Advertisement

ನಾಲ್ಕು ಗೋಡೆಗಳ ಮಧ್ಯೆ ಭಿನ್ನಾಭಿಪ್ರಾಯ ಪರಿಹಾರ

03:45 AM Feb 16, 2017 | Team Udayavani |

ಮುಂಬೈ: ಇನ್ನು ಮುಂದೆ ಯಾವುದೇ ರೀತಿಯ ಅಸಮಾಧಾನಗಳು, ಭಿನ್ನಾಭಿಪ್ರಾಯಗಳಿದ್ದರೂ ಅವು ಕಂಪನಿಯ ನಾಲ್ಕು ಗೋಡೆಗಳ ನಡುವೆ ಇರಬೇಕೇ ಹೊರತು, ಸಾರ್ವಜನಿಕವಾಗಿ ಹೇಳಿಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಇನ್ಫೋಸಿಸ್‌ನ ಆಡಳಿತ ಮಂಡಳಿ ಮತ್ತು ಪ್ರಮುಖ ಷೇರುದಾರರು ಬಂದಿದ್ದಾರೆ. ಈ ಮೂಲಕ ಸಾರ್ವಜನಿಕವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ಬ್ರಾಂಡ್‌ನ‌ ಘನತೆಗೆ ಆದ ಹಾನಿಯನ್ನು  ತಪ್ಪಿಸಿಕೊಳ್ಳಲು ಯತ್ನಿಸಲಾಗಿದೆ.

Advertisement

ಭಾನುವಾರ ನಾನು ಸಂಸ್ಥೆಯ ಸ್ಥಾಪಕರನ್ನು ಭೇಟಿಯಾಗಿ ಮಾತನಾಡಿದ್ದೇನೆ. ಏನೇ ಸಮಸ್ಯೆಯಿದ್ದರೂ ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ. ಮಾಧ್ಯಮಗಳ ಮೂಲಕ ಹೋಗುವುದು ಬೇಡ ಎಂಬ ನಿರ್ಧಾರವನ್ನು ಒಪ್ಪಿಕೊಂಡಿದ್ದೇವೆ ಎಂದು  ಮಂಗಳವಾರ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಕಂಪನಿ ಮುಖ್ಯಸ್ಥ ಆರ್‌ ಶೇಷಸಾಯಿ ಹೇಳಿದ್ದಾರೆ. ಜತೆಗೆ, ನಮ್ಮ ಕಂಪನಿಯು ಕಾರ್ಪೊರೇಟ್‌ ಆಡಳಿತದ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.

ಇನ್ಫೋಸಿಸ್‌ಗೆ ಹೊಸ ಸಂಹಿತೆ:ಇನ್ನೊಂದೆಡೆ, ಇನ್ಫೋಸಿಸ್‌ನ ಕಾರ್ಪೊರೇಟ್‌ ಆಡಳಿತದ ಚೌಕಟ್ಟನ್ನು ನೋಡಿಕೊಳ್ಳುತ್ತಿರುವ ಖ್ಯಾತ ಕಾರ್ಪೊರೇಟ್‌ ವಕೀಲ ಸಿರಿಲ್‌ ಶ್ರಾಫ್ ಅವರು ಸದ್ಯದಲ್ಲೇ ಐಟಿ ದಿಗ್ಗಜ ಕಂಪನಿಗೆ ಹೊಸ ಆಡಳಿತಾತ್ಮಕ ಸಂಹಿತೆಯನ್ನು ಸೂಚಿಸಲಿದ್ದಾರೆ. ಸ್ಥಾಪಕರು ಎತ್ತಿರುವ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಕಂಪನಿಯಲ್ಲಿ ಯಾರು ಸ್ವತಂತ್ರ ನಿರ್ದೇಶಕರಾಗಿರುತ್ತಾರೆ, ಯಾರು ನಾಮಿನಿ ನಿರ್ದೇಶಕರಾಗಿರುತ್ತಾರೆ ಎಂಬುದು ಸೇರಿದಂತೆ ಮಂಡಳಿಯ ಸದಸ್ಯರಿಗೆ ಸಂಬಂಧಿಸಿದ ಚೌಕಟ್ಟುಗಳನ್ನು ಸಿರಿಲ್‌ ಶ್ರಾಫ್ ಅವರ ಕಾನೂನು ಸಂಸ್ಥೆ ಸಿರಿಲ್‌ ಅಮರ್‌ಚಂದ್‌ ಮಂಗಲ್‌ದಾಸ್‌ ಅಭಿವೃದ್ಧಿಪಡಿಸಲಿದೆ ಎಂದು ಇತ್ತೀಚೆಗಷ್ಟೇ ಶೇಷಸಾಯಿ ಅವರೇ ಹೇಳಿದ್ದರು. ಜತೆಗೆ, ಹೊಸ ಸಂಹಿತೆಯು ಮಂಡಳಿಯು ಹೆಚ್ಚು ಪಾರದರ್ಶಕವಾಗಿ ಹಾಗೂ ಸಂಘಟಿತವಾಗಿರುವಂತೆ ನೋಡಿಕೊಳ್ಳಲಿದೆ ಎಂದೂ ಅವರು ಮಾಹಿತಿ ನೀಡಿದ್ದರು.

ಕಂಪನಿ ತಮ್ಮದಲ್ಲ ಎಂದು ತಿಳಿದುಕೊಳ್ಳಬೇಕು
ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮಾರುಕಟ್ಟೆ ವಿಶ್ಲೇಷಕರು ಹೇಳುವ ಪ್ರಕಾರ ಸದ್ಯ ಉಂಟಾಗಿರುವ ವಿವಾದಕ್ಕೆ ಪೂರ್ಣ ವಿರಾಮ ಬೀಳದು. ಅದು ಇನ್ನೂ ಮುಂದುವರಿಯುವ ಲಕ್ಷಣಗಳು ಇವೆ ಎಂದು ಹೇಳುತ್ತಾರೆ ತಜ್ಞರು. ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದೆ. ಹಾಲಿ ಆಡಳಿತ ಮಂಡಳಿ ಮತ್ತು ಸಂಸ್ಥಾಪಕರ ನಡುವಿನ ಬಿಕ್ಕಟ್ಟು  ಶಮನವಾದೀತೆ ಎಂದು ಅವರು ಪ್ರಶ್ನಿಸಿದ್ದಾರೆ. ಸೋಮವಾರ ಮುಂಬೈನಲ್ಲಿ ಸಿಇಒ ವಿಶಾಲ್‌ ಸಿಕ್ಕಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವೇಳೆ ಕಂಪನಿ ಸಂಸ್ಥಾಪಕರು ಎತ್ತಿದ್ದ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಮತ್ತೆ ಕೆಲವು ವಿಚಾರಗಳಿಗೆ ಮೌನವಾಗಿದ್ದರು. ಈ ಅಂಶಗಳನ್ನು ಅವರು ಹೇಗೆ ಸ್ವೀಕರಿಸುತ್ತಾರೆ ಎಂಬ ವಿಚಾರಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಮುಂಬೈ ಮೂಲದ ಷೇರು ಪೇಟೆ ಮಾರುಕಟ್ಟೆ ವಿಶ್ಲೇಷಕರೊಬ್ಬರು ಹೇಳುತ್ತಾರೆ. ಮತ್ತೂಂದೆಡೆ ಹೂಡಿಕೆದಾರರು ಸಿಇಓ ವಿಶಾಲ್‌ ಸಿಕ್ಕಾ ಅವರಿಗೆ ಬೆಂಬಲ ಸೂಚಿಸಿದ್ದಾರೆಂದು “ಮನಿ ಕಂಟ್ರೋಲ್‌.ಕಾಮ್‌’ ವರದಿ ಮಾಡಿದೆ. ಕಂಪನಿ ಸಂಸ್ಥಾಪಕರು ಈಗ ಇನ್ಫೋಸಿಸ್‌ ಅವರ ಸಂಸ್ಥೆ ಅಲ್ಲವೆಂದು ತಿಳಿದುಕೊಳ್ಳಬೇಕೆಂದು ಅವರು ಪ್ರತಿಪಾದಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next