Advertisement

ಅನುಭವ ಮಂಟಪಕ್ಕೆ ಮಠಾಧೀಶರ ಕಹಳೆ

01:18 PM Jun 13, 2022 | Team Udayavani |

ಬಸವಕಲ್ಯಾಣ: ವಿಶ್ವಗುರು ಬಸವಣ್ಣನವರು ಸಮಾನತೆಗಾಗಿ 12ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ, ಮೂಲ ಅನುಭವ ಮಂಟಪದ ಸತ್ಯ ಶೋಧನೆಗಾಗಿ ಹೋರಾಟ ಕೈಗೊಂಡಿದ್ದೇವೆ. ಅದರಲ್ಲಿ ಯಶಸ್ವಿ ಆಗುತ್ತೇವೆ ಎಂಬ ನಂಬಿಕೆ ನಮಗಿದೆ ಎಂದು ತಡೋಳಾ ರಾಜೇಶ್ವರ ಶಿವಾಚಾರ್ಯರು ಹೇಳಿದರು.

Advertisement

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ನಗರದ ಬಿಕೆಡಿಬಿ ಸಭಾಭವನದಲ್ಲಿ ಭಾನುವಾರ ನಡೆದ ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ ಸಮಾವೇಶದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಹೋರಾಟ ಬಗ್ಗೆ ಬಹಳ ಚರ್ಚೆಗಳಾಗಿವೆ. ಕಳೆದ 20 ದಿನಗಳಿಂದ ಪಂಚಾಚಾರ್ಯರು ಈ ಕಾರ್ಯಕ್ರಮ ಮಾಡುವ ಉದ್ದೇಶವಾದರೂ ಏನು ಎಂಬುದರ ಬಗ್ಗೆ ಚರ್ಚೆಯೂ ಆಗಿವೆ ಎಂದರು. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಕೊಟ್ಟಂತಹ ಅನುಭವ ಮಂಟಪದ ಬಗ್ಗೆ ಬಸವಕಲ್ಯಾಣದಲ್ಲಿ ಸಾಕಷ್ಟು ಆಧಾರಗಳಿವೆ. ಅಲ್ಲಿ ವಿಭೂತಿ, ಬಿಲ್ವಾರ್ಚನೆ, ಪ್ರಸಾದ ಕುರುಹುಗಳಿವೆ. ಹಿಂದೆ ವಾರದ್‌, ಬಿ.ಡಿ.ಜತ್ತಿ ಮತ್ತು ಲಿಗಾಡೆ ತಾಯಿ ಅವರು ಮೂಲ ಅನುಭವ ಮಂಟಪ ಸಂಶೋಧನೆಗಾಗಿ ಸಾಕಷ್ಟು ಪ್ರಯತ್ನಿಸಿದ್ದರೂ ಶಕ್ತಿ ಸಾಕಾಗಲಿಲ್ಲ. ಆದರೆ ಈಗ ಕಾಲ ಕೂಡಿ ಬಂದಿದೆ ಎಂದರು.

ಪೀರ್‌ ಪಾಶಾ ಅವರ ಬಗ್ಗೆ ಅಧ್ಯಯನ ಮಾಡಿದ್ದೇನೆ. ಮಹಾರಾಷ್ಟ್ರದಲ್ಲಿ ಅವರ ಸಮಾ ಧಿಯೂ ಇದೆ. ಅಲ್ಲಿ ಹಿಂದೂ-ಮುಸ್ಲಿಂ ಎನ್ನದೆ ಪ್ರತಿಯೊಬ್ಬರೂ ಹೋಗುತ್ತಾರೆ. ಹೀಗಾಗಿ ಮೂಲ ಅನುಭವ ಮಂಟಪದ ಬಗ್ಗೆ ಯಾರಾದರೂ ಧ್ವನಿ ಎತ್ತಬೇಕಾಗಿತ್ತು. ಅದನ್ನು ನಾನು ಮಾಡಿದ್ದೇನೆ. ಆದರೆ ಕೆಲವರು ಕಾರ್ಯಕ್ರಮ ರದ್ದಾಗಿದೆ. ಕಾರ್ಯಕ್ರಮಕ್ಕೆ ಬರಬೇಡಿ ಎಂದು ಜನರಿಗೆ ತಿಳಿಸಿದ್ದಾರೆ.

ಆದರೂ ಇಷ್ಟೊಂದು ಸಂಖ್ಯೆಯಲ್ಲಿ ಶ್ರೀಗಳು, ಬಸವಾಭಿಮಾನಿಗಳು ಭಾಗವಹಿಸಿರುವುದು ನೋಡಿದರೆ ಮೂಲ ಅನುಭವ ಮಂಟಪ ಸಿಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ತಿಳಿಸಿದರು.

Advertisement

ಶಾಸಕ ಶರಣು ಸಲಗರ್‌ ಮಾತನಾಡಿ, ಮೂಲ ಅನುಭವ ಮಂಟಪ ಗೊತ್ತಾಗಬೇಕೆಂದು ಬಸವಾಭಿಮಾನಿಗಳ ಮತ್ತು ವಿವಿಧ ಮಠಾಧೀಶರ ಇಲ್ಲಿ ಸೇರಿದ್ದೇವೆ. ಅದರಂತೆ ನಗರದ ಪೀರ್‌ ಪಾಶಾ ಬಂಗ್ಲಾ ನೋಡಿದಾಗ ಅದೊಂದು ಹಿಂದೂ ದೇವಸ್ಥಾನ ಎಂಬ ಭಾವನೆ ಮೂಡುವುದು ಸಹಜ. ಹೀಗಾಗಿ ಅದನ್ನು ಶಾಂತಿ- ಕಾನೂನು ಸುವ್ಯವಸ್ಥೆ ಹಾಳು ಮಾಡದಂತೆ ಮೂಲ ಅನುಭವ ಮಂಟಪ ಪಡೆಯುತ್ತೇವೆ ಎಂಬ ಭರವಸೆಗಾಗಿ ಇಲ್ಲಿ ಸೇರಿದ್ದೇವೆ. ಅದು ವಿಳಂಬವಾದರೂ ಮೂಲ ಅನುಭವ ಮಂಟಪ ಪಡೆಯುತ್ತೇವೆ ಎಂಬ ನಂಬಿಕೆ ನಮಗಿದೆ ಎಂದರು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಮೂಲ ಅನುಭವ ಮಂಟಪದ ಹೋರಾಟ ವಿಳಂಬವಾಗಿದೆ. ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ ಬೆಂಬಲಿಸಿ ಸುಮಾರು 1500 ಮಠಾಧೀಶರು ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. ಹೀಗಾಗಿ ಸರ್ಕಾರ ಕೆಲವೇ ತಿಂಗಳಲ್ಲಿ ಮೂಲ ಅನುಭವ ಮಂಟಪ ವಶಕ್ಕೆ ಪಡೆಯಬೇಕು. ಇಲ್ಲದಿದ್ದರೆ ಅದನ್ನು ಯಾವ ರೀತಿ ಪಡೆಯಬೇಕು ಎಂಬುದರ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ ಎಂದರು.

ಹುಡಗಿ ಮಠದ ಶತಾಯುಷಿ ಶ್ರೀ ವಿರೂಪಾಕ್ಷ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿದರು. ಹಿರನಾಗಾಂವ್‌ ಶ್ರೀ ಜಯಶಾಂತಲಿಂಗ ಸ್ವಾಮೀಜಿ ಮಾತನಾಡಿದರು. ಸಾಯಂಗಾವ್‌, ಬೇಲೂರ, ಸರಗಡಿ, ಗಡಿಗೌಡಗಾಂವ್‌, ಚಾಂಬೋಳ, ಬಳ್ಳಾರಿ ಕಲ್ಳೂರ ಡೊಂಗರವಾಂಗ್‌, ಗವಿಮಠದ ಡಾ| ಘನಲಿಂಗ ರುದ್ರಮುನಿ ಶಿವಾಚಾರ್ಯರು, ಬಿಜೆಪಿ ಮುಖಂಡ ಪ್ರದೀಪ ವಾತಡೆ, ಸಾಗರ ದಂಡೋತಿ, ಗುರು ದೇಗಾಂವ್‌, ಮಹಾದೇವ ಪಾಟೀಲ್‌ ಇನ್ನಿತರರಿದ್ದರು.

ನಾಲ್ಕು ಹಕ್ಕೊತ್ತಾಯಗಳ ಮಂಡನೆ

ಬೀದರ: ಬಸವಕಲ್ಯಾಣದಲ್ಲಿ ನಡೆದ “ಮಠಾಧಿಧೀಶರ ನಡೆ-ಮೂಲ ಅನುಭವ ಮಂಟಪದ ಕಡೆ’ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವ ಪ್ರಮುಖ ನಾಲ್ಕು ಹಕ್ಕೋತ್ತಾಯಗಳನ್ನು ಮಂಡಿಸಲಾಯಿತು. ಬಸವಕಲ್ಯಾಣದಲ್ಲಿ ಶ್ರೀ ರಾಜೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ನಡೆದ ಚಿಂತನ ಮಂಥನ ಸಭೆಯಲ್ಲಿ ನಾಲ್ಕು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಪುರಾತತ್ವ ಇಲಾಖೆಯ ಮೂಲಕ ಪಿರಪಾಶಾ ದರ್ಗಾ ಸಂಶೋಧನೆ ಆಗಬೇಕು. ಬಸವಾದಿ ಶರಣರ ಬಗ್ಗೆ ಸಂಶೋಧನಾ ಕೇಂದ್ರ ತೆರೆಯಬೇಕು. ಅನುಭವ ಮಂಟಪದ ಕುರುಹು, ಶರಣರ ಕುರುಹು ಗುರುತಿಸಬೇಕು ಮತ್ತು ಸ್ಮಾರಕ ನಿರ್ಮಾಣಕ್ಕೆ 500 ಕೋಟಿ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next