ಮಧ್ಯಸ್ಥಿಕೆಯಲ್ಲಿ ಸಭೆಯಾಗಿದೆ. ಈ ಹಿಂದೆ ಜಪ್ತಿಯಲ್ಲಿ ಉಪ್ಪುನೀರು ಬಂದಾಗ ಪಂಚಾಯತ್ಗಳಿಗೆ, ಪುರಸಭೆ ವ್ಯಾಪ್ತಿಗೆ ಉಪ್ಪುನೀರು ಬಂತು. ಆಗ ಗಲಾಟೆಯೆದ್ದಾಗ ಪುರಸಭೆ ಜನರಿಗೇನೋ ಟ್ಯಾಂಕರ್ ನೀರು ಕೊಡಲಾಯಿತು. ಪಂಚಾಯತ್ಗಳಿಗೆ ಬರೀ ಚೊಂಬು. ಹಾಗಿದ್ದರೂ ಪಂಚಾಯತ್ಗಳ ಹಣ ಈ ಸಂಸ್ಥೆಗೇ ಬೇಕಂತೆ! ಈ ವಿವಾದ ಈ ಬಾರಿ ಇತ್ಯರ್ಥವಾಗುತ್ತದೆಯೇ ಎಂದು ಕಾದು ನೋಡಬೇಕು. -ಲಕ್ಷ್ಮೀ ಮಚ್ಚಿನ