Advertisement

ಸಾಹಿತ್ಯ ಸಮ್ಮೇಳನ ಮಾದರಿಯಾಗಿ ನಡೆಸಿ

04:36 PM Aug 07, 2022 | Team Udayavani |

ಹಾವೇರಿ: ದೇಶಕ್ಕೆ ಮಾದರಿಯಾಗಿ 86ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಿ. ಸರ್ಕಾರ ನಿಮ್ಮ ಜತೆಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ನಗರದ ವಾರ್ತಾಭವನದಆವರಣದಲ್ಲಿ ಶನಿವಾರ 86ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಪರ್ಕ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ಕಾರಣದಿಂದ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದವು. ಈಗ 86ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ 20 ಕೋಟಿ ಅನುದಾನ ಮಂಜೂರು ಮಾಡಿದೆ. ಕನ್ನಡ ನಾಡು-ನುಡಿ, ಸಂಸ್ಕೃತಿ ಕಳೆಗಟ್ಟುವ ರೀತಿ, 85ನೇ ಸಾಹಿತ್ಯ ಸಮ್ಮೇಳನ ಮೀರಿಸುವ ರೀತಿಯಲ್ಲಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಬೇಕು. ಸಾಹಿತಿಗಳು, ಕಲಾವಿದರು, ಬರಹಗಾರರು ಸೇರಿದಂತೆ ಎಲ್ಲರೂ ಒಗ್ಗಟ್ಟಿನಿಂದ ಸಮ್ಮೇಳನ ಯಶಸ್ಸಿಗೆ ಮುಂದಾಗಬೇಕು. ಕನ್ನಡದ ಗೌರವ, ವೈಚಾರಿಕತೆ ಹೆಚ್ಚಿಸುವ ಕೆಲಸವಾಗಬೇಕು ಎಂದು ಹೇಳಿದರು.

ಶಾಸಕ, ರಾಜ್ಯ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಆಯೋಗದ ಅಧ್ಯಕ್ಷ ನೆಹರು ಓಲೇಕಾರ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆಗೆ ಕನ್ನಡ ಸಾಹಿತ್ಯ ಪರಿಷತ್‌ ಕೇಂದ್ರ ಕಚೇರಿಗೆ ಭೇಟಿ ಮಾಡಿದ ಫಲವಾಗಿ ಈ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಿದೆ. ಜಿಲ್ಲೆಯ ಬಹುದಿನಗಳ ಕನಸು ನನಸಾಗುತ್ತಿದೆ ಎಂದರು.

ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಟ್ಟಡಕ್ಕೆ ಈಗಾಗಲೇ ನಾಲ್ಕು ಗುಂಟೆ ಜಾಗೆ ಖರೀದಿಸಲಾಗಿದೆ. ಬರುವ ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿ, ಸಮ್ಮೇಳನಕ್ಕೆ ಅನುದಾನ ಕೊರತೆ ಇಲ್ಲ. ಸಮ್ಮೇಳನಕ್ಕೆ ಜಿಲ್ಲಾಡಳಿತ ಸಿದ್ಧವಾಗಿದೆ. ಸರ್ಕಾರ ಈಗಾಗಲೇ 20 ಕೋಟಿ ರೂ. ಬಜೆಟ್‌ನಲ್ಲಿ ಘೋಷಣೆ ಮಾಡಿದೆ. ಸರ್ಕಾರಿ ನೌಕರರು ಒಂದು ದಿನದ ವೇತನ ನೀಡಲು ಒಪ್ಪಿದ್ದಾರೆ. ಸಮ್ಮೇಳನ ಜಾತ್ರೆ-ಊಟದ ಜಾತ್ರೆಯಾಗಬಾರದು. ಅರ್ಥಪೂರ್ಣ ಸಮ್ಮೇಳನವಾಗಬೇಕು ಎಂಬುದು ಮುಖ್ಯಮಂತ್ರಿಗಳ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಮಾದರಿ ಸಮ್ಮೇಳನಕ್ಕೆ ಆದ್ಯತೆ ನೀಡಲಾಗಿದೆ. ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ಸಮ್ಮೇಳನಕ್ಕೆ ಸಿದ್ಧವಾಗಿದ್ದಾರೆ ಎಂದರು.

Advertisement

ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು.ಲೈಟ್‌ ವ್ಯವಸ್ಥೆ ಹಾಗೂ ರಸ್ತೆ ಸೇರಿದಂತೆ ನಗರದ ಅಭಿವೃದ್ಧಿಯ ಎಂಟು ಕೋಟಿ ರೂ.ಟೆಂಡರ್‌ ಕರೆಯಲಾಗಿದೆ. ಒಟ್ಟಾರೆ ಸಮ್ಮೇಳನ ಯಶಸ್ಸಿಗೆ ನಗರಸಭೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ|ಮಹೇಶ ಜೋಶಿ ಮಾತನಾಡಿ, ಈಗಾಗಲೇ ಸಮ್ಮೇಳನದ ಕಾರ್ಯಚಟುವಟಿಕೆಗಳನ್ನು ಆರಂಭಿಸಲಾಗಿದೆ. ನವೆಂಬರ್‌ 11, 12 ಹಾಗೂ 13ರಂದು ಮೂರು ದಿನಗಳ ಕಾಲ ಸಮ್ಮೇಳನ ದಿನಾಂಕ ನಿಗಗೊಳಿಸಲಾಗಿದೆ. ಮುಖ್ಯಮಂತ್ರಿಗಳು ಶೀಘ್ರವೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದರು.

ಆಧುನಿಕ ತಂತ್ರಜ್ಞಾನ ಬಳಸಿ ಧೂಳು ಮುಕ್ತ ಹಾಗೂ ಪ್ಲಾಸ್ಟಿಕ್ಟ್ ಮುಕ್ತ ಸಮ್ಮೇಳನ ನಡೆಸಲಾಗುವುದು. ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛ ಶೌಚಾಲಯಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಗುಣಾತ್ಮಕ ಚರ್ಚಾಗೋಷ್ಠಿಗಳನ್ನು ಆಯೋಜಿಸಲಾಗುವುದು. ಈ ಸಮ್ಮೇಳನದಲ್ಲಿ 86 ಪುಸ್ತಕ ಹೊರತರಲಾಗುವುದು. ಈ ಪೈಕಿ 37 ಪುಸ್ತಕಗಳು ಹಾವೇರಿಗೆ ಸಂಬಂಧಪಟ್ಟದ್ದಾಗಿವೆ. ಈ ಪುಸ್ತಕಗಳನ್ನು80 ಪುಟಗಳಿಗೆ ಸೀಮಿತಗೊಳಿಸಲಾಗಿದೆ. ಉಳಿದಂತೆ ಬೇಡಿಕೆ ಇರುವ ಪುಸ್ತಕಗಳ ಮರು ಮುದ್ರಣ ಮಾಡಲಾಗುತ್ತಿದೆ. ಕನ್ನಡ ಪುಸ್ತಕಗಳಿಗೆ ಆದ್ಯತೆ ಹಿನ್ನೆಲೆಯಲ್ಲಿ ಬೇರೆ ಪುಸ್ತಕಗಳ ಮಾರಾಟಕ್ಕೆ ಅವಕಾಶವಿರಲ್ಲ. ಸ್ಥಳೀಯ ಕಲಾವಿದರಿಗೆ ಉತ್ಸವದಲ್ಲಿ ಆದ್ಯತೆ ನೀಡಲಾಗುವುದು ಎಂದರು.

ಜಿಲ್ಲಾ ವಾರ್ತಾಧಿಕಾರಿ ಡಾ|ಬಿ.ಆರ್‌.ರಂಗನಾಥ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್‌.ವಿ.ಚಿನ್ನಿಕಟ್ಟಿ, ಗೌರವ ಕೋಶಾಧ್ಯಕ್ಷ ಎಸ್‌.ಎನ್‌. ದೊಡ್ಡಗೌಡರ, ಕಾರ್ಯದರ್ಶಿ ಬಿ.ಪಿ.ಶಿಡೇನೂರ ಇತರರು ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಸ್ವಾಗತಿಸಿದರು. ತಾಲೂಕಾಧ್ಯಕ್ಷ ವೈ.ಬಿ.ಆಲದಕಟ್ಟಿ ವಂದಿಸಿದರು. ‌ನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ ಶೀಘ್ರವೇ ಆ್ಯಪ್‌ ಆರಂಭಿಸಲಾಗುವುದು. ರಾಜ್ಯಾದ್ಯಂತ ಸಮ್ಮೇಳನ ರಥ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನಕ್ಕೆ ಕನ್ನಡದ ಮೊಟ್ಟ ಮೊದಲ ನಿಘಂಟು ರಚಿಸಿದ ಕಿಟೆಲ್‌ ಅವರ ಮೊಮ್ಮಗಳು ಹಾಗೂ ಕೆನಡಾ ಸಂಸತ್ತಿನಲ್ಲಿ ಕನ್ನಡ ಮಾತನಾಡಿದ ಸದಸ್ಯ ಚಂದ್ರು ಆರ್ಯ, ವಿದೇಶದಲ್ಲಿ ನೆಲೆಸಿರುವ ಸಾಧಕಕನ್ನಡಿಗರನ್ನು ಆಹ್ವಾನಿಸಲಾಗಿದೆ. ಈಸಮ್ಮೇಳನವನ್ನು ಐತಿಹಾಸಿಕ ಸಮ್ಮೇಳನವಾಗಿಸುವ ಕನಸು ಹೊಂದಲಾಗಿದೆ. –ಡಾ|ಮಹೇಶ ಜೋಶಿ,ಕಸಾಪ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next