Advertisement

ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವ ವಿಶ್ವಾಸ

09:02 PM Feb 03, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಎಲ್ಲಾ ಖಾತೆಗಳು ಪ್ರಬಲವೇ, ಆದರೆ ಮಂತ್ರಿಯಾದವನು ಪ್ರಬಲನಾಗಿರಬೇಕು. ರಾಜ್ಯದ ಆರೂವರೆ ಕೋಟಿ ಜನರಿಗೆ ಒಳ್ಳೆಯದು ಮಾಡಬೇಕು. ನನಗೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆಂಬ ವಿಶ್ವಾಸ ನನಗಿದೆ ಎಂದು ಭಾವಿ ಸಚಿವ, ಚಿಕ್ಕಬಳ್ಳಾಫ‌ುರ ಕ್ಷೇತ್ರದ ಬಿಜೆಪಿ ಶಾಸಕ ಡಾ.ಕೆ.ಸುಧಾಕರ್‌ ತಿಳಿಸಿದರು.

Advertisement

ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಸ್ಥಳೀಯ ನಗರಸಭೆಯ ಸಾರ್ವತ್ರಿಕ ಚುನಾವಣೆಗೆ ಬಿಜೆಪಿ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಇಂತಹ ಖಾತೆ ಸಿಗಬೇಕು ಎಂಬುದಿರುತ್ತದೆ. ನನಗೆ ಮಾತ್ರ ಯಾವ ಖಾತೆ ಕೊಟ್ಟರು ನಿರ್ವಹಿಸಬಲ್ಲೇ ಎಂಬ ವಿಶ್ವಾಸವಿದೆ ಎಂದರು.

ಬಿಎಸ್‌ವೈ ಕ್ಯಾಪ್ಟನ್‌: ಯಾರಿಗೆ ಯಾವ ಖಾತೆ ಕೊಡಬೇಕು, ಯಾರು ಯಾವ ಖಾತೆ ನಿರ್ವಹಿಸಬಹುದು ಎಂಬ ನಂಬಿಕೆ ತಂಡದ ನಾಯಕರಿಗೆ ಇರಬೇಕು. ಬಿಎಸ್‌ವೈ ನಮ್ಮ ತಂಡದ ನಾಯಕರು, ನಾವೆಲ್ಲಾ ಅವರ ತಂಡದ ಸದಸ್ಯರು, ನಾಯಕರಿಗೆ ಅನಿಸಿದವರನ್ನು ತಂಡದೊಳಗೆ ಸೇರಿಸಿಕೊಳ್ಳುತ್ತಾರೆ. ಯಾರಿಗೆ ಯಾವ ಕ್ರಮಾಂಕ ಕೊಡಬೇಕು, ಆರಂಭಿಕ ಬ್ಯಾಟ್ಸ್‌ಮೆನ್‌ ಆಗಿ ಯಾರನ್ನು ಇಳಿಸಬೇಕು, ನಂತರ ಯಾರನ್ನು ಇಳಿಸಬೇಕು ಎಂಬುದು ಅವರಿಗೆ ಗೊತ್ತಿರುವ ವಿಚಾರ ಎಂದರು.

ಪ್ರಧಾನಿ ನರೇಂದ್ರ ಮೋದಿ ಆರೂವರೆ ವರ್ಷಗಳಿಂದ ದೇಶದಲ್ಲಿ ಅಧಿಕಾರದಲ್ಲಿದ್ದಾರೆ. ಯಾವ ಕಪ್ಪುಚುಕ್ಕೆಯು ಪ್ರಧಾನಿ ಮೇಲಿಲ್ಲ. ಅಂತಹ ಸರ್ಕಾರ ಯಡಿಯೂರಪ್ಪ ಸರ್ಕಾರ ಆಗಬೇಕೆಂಬುದು ನಮ್ಮ ಅಭಿಲಾಷೆ. ಅವರು ಚರಿತ್ರೆಯಲ್ಲಿ ಉಳಿದು ಹೋಗುವಂತಹ ಶಾಶ್ವತವಾದ ಕಾಮಗಾರಿ, ಕಾರ್ಯಕ್ರಮದ ಮೂಲಕ ಸರ್ಕಾರ ಮುಂದುವರಿಯಬೇಕಿದೆ ಎಂದರು.

ಎಂಟಿಬಿ, ವಿಶ್ವನಾಥ್‌ ಜೊತೆ ಇರುವೆ: ಸಂಪುಟ ವಿಸ್ತರಣೆ ವಿಚಾರದಲ್ಲಿ ಏನನ್ನು ಮಾತನಾಡುವುದಿಲ್ಲ. ಆದರೆ ಸೋತ ಶಾಸಕರಾದ ಎಂಟಿಬಿ ನಾಗರಾಜ್‌ ಹಾಗೂ ಹೆಚ್‌.ವಿಶ್ವನಾಥ ಜೊತೆಗೆ ನಾನು ರಾಜಕಾರಣದಲ್ಲಿ ಇರುವವರೆಗೂ ಕೂಡ ಅವರ ಜೊತೆಯಲ್ಲಿ ಮಾನಸಿಕವಾಗಿ, ನೈತಿಕವಾಗಿ ರಾಜಕೀಯವಾಗಿ ಇರುತ್ತೇನೆ.ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯದಾಗುತ್ತದೆ ಎಂದರು.

Advertisement

ರಾಜ್ಯದ ರಾಜಕಾರಣದಲ್ಲಿ ಯಾರಾದರೂ ನುಡಿದಂತೆ ನಡೆಯುತ್ತಾರೆ ಅಂದರೆ ಅದು ಸಿಎಂ ಯಡಿಯೂರಪ್ಪ ಮಾತ್ರ ಎಂಬುದು ಸಾಬೀತಾಗಿದೆ. ಅವರು ನಮಗೆ ಏನು ಮಾತು ಕೊಟ್ಟಿದ್ದರೊ ಅದರಂತೆ ನಡೆದುಕೊಂಡಿದ್ದಾರೆ. ಅವರಿಗೆ ಎಷ್ಟೇ ಆಂತರಿಕ ಕೆಲ ಸಮಸ್ಯೆಗಳು, ರಾಜಕೀಯ ಒತ್ತಡ ಇದ್ದರೂ ತಾವು ಕೊಟ್ಟ ಮಾತಿನಿಂತೆ ನಡೆದುಕೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಶಿವಾನಂದ್‌, ಜಿಪಂ ಸದಸ್ಯ ಪಿ.ಎನ್‌.ಕೇಶವರೆಡ್ಡಿ, ಕೋಚಿಮುಲ್‌ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್‌, ಮುಖಂಡರಾದ ಮರಳುಕುಂಟೆ ಕೃಷ್ಣಮೂರ್ತಿ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಪಿ.ನಾಗೇಶ್‌, ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ, ಹಿರಿಯ ಮುಖಂಡರಾದ ಜಿ.ಆರ್‌.ನಾರಾಯಣಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷೆ ಲೀಲಾವತಿ ಶ್ರೀನಿವಾಸ್‌. ಕೆ.ವಿ.ಮಂಜುನಾಥ, ಎಂ.ಮುನಿಕೃಷ್ಣ ಉಪಸ್ಥಿತರಿದ್ದರು.

ನಗರಸಭೆ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ
ಚಿಕ್ಕಬಳ್ಳಾಪುರ: ನಗರದಲ್ಲಿರುವ ವಸತಿ ಹಾಗೂ ನಿವೇಶನ ರಹಿತರಿಗೆ 5 ಸಾವಿರ ನಿವೇಶನ ಹಂಚಿಕೆ, ಪ್ರತಿಯೊಬ್ಬರಿಗೂ ಸೂರು, ಬೆಂಗಳೂರಿಗೆ ಪರ್ಯಾಯವಾಗಿ ಚಿಕ್ಕಬಳ್ಳಾಪುರ ನಗರವನ್ನು ಉಪ ನಗರವಾಗಿ ಅಭಿವೃದ್ಧಿ, ಶಿಕ್ಷಣ ಹಾಗೂ ಯುವ ಸಬಲೀಕರಣಕ್ಕೆ ಒತ್ತು ಸೇರಿದಂತೆ ನಗರದ ಸ್ವತ್ಛತೆ, ನೈರ್ಮಲ್ಯ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಮೂಲ ಸೌಕರ್ಯ ಒದಗಿಸುವ ದಿಸೆಯಲ್ಲಿ ಹಲವು ಭರವಸೆಗಳನ್ನು ಈಡೇರಿಸುವ ಬಿಜೆಪಿ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಶಾಸಕ ಡಾ.ಕೆ.ಸುಧಾಕರ್‌ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

ಬಹುಮತ ಖಚಿತ: ನಗರದ ಜನತೆ ನಗರದ ಅಭಿವೃದ್ಧಿ ದೃಷ್ಟಿಯಿಂದ ಅಪಪ್ರಚಾರಗಳಿಗೆ ಕಿವಿಗೂಡದೇ ಭವಿಷ್ಯದ ಹಿತದೃಷ್‌ಟಿಯಿಂದ ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕೆಂದು ಮನವಿ ಮಾಡಿದರು. ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಒಳ ಒಪ್ಪಂದ ಮಾಡಿಕೊಂಡಿವೆ. ಬಿಜೆಪಿ 24 ವಾರ್ಡ್‌ಗಳಲ್ಲಿ ಸ್ಪರ್ಧಿಸಲಿದ್ದು, ಕನಿಷ್ಠ 20 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿ ಬಹುಮತ ಪಡೆಯಲಿದೆ ಎಂದರು.

ನಗರದ ಜನತೆಗೆ ಶುದ್ಧ ಕುಡಿಯುವ ನೀರು, ಒಳಚರಂಡಿ ಯೋಜನೆ, ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಔಟರ್‌ರಿಂಗ್‌ ರೋಡ್‌, ನಗರಸಭೆ ಕಚೇರಿಗೆ ಸುಸಜ್ಜಿತ ಆಡಳಿತ ಕಚೇರಿ, ಸರ್‌ಎಂವಿ ಕ್ರೀಡಾಂಗಣಕ್ಕೆ ಕಾಯಕಲ್ಪ, ಮಹಿಳಾ ಸಬಲೀಕರಣಕ್ಕೆ ಒತ್ತು, ನಗರದ ಪ್ರಮುಖ ವೃತ್ತಗಳ ಆಧುನೀಕರಣ, ಸುಸಜ್ಜಿತ ಫ‌ುಟ್‌ಪಾತ್‌ಗಳ ನಿರ್ಮಾಣ, ಹೈಟೆಕ್‌ ತರಕಾರಿ ಹಾಗೂ ಮಾಂಸ ಮಾರುಕಟ್ಟೆ, ಮೆಡಿಕಲ್‌ ಕಾಲೇಜು, ಉದ್ಯೋಗ ಸೃಷ್ಟಿ, ನಗರದ ಸೌಂದರ್ಯ ಹೆಚ್ಚಿಸಲು ಉದ್ಯಾನವನ, ಬೀದಿ ದೀಪಗಳ ನಿರ್ವಹಣೆಗೆ ಒತ್ತು ಕೊಡಲಾಗುವುದು ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಲಾಗಿದೆ.

ಬಹಳಷ್ಟು ಜನ ಓದಿಕೊಳ್ಳದಿದ್ದರೂ ಏನೆಲ್ಲಾ ಆಗಿದ್ದಾರೆ, ಓದಿಗೂ ಸಚಿವ ಸ್ಥಾನ ನಿರ್ವಹಿಸುವ ವಿಚಾರದಲ್ಲಿ ತಾಳೇ ಹಾಕಲಿಕ್ಕೆ ಆಗುವುದಿಲ್ಲ. ವಕೀಲರು ವಕೀಲ ವೃತ್ತಿ ಮಾತ್ರ ಮಾಡುತಾರೆಯೋ, ಬೇರೆ ಏನು ಮಾಡಲಿಕ್ಕೆ ಆಗುವುದಿಲ್ಲವಾ? ಒಬ್ಬ ವ್ಯಕ್ತಿಗೆ ಆಡಳಿತ ನಡೆಸುವಷ್ಟು ಜ್ಞಾನ, ದೂರದೃಷ್ಟಿ ಇದ್ದರೆ ಉತ್ತಮ ಯೋಗ್ಯ ಮಂತ್ರಿಯಾಗಲು ಸಾಧ್ಯ.
-ಡಾ.ಕೆ.ಸುಧಾಕರ್‌, ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next