ಬಾಳೆಪುಣಿ: ವಿಟ್ಲ ಕ್ಷೇತ್ರದಲ್ಲಿ ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳು ಪ್ರಸ್ತುತ ಮಂಗಳೂರು ಕ್ಷೇತ್ರಕ್ಕೊಳಪಟ್ಟಿದ್ದು, ಈ ಗ್ರಾಮಗಳ ಜನರ ಬೇಡಿಕೆಯಂತೆ ಹಂತ ಹಂತ ವಾಗಿ ರಸ್ತೆಯ ಅಭಿವೃದ್ಧಿಯನ್ನು ನಡೆಸುವ ಮೂಲಕ ಚುನಾವಣೆ ಸಂದರ್ಭ ನೀಡಿದ ಭರವಸೆ ಈಡೇರಿಸುವ ಕಾರ್ಯ ಆಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮ ಪಂಚಾಯತ್‌ನ ಕೈರಂಗಳ ಗ್ರಾಮದ ಮೋಂಟುಗೋಳಿ- ಬಾಕಿ ಮಾರ್ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಶನಿವಾರ ನಡೆದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಲ್ಲಿ ರಾಜ್ಯ ಸರಕಾರ ಯಶಸ್ವಿಯಾಗಿದೆ. ಆದರೆ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಅದರ ಗುಣಮಟ್ಟವನ್ನು ಅವಲೋಕಿಸುವ ಕಾರ್ಯ ಸ್ಥಳೀಯರಿಂದ ಆಗಬೇಕಾಗಿದೆ ಎಂದರು. ಈ ನಿಟ್ಟಿನಲ್ಲಿ ಜನರು ಕಾಮಗಾರಿಯ ಸಂದರ್ಭದಲ್ಲಿ ಸಂಯಮದಿಂದ ವರ್ತಿಸಿ ಕಾಮಗಾರಿಯ ಗುಣಮಟ್ಟವನ್ನು ಪರೀಕ್ಷಿಸುವ ಕಾರ್ಯ ಮಾಡಬೇಕು ಎಂದರು. ಹಿರಿಯರಾದ ಇಬ್ರಾಹಿಂ ಶಂಕುಸ್ಥಾಪನೆಗೈದರು.
ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮಾಜಿ ಸದಸ್ಯ ಉಮ್ಮರ್ ಪಜೀರ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಕಾಂಗ್ರೆಸ್ ಕಾರ್ಮಿಕ ಘಟಕಾಧ್ಯಕ್ಷ ನಾಸೀರ್ ನಡುಪದವು, ಯುವ ಕಾಂಗ್ರೆಸ್ ಕಾರ್ಯದರ್ಶಿ ಸಮೀರ್ ಪಜೀರ್, ಕೈರಂಗಳ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆಸಿಫ್, ನಝರ್ ಷಾ ಪಟ್ಟೋರಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ತಾ.ಪಂ. ಸದಸ್ಯ ಹೈದರ್ ಕೈರಂಗಳ ಸ್ವಾಗತಿಸಿದರು.