ಬೆಂಗಳೂರು: ರಾಜ್ಯ ಪೊಲೀಸರ ವೇತನ ಪರಿಷ್ಕರಣೆ ಕುರಿತ “ಔರಾದ್ಕರ್ ವರದಿ’ ಜಾರಿ ಸಂಬಂಧ ಗೊಂದಲ ಮುಂದುವರಿದಿದ್ದು, ಸರ್ಕಾರ ಹಾಗೂ ಹಣಕಾಸು ಇಲಾಖೆ ನಡುವೆ ಸಹಮತ ಏರ್ಪಟ್ಟಿಲ್ಲ. 18 ದಿನಗಳ (ಸೆ.13) ಹಿಂದಷ್ಟೇ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು, ಪೊಲೀಸ್ ಕಾನ್‌ಸ್ಟೆàಬಲ್(ನಾಗರೀಕ ಮತ್ತು ಮೀಸಲು ಪಡೆ) ಹೆಡ್ ಕಾನ್‌ಸ್ಟೆಬಲ್, ಸಹಾಯಕ ಸಬ್‌ಇನ್‌ಸ್ಪೆಕ್ಟರ್, ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ವರಿಷ್ಠಾಧಿಕಾರಿಗಳು (ನಾನ್ ಐಪಿಎಸ್) ವೇತನ ಪರಿಷ್ಕರಿಸಿ ಆ.1ರಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದರು.
ಅದಾದ ಕೇವಲ ಐದೇ ದಿನಕ್ಕೆ (ಸೆ.17) ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ ಎಂ.ಎ.ಸಲೀಂ ಲೆಕ್ಕಚಾರದಲ್ಲಿ ವ್ಯತ್ಯಾಸವಾಗಿದೆ ಎಂಬ ನೆಪವೊಡ್ಡಿ ಪರಿಷ್ಕೃತ ವೇತನಕ್ಕೆ ತಡೆಯಾಜ್ಞೆ ನೀಡಿದ್ದು, ಸೆಪ್ಟೆಂಬರ್ ಅಂತ್ಯದೊಳಗೆ ಹೊಸ ಆದೇಶ ಮಾಡುವುದಾಗಿಯೂ ಭರವಸೆ ನೀಡಿದ್ದರು. ಆದರೆ ಪೊಲೀಸ್ ಸಿಬ್ಬಂದಿಗೆ ಸೆಪ್ಟೆಂಬರ್ ತಿಂಗಳ ವೇತನ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದ್ದು ವೇತನ ಪರಿಷ್ಕರಣೆಯಾಗಿಲ್ಲ. ಜತೆಗೆ, ಕಷ್ಟ ಪರಿಹಾರ ಭತ್ಯೆ ಎರಡು ಸಾವಿರ ರೂ. ಏರಿಸುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿತ್ತು. ಆದರೆ ವೇತನದಲ್ಲಿ ಒಂದು ಸಾವಿರ ರೂ. ಮಾತ್ರ ಜಮೆಯಾಗಿದೆ.
ಈ ಮಧ್ಯೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ, ಪೊಲೀಸರ ಬಿಡುವಿಲ್ಲದ ಕರ್ತವ್ಯದ ಬಗ್ಗೆ ಅರಿವಿದೆ. ಲೆಕ್ಕಾಚಾರದಲ್ಲಿ ವ್ಯತ್ಯಾಸ ಉಂಟಾಗಿದ್ದು, ತಾತ್ಕಾಲಿಕ ತಡೆ ನೀಡಲಾಗಿದೆ. ಔರಾದ್ಕರ್ ವರದಿ ಜಾರಿ ಮಾಡುವ ಬಗ್ಗೆ ಯಾವುದೇ ಗೊಂದಲಗಳಿಲ್ಲ ಎಂದು ಹೇಳುತ್ತಿದ್ದರಾದರೂ ಜಾರಿ ಮಾತ್ರ ಆಗಿಲ್ಲ. ಪೊಲೀಸರ ವೇತನ ಪರಿಷ್ಕರಣೆ ಜಾರಿಗೆ ಹಣಕಾಸು ಕೊರತೆ ಎಂದು ಹೇಳಲಾಗುತ್ತಿದೆ.
ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಔರಾದ್ಕರ್ ವರದಿ ಜಾರಿ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಅದಕ್ಕೆ ಮೀನಮೇಷ ಎಣಿಸುತ್ತಿದ್ದು, ಸಮಾನ ವೇತನ, ಸಮಾನ ಶ್ರೇಣಿಗೆ ಅನುಗುಣವಾಗಿ ವೇತನ ನಿಗದಿ ಮಾಡುವುದು ಕಷ್ಟದಾಯಕ. ಅದರಿಂದ ಸರ್ಕಾರಕ್ಕೆ ಮಾಸಿಕ ಕೋಟ್ಯಂತರ ರೂ. ಹೊರೆ ಆಗುತ್ತದೆ ಎಂದು ಹೇಳುತ್ತಿದ್ದಾರೆ.
ಬಜೆಟ್‌ನಲ್ಲಿ ಉಳಿದ ವೇತನ: ಈ ಮಧ್ಯೆ, ಮೈತ್ರಿ ಸರ್ಕಾರ ಕಳೆದ ಫೆಬ್ರವರಿಯಲ್ಲಿ ಮಂಡಿಸಿದ 2019-20ರ ಅಯವ್ಯಯದಲ್ಲಿ ಕಾನ್‌ಸ್ಟೆಬಲ್‌ಗಳಿಗೆ ನೀಡುವ ಕಷ್ಟ ಪರಿಹಾರ ಭತ್ಯೆಯನ್ನು 1,000 ರೂ.ನಿಂದ 2000 ರೂ.ಗೆ ಹೆಚ್ಚಳ ಮಾಡುವುದಾಗಿ ಘೋಷಿಸಲಾಗಿತ್ತು. ಅದ್ಕಕಾಗಿ 103 ಕೋಟಿ ರೂ. ಒದಗಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ವೇತನದಲ್ಲಿ ಕೇವಲ ಒಂದು ಸಾವಿರ ರೂ. ಮಾತ್ರ ಕಷ್ಟ ಪರಿಹಾರ ಭತ್ಯೆ ನೀಡಲಾಗುತ್ತಿದೆ ಎಂದು ಪೊಲೀಸರು ಅಲವತ್ತುಕೊಂಡಿದ್ದಾರೆ.
ನೆರೆ ಕಾರಣವಾ?: ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಬದಿಗಿಟ್ಟಿದೆ. ಸಂತ್ರಸ್ತರಿಗೆ ಪರಿಹಾರ ನೀಡಲು 500 ಕೋಟಿ ರೂ. ಬಿಡುಗಡೆ ಮಾಡಿದೆ. ಈ ನಡುವೆ ಔರಾದ್ಕರ್ ವರದಿ ಜಾರಿ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ಇನ್ನಷ್ಟು ಹೊರೆ ಆಗುತ್ತದೆ ಎಂಬ ಕಾರಣಕ್ಕೆ ವರದಿ ಜಾರಿಗೆ ಹಿಂದೇಟು ಹಾಕಲಾಗಿದೆ ಎಂಬ ಮಾತು ಕೇಳಿ ಬಂದಿದೆ.
ಲೆಕ್ಕಾಚಾರದಲ್ಲಿ ವ್ಯತ್ಯಾಸ ಉಂಟಾಗಿದ್ದರಿಂದ ವೇತನ ಪರಿಷ್ಕರಣೆ ಆದೇಶವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು. ಸದ್ಯದಲ್ಲೇ ಹೊಸ ಆದೇಶ ಹೊರಡಿಸಲಾಗುವುದು.
-ಡಾ ಎಂ.ಎ.ಸಲೀಂ, ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ
* ಮೋಹನ್ ಭದ್ರಾವತಿ