ಹೊಸದಿಲ್ಲಿ: ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು “ಅಪರಾಧದ ತಪ್ಪೊಪ್ಪಿಗೆ” ಎಂದು ಬಿಜೆಪಿ ಭಾನುವಾರ ಪ್ರತಿಕ್ರಿಯಿಸಿದೆ. ಆಮ್ ಆದ್ಮಿ ಪಕ್ಷದೊಳಗಿನ ಆಂತರಿಕ ಕಲಹದಿಂದಾಗಿ ಕೇಜ್ರಿವಾಲ್ ಹುದ್ದೆ ತ್ಯಜಿಸಲು ಮುಂದಾಗಿದ್ದಾರೆಯೇ ಎಂದು ಪ್ರಶ್ನಿಸಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ”ಕೇಜ್ರಿವಾಲ್ ಅವರ ನಡೆ ನಾಟಕ. ಅವರು ಭಾವನಾತ್ಮಕ ಕಾರ್ಡ್ ಆಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಅವರನ್ನು ಕಚೇರಿಗೆ ಪ್ರವೇಶಿಸಿ ಯಾವುದೇ ಫೈಲ್‌ಗೆ ಸಹಿ ಹಾಕುವುದಕ್ಕೆ ನಿರ್ಬಂಧಿಸಿರುವುದನ್ನು ಉಲ್ಲೇಖಿಸಿದರು.
“ ಕೇಜ್ರಿವಾಲ್ ರಾಜೀನಾಮೆ ಅವರ ಅಪರಾಧದ ತಪ್ಪೊಪ್ಪಿಗೆ. ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಾಧ್ಯವಾಗದಂತಹ ಆರೋಪಗಳನ್ನು ಅವರು ಒಪ್ಪಿಕೊಂಡಿದ್ದಾರೆ. ಅವರನ್ನು ಬಂಧಿಸಿದಾಗಲೇ ಏಕೆ ರಾಜೀನಾಮೆ ನೀಡಲಿಲ್ಲ ಎಂದು ಪ್ರಶ್ನಿಸಿದರು.
“ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ ಅವರು ರಾಜೀನಾಮೆ ನೀಡಿ ದೆಹಲಿಯಲ್ಲಿ ಶೀಘ್ರ ಚುನಾವಣೆಗೆ ಒತ್ತಾಯಿಸಿರುವುದು ಅನುಮಾನವನ್ನು ಹುಟ್ಟುಹಾಕುತ್ತಿದೆ. ಅವರ ಪಕ್ಷದೊಳಗೆ ಸಂಘರ್ಷ ನಡೆಯುತ್ತಿದ್ದು, ಅದನ್ನು ನಿಭಾಯಿಸುವುದು ಕಷ್ಟ ಎಂದು ಅವರು ಭಾವಿಸಿದ್ದಾರೆಯೇ?. ಕೇಜ್ರಿವಾಲ್ ಅವರ ಪಾತ್ರಕ್ಕೆ ವಿರುದ್ಧವಾಗಿ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ” ಎಂದರು.
“ಆಮ್ ಆದ್ಮಿ ಪಕ್ಷವು ದೆಹಲಿ ವಿಧಾನಸಭೆಯಲ್ಲಿ ಭಾರಿ ಬಹುಮತವನ್ನು ಹೊಂದಿದೆ. ಅವರು ಚುನಾವಣೆ ನಡೆಸಬೇಕೆಂದು ಬಯಸಿದರೆ, ಅವರು ಸಂಪುಟ ಸಭೆಯನ್ನು ಕರೆದು ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಬಹುದು ಎಂದರು.
ದೆಹಲಿಯ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ಪ್ರತಿಕ್ರಿಯಿಸಿ ”ಕೇಜ್ರಿವಾಲ್ ಅವರ ಪರ ಜನರು ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ತಮ್ಮ ತೀರ್ಪನ್ನು ನೀಡಿದ್ದು, ರಾಷ್ಟ್ರ ರಾಜಧಾನಿಯ ಏಳು ಸ್ಥಾನಗಳಲ್ಲಿ ಎಎಪಿ ಗೆಲ್ಲಲು ಸಾಧ್ಯವಾಗದಿರುವಾಗ ಅವರು ಜನರ ನ್ಯಾಯಾಲಯಕ್ಕೆ ಹೋಗುವ ಬಗ್ಗೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು.