Advertisement

ಗೊಂದಲದ ಗೂಡು ಮಣಿಪಾಲ ಟ್ರಾಫಿಕ್‌ ಸಿಗ್ನಲ್

12:15 PM Mar 25, 2022 | Team Udayavani |

ಉಡುಪಿ: ನಗರಾದ್ಯಂತ ಟ್ರಾಫಿಕ್‌ ದಟ್ಟಣೆಗೆ ಸಿಗ್ನಲ್‌ ಲೈಟ್‌ ಇಲ್ಲದಿರುವುದು ಹಾಗೂ ಸೂಕ್ತ ಸ್ಥಳಾವಕಾಶದ ಕೊರತೆ ಕಾರಣವಾದರೆ ಮಣಿಪಾಲದ ಟ್ರಾಫಿಕ್‌ ಸಮಸ್ಯೆ ಅದಕ್ಕಿಂತಲೂ ಭಿನ್ನವಾಗಿದೆ. ಇಲ್ಲಿ ವಿಶಾಲ ಸ್ಥಳಾವಕಾಶವಿದ್ದರೂ ಸಿಗ್ನಲ್‌ಗೆ ಬೇಕಿರುವ ಸೌಲಭ್ಯಗಳಿಲ್ಲದ ಕಾರಣ ಸವಾರರು ವಿನಾಕಾರಣ ಟ್ರಾಫಿಕ್‌ನಲ್ಲಿ ನಿಲ್ಲುವ ಅನಿವಾರ್ಯ ಎದುರಾಗುತ್ತಿದೆ.

Advertisement

ಈ ಹಿಂದೆ ಟೈಗರ್‌ ಸರ್ಕಲ್‌ ವೃತ್ತವಿದ್ದ ಪ್ರದೇಶವನ್ನು ಹೆದ್ದಾರಿ ವಿಸ್ತರಣೆ ಕಾರಣಕ್ಕೆ ತೆಗೆಯಲಾಗಿತ್ತು. ಅನಂತರ ಇಲ್ಲಿ ವಿಸ್ತರಣೆ ಕಾಮಗಾರಿ ನಡೆದು ಈಗ ಟ್ರಾಫಿಕ್‌ ಸಿಗ್ನಲ್‌ ಅಳವಡಿಕೆ ಮಾಡಲಾಗಿದೆ. ವಿಶ್ವವಿದ್ಯಾನಿಲಯಗಳು, ಮೆಡಿಕಲ್‌ ಕಾಲೇಜುಗಳು, ಆಸ್ಪತ್ರೆಗಳಿಗೆ ಹೆಚ್ಚಿನ ಮಂದಿ ಈ ಭಾಗದಲ್ಲಿ ಓಡಾಟ ನಡೆಸುವ ಕಾರಣ ಟ್ರಾಫಿಕ್‌ ನಿರ್ವಹಣೆಯೂ ಅತ್ಯಗತ್ಯವಾಗಿದೆ.

ಮಣಿಪಾಲದಿಂದ ಪರ್ಕಳ ಭಾಗಕ್ಕೆ ಹಾಗೂ ಆ ಭಾಗದಿಂದ ಮಣಿಪಾಲಕ್ಕೆ ಬರುವವರು ಟ್ರಾಫಿಕ್‌ ದಟ್ಟಣೆಯಲ್ಲಿ ನಿಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಗೆಯೇ ಪರ್ಕಳ ಭಾಗದಿಂದ ಉಡುಪಿ, ಮಣಿಪಾಲದ ಕೈಗಾರಿಕಾ ವಲಯಕ್ಕೆ ಹೋಗುವವರಿಗೂ ಟ್ರಾಫಿಕ್‌ ಬಿಸಿ ತಪ್ಪಿದ್ದಲ್ಲ.

90 ಸೆಕೆಂಡು ಸಮಯ

ಟ್ರಾಫಿಕ್‌ ದಟ್ಟಣೆಯಲ್ಲಿ ಸವಾರರು ಸುಮಾರು 90 ಸೆಕೆಂಡ್‌ಗಳಷ್ಟು ಸಮಯಾವಕಾಶವನ್ನು ವ್ಯಯ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳುವ ತುರ್ತು ವಾಹನಗಳೂ ಇದರ ನಡುವೆಯೇ ಬಾಕಿ ಉಳಿದ ಹಲವಾರು ಉದಾಹರಣೆಗಳಿವೆ. ಪರ್ಕಳ ಭಾಗದಿಂದ ಆಗಮಿಸಿ ಮಣಿಪಾಲ ಗ್ರೀನ್ಸ್‌ಗೆ ತೆರಳುವವರು ಮಣಿಪಾಲ ಪೊಲೀಸ್‌ ಠಾಣೆವರೆಗೆ ಹೋಗಿ ಅನಂತರ ಯು ಟರ್ನ್ ಹೊಡೆದು ತೆರಳಬೇಕಿದೆ. ಅದೇ ರೀತಿ ಕೆನರಾ (ಸಿಂಡಿಕೇಟ್‌) ಬ್ಯಾಂಕ್‌ ಬಳಿಯಿಂದ ಪರ್ಕಳ ಭಾಗಕ್ಕೆ ತೆರಳುವವರಿಗೆ ಯಾವುದೇ ಸಿಗ್ನಲ್‌ ವ್ಯವಸ್ಥೆ ಇಲ್ಲ. ಪೊಲೀಸರು ಹೇಳುವವರೆಗೆ ವಿನಾ ಕಾರಣ ಕಾಯುವ ಅನಿವಾರ್ಯತೆ ಎದುರಾಗಿದೆ. ಸಮಯ ಮಿತಿಯನ್ನು ಕಡಿತಗೊಳಿಸ ಬೇಕು ಎನ್ನುವ ಆಗ್ರಹಗಳೂ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

Advertisement

ಸಿಬ್ಬಂದಿ ಅತ್ಯವಶ್ಯಕ

ಗೊಂದಲದ ಗೂಡಾದ ಮಣಿಪಾಲ ಟ್ರಾಫಿಕ್‌ ಸಿಗ್ನಲ್‌ ಬಳಿ ಸಂಚಾರ ನಿಯಮಾವಳಿ ಪಾಲನೆ ಮಾಡಲು ಮಣಿಪಾಲ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆದರೂ ಅವೈಜ್ಞಾನಿಕವಾಗಿರುವ ಈ ಸರ್ಕಲ್‌ನಲ್ಲಿ ವಾಹನಗಳನ್ನು ಸುಲಭದಲ್ಲಿ ನಿಯಂತ್ರಿಸುವುದು ಅಸಾಧ್ಯವಾಗಿದೆ. ಇಲ್ಲಿ ಹೆಚ್ಚುವರಿ ಪೊಲೀಸರ ಅಗತ್ಯವೂ ಕಂಡುಬರುತ್ತಿದೆ. ಕೆಲವೆಡೆ ಸಿಗ್ನಲ್‌ ಗೊಂದಲ ತೊಡಕುಗಳಿದ್ದು, ಅದರ ನಿವಾರಣೆಗೂ ಆಡಳಿತ ವ್ಯವಸ್ಥೆ ಆದ್ಯತೆ ನೀಡುವ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next