Advertisement

ರಾಯಚೂರು ನಗರಸಭೆಯಲ್ಲಿ ಕಾಂಚಾಣ ಕಲಹ!

08:07 PM Jul 01, 2021 | Team Udayavani |

ರಾಯಚೂರು: ಹಗ್ಗ ಜಗ್ಗಾಟದಲ್ಲೇ ನಗರಸಭೆ ಚುಕ್ಕಾಣಿ ಹಿಡಿದ ಈ. ವಿನಯಕುಮಾರ್‌ ಮತ್ತು ಸದಸ್ಯರ ನಡುವಿನ ಮುಸುಕಿನ ಗುದ್ದಾಟ ಬೀದಿಗೆ ಬಂದಿದೆ. ಮಂಗಳವಾರ ಸಂಜೆ ಸದಸ್ಯರ ಜಗಳ ಬೀದಿಗೆ ಬರುವ ಮೂಲಕ ನಗರಾಡಳಿತದಲ್ಲಿ ಶಿಸ್ತು ಮಾಯವಾಗಿದೆ ಎಂಬ ಸಂದೇಶ ರವಾನೆಯಾಗಿದೆ.

Advertisement

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಸಂಜೆ ವಿಧಾನ ಪರಿಷತ್‌ ವಿಪಕ್ಷ ನಾಯಕ ಎಸ್‌. ಆರ್‌. ಪಾಟೀಲ್‌ ಸಭೆ ಬಳಿಕ ನಗರಸಭೆ ಅಧ್ಯಕ್ಷ ಈ. ವಿನಯ ಕುಮಾರ್‌ ಹಾಗೂ ಸದಸ್ಯ ಜಿಂದಪ್ಪ ನಡುವೆ ಮಾತಿನ ಚಕಮಕಿ ನಡೆದಿದೆ. ಘಟನೆಗೆ ಹಣಕಾಸಿನ ವ್ಯವಹಾರ ಕಾರಣ ಎನ್ನಲಾಗುತ್ತಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳು ಜೋರಾಗಿದೆ. ವಿನಯ ಕುಮಾರ್‌ ಬೆನ್ನತ್ತಿ ಬಂದು ರಸ್ತೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಜಿಂದಪ್ಪ ಸದರ ಬಜಾರ್‌ ಠಾಣೆಗೆ ದೂರು ನೀಡಿದ್ದಾರೆ. ನಗರದ ಟಿಪ್ಪು ಸುಲ್ತಾನ್‌ ವೃತ್ತದ ಬಳಿ ಬಹಿರಂಗವಾಗಿ ಮಾತಿನ ಚಕಮಕಿಯಾಗಿದೆ.

ಘಟನೆಗೆ ಸ್ಪಷ್ಟನೆ ನೀಡಿದ ಈ. ವಿನಯಕುಮಾರ್‌, ಸದಸ್ಯ ಜಿಂದಪ್ಪ, ಉಪಾಧ್ಯಕ್ಷೆ ಪತಿ ನರಸಿಂಹಲು ಮಾಡಗಿರಿ ನನಗೆ ಹಣಕ್ಕೆ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೂ ಈ ಹೇಳಿಕೆ ನೀಡುತ್ತಿದ್ದಂತೆ ಮತ್ತಷ್ಟು ಆಕ್ರೋಶಗೊಂಡ ಮುಖಂಡರು ಬುಧವಾರ ಬೆಳಗ್ಗೆ ನಗರಸಭೆ ಕಚೇರಿಗೆ ಬಂದು ಮತ್ತೆ ಜಗಳ ಮಾಡಿಕೊಂಡಿದ್ದಾರೆ. ಹಣಕ್ಕೆ ಯಾವಾಗ ಬೇಡಿಕೆ ಇಟ್ಟಿದ್ದೇವೆ? ಎಂದು ಅಧ್ಯಕ್ಷರಿಗೆ ತಾಕೀತು ಮಾಡಿದ್ದಾರೆ. ಪರಿಸ್ಥಿತಿ ಕೈ ಮೀರಿ ಹೋಗುವ ಮುನ್ಸೂಚನೆಯಿಂದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.

ಆಡಳಿತಕ್ಕೆ ಅಸಹಕಾರ: ನಗರಸಭೆ ಅಧ್ಯಕ್ಷ ಈ. ವಿನಯಕುಮಾರ್‌ ಅಧ್ಯಕ್ಷ ಗಾದಿ ಹಿಡಿದಿರುವುದು ಕಾಂಗ್ರೆಸ್‌ನಲ್ಲೇ ಕೆಲ ನಾಯಕರಿಗೆ ಇಷ್ಟವಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಪಕ್ಷದ ಮೂಲ ನಿವಾಸಿಗಳಿಗೆ ಸಿಗದ ಅವಕಾಶ ವಲಸಿಗರಿಗೆ ಸಿಕ್ಕಿದೆ ಎಂಬ ಅಸಮಾಧಾನ ಮುಂಚೆಯಿಂದಲೂ ಹೊಗೆಯಾಡುತ್ತಿದೆ. ಇದೇ ಕಾರಣಕ್ಕೆ ಅಧ್ಯಕ್ಷರಿಗೆ ಅಸಹಕಾರ ಹೆಚ್ಚುತ್ತಿದ್ದು, ನಗರಸಭೆ ಆಡಳಿತ ಹಳ್ಳ ಹಿಡಿಯುತ್ತಿದೆ.

ಈಗ ನಗರಸಭೆ ಸದಸ್ಯ ಜಿಂದಪ್ಪ, ಉಪಾಧ್ಯಕ್ಷೆ ಪತಿ ನರಸಿಂಹಲು ಮಾಡಗಿರಿ ಪ್ರತಿ ತಿಂಗಳು ಮಾಮೂಲು ಕೊಡಬೇಕು ಎನ್ನುತ್ತಿದ್ದಾರೆ ಎಂದು ಅಧ್ಯಕ್ಷರು ಆರೋಪಿಸಿರುವುದು ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಅಲ್ಲದೇ, ಅಧ್ಯಕ್ಷ ಎಂಬ ಗೌರವವೂ ಇಲ್ಲದೇ ಬಹಿರಂಗವಾಗಿ ಅಪಮಾನ ಮಾಡುತ್ತಿದ್ದಾರೆ ಎಂದೂ ದೂರಿದ್ದಾರೆ. ಈ ಹೇಳಿಕೆಯಿಂದ ಮತ್ತಷ್ಟು ಕೋಪಗೊಂಡಿರುವ ಜಿಂದಪ್ಪ, ನರಸಿಂಹಲು ಬುಧವಾರ ಕಚೇರಿಯಲ್ಲಿ ಪ್ರಶ್ನಿಸಲು ಹೋದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಆಗ ಅಧ್ಯಕ್ಷ ಎಸ್‌ಪಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

Advertisement

ಮುಳ್ಳಿನ ಹಾಸಿಗೆಯಾದ ಅಧ್ಯಕ್ಷ ಗದ್ದುಗೆ
ನಗರಸಭೆ ಅಧ್ಯಕ್ಷ ಗಾದಿ ಈ. ವಿನಯಕುಮಾರ್‌ ಪಾಲಿಗೆ ಅಕ್ಷರಶಃ ಮುಳ್ಳಿನ ಹಾಸಿಗೆಯಂತಾಗಿದೆ. ಆರಂಭದಿಂದಲೂ ಸುಗಮ ಆಡಳಿತಕ್ಕೆ ಅಡ್ಡಿ-ಆತಂಕಗಳು ಎದುರಾಗುತ್ತಲೇ ಇದೆ. ಪೌರಾಯುಕ್ತರು ಮತ್ತು ಅಧ್ಯಕ್ಷರ ನಡುವೆಯೂ ಹೊಂದಾಣಿಕೆ ಕಂಡು ಬರುತ್ತಿಲ್ಲ. ಸಾಮಾನ್ಯ ಸಭೆಗೆ ಸದಸ್ಯರು ಬಾರದೆ ಅಸಹಕಾರ ತೋರಿದರೆ, ಸಭೆಗಳಲ್ಲೂ ಅಧ್ಯಕ್ಷರು ಏರಿಗೆ, ಸದಸ್ಯರು ನೀರಿಗೆ ಎನ್ನುವ ರೀತಿ ನಡೆದುಕೊಳ್ಳುತ್ತಿರುವುದು ನಗರಾಡಳಿತದ ಹಾದಿ ತಪ್ಪಿಸುತ್ತಿದೆ.

ನಗರಸಭೆ ಅಧ್ಯಕ್ಷರ ವಿರುದ್ಧ ಜಿಂದಪ್ಪ ಸದರ ಬಜಾರ್‌ ಠಾಣೆಗೆ ದೂರು ನೀಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಸೇರಿದಂತೆ ಹಲವು ಆರೋಪ ಮಾಡಿದ್ದಾರೆ. ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯದ ಅನುಮತಿ ಪಡೆಯಬೇಕಿದ್ದು, ಈ ಕುರಿತು ಪರಿಶೀಲಿಸಿ
ಕ್ರಮ ಕೈಗೊಳ್ಳಲಾಗುವುದು.
ಪ್ರಕಾಶ ನಿಕ್ಕಂ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next