ಬೆಂಗಳೂರು: ಭಾರತೀಯ ಶಿಕ್ಷಣ ವ್ಯವಸ್ಥೆ ಗೊಂದಲದ ಗೂಡಾಗಿದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಶನಿವಾರ ನಡೆದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ನಮ್ಮ ಶಿಕ್ಷಣ ವ್ಯವಸ್ಥೆ ಗೊಂದಲಮಯವಾಗಿದೆ. ರಾಜ್ಯ ಭಾಷೆ, ಮಾತೃಭಾಷೆ ಅಥವಾ ವಿಶ್ವದ ಬಹುತೇಕ ಮಂದಿ ಬಳಸುವಂತಹ ಇಂಗ್ಲಿಷ್ ಭಾಷೆಯಲ್ಲಿ ಶಿಕ್ಷಣ ನೀಡಬೇಕಾ ಎಂಬ ಬಗ್ಗೆ ಶಿಕ್ಷಣ ವಲಯದಲ್ಲಿ ಅಸ್ಪಷ್ಟತೆ ಇದೆ. ಅಲ್ಲದೆ ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ರಾಜ್ಯ ಪಠ್ಯಕ್ರಮದಲ್ಲಿ ಯಾವುದನ್ನು ಅಳವಡಿಸಿಕೊಳ್ಳಬೇಕು ಎಂಬ ಗೊಂದಲದ ವಾತಾವರಣವಿದೆ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಹತ್ತಿಪ್ಪತ್ತು ವಿಶ್ವವಿದ್ಯಾನಿಲಯಗಳಿದ್ದವು. ಈಗ 700-800 ವಿವಿಗಳಿವೆ. ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳನ್ನು ಪೂರ್ಣಗೊಳಿಸಿ ವಿಶ್ವವಿದ್ಯಾಲಯಗಳಿಂದ ಹೊರಬರುತ್ತಿದ್ದಾರೆ. ಆದರೆ ಅದರಲ್ಲಿ ಶೇ.17ರಷ್ಟು ವಿದ್ಯಾರ್ಥಿಗಳು ಮಾತ್ರ ಉದ್ಯೋಗಕ್ಕೆ ಅರ್ಹವಾದ ಕೌಶಲ್ಯ ಪಡೆದುಕೊಂಡಿರುತ್ತಾರೆ. ಉಳಿದವರು ಕೇವಲ ಪದವೀಧರರಾಗಿ ಹೊರಬರುತ್ತಿದ್ದಾರೆ ಎಂದು ಹೇಳಿದರು.
ಗ್ರಾಮೀಣ ಹಾಗೂ ನಗರ ಭಾಗದ ವಿದ್ಯಾರ್ಥಿಗಳಲ್ಲಿ ಯಾವುದೇ ತಾರತಮ್ಯ ಮಾಡುವಂತಿಲ್ಲ. ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣಬೇಕು ಎಂದು ನ್ಯಾಯಾಲಯಗಳು ಅಭಿಪ್ರಾಯಪಡುತ್ತವೆ. ಆದರೆ ನಗರದ ವಿದ್ಯಾರ್ಥಿಗಳಿಗೆ ಸಿಗುವ ಅವಕಾಶಗಳು ಗ್ರಾಮೀಣ ವಿದ್ಯಾರ್ಥಿಗಳಿಗೆ ಸಿಗುವುದಿಲ್ಲ. ಅವರಿಗೆ ಮೀಸಲಾತಿ ಅಥವಾ ಇತರೆ ಸೌಲಭ್ಯಗಳನ್ನು ನೀಡಿ ಅವಕಾಶ ನೀಡಬೇಕಿದೆ. ಇದಕ್ಕೆ ಕೋರ್ಟ್ ಒಪ್ಪುವುದಿಲ್ಲ. ಹೀಗೆ ಎಲ್ಲ ರೀತಿಯಿಂದಲೂ ಶಿಕ್ಷಣ ವ್ಯವಸ್ಥೆ ಅಯಮಯೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಂಪ್ಯೂಟರ್ ಶಿಕ್ಷಣ ಪಡೆದ 138 ವಿದ್ಯಾರ್ಥಿಗಳಿಗೆ ಈ ವೇಳೆ ಪದವಿ ಪ್ರದಾನ ಮಾಡಲಾಯಿತು. ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್, ಇಂದಿರಾನಗರ ರೋಟರಿ ಸಂಸ್ಥೆ ಅಧ್ಯಕ್ಷ ರೋಟೆರಿಯರನ್ ಜಗದೀಶ್.ಎಂ ಮತ್ತಿತರರು ಹಾಜರಿದ್ದರು.