ಧಾರವಾಡ: ಆಶಾ ಕಾರ್ಯಕರ್ತೆಯರ ಮೂಲಕ ಜಿಲ್ಲೆಯಲ್ಲಿ ಸದ್ಯ ಇರುವ 45 ಕಂಟೇನ್ಮೆಂಟ್ ಪ್ರದೇಶಗಳಲ್ಲಿರುವ ಜನರ ಆರೋಗ್ಯದ ಸಮೀಕ್ಷೆ ನಡೆಸಿ ಅಗತ್ಯವಿರುವ ಜನರನ್ನು ಕೋವಿಡ್ ತಪಾಸಣೆಗೊಳಪಡಿಸಬೇಕೆಂದು ಡಿಸಿ ದೀಪಾ ಚೋಳನ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸೇವಾಸಿಂಧು ಮೂಲಕ ಹೆಸರು ನೋಂದಾಯಿಸಿಕೊಂಡು ಜಿಲ್ಲೆಗೆ ಬಂದ ಜನರ ಬಗ್ಗೆ ನಿಗಾ ವಹಿಸಬೇಕು. ಹೋಂ ಕ್ವಾರಂಟೈನ್ ನಲ್ಲಿರುವ ಜನರ ಮನೆ ಬಾಗಿಲಿಗೆ ಕಡ್ಡಾಯವಾಗಿ ಪೋಸ್ಟರ್ ಅಂಟಿಸಿ ನೆರೆಹೊರೆಯವರಿಗೆ ಮಾಹಿತಿ ನೀಡುವ ಕಾರ್ಯದಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು. ಪೋಸ್ಟರುಗಳನ್ನು ಕಿತ್ತು ಹಾಕಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು. ದುರ್ಬಲ ಆರೋಗ್ಯದವರನ್ನು ಗುರುತಿಸಿ ಮಾರ್ಗದರ್ಶಿ ಸೂತ್ರಗಳ ಪ್ರಕಾರ ತಪಾಸಣೆಗೆ ಒಳಪಡಿಸುವ ಕಾರ್ಯವನ್ನು ತೀವ್ರ ಎಚ್ಚರಿಕೆಯಿಂದ ಮುಂದು ವರಿಸಬೇಕೆಂದು ಸೂಚಿಸಿದರು.
ಜಿಲ್ಲೆಯಲ್ಲಿರುವ ಎಲ್ಲಾ ಕಂಟೇನ್ಮೆಂಟ್ ಪ್ರದೇಶಗಳ ವ್ಯಾಪ್ತಿಯ ನಿವಾಸಿಗಳಲ್ಲಿ ಅಗತ್ಯ ಸೇವೆಗಳಲ್ಲಿರುವ ಜನರನ್ನು ಹೊರತುಪಡಿಸಿ ಉಳಿದ ನಾಗರಿಕರು ತಮ್ಮ ವ್ಯಾಪ್ತಿಯಿಂದ ಹೊರ ಬರದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಕಾರ್ಯವನ್ನು ಘಟನಾ ಕಮಾಂಡರ್ ಗಳು ಇನ್ನಷ್ಟು ಚುರುಕುಗೊಳಿಸಬೇಕು. ಆ ಪ್ರದೇಶದ ನಿವಾಸಿಗಳಿಗೆ ಹಾಲು, ತರಕಾರಿ, ಔಷಧಿಯಂತಹ ಜೀವನಾವಶ್ಯಕ ವಸ್ತುಗಳ ಪೂರೈಕೆ ಸಮರ್ಪಕವಾಗಿರಬೇಕು. ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸುವ ಕಾರ್ಯ ಮತ್ತಷ್ಟು ತ್ವರಿತಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಂಟೇನ್ಮೆಂಟ್ ಪ್ರದೇಶಗಳಿಗೆ ನೇಮಿಸಲಾಗಿರುವ ಘಟನಾ ಕಮಾಂಡರ್‌ಗಳ ಜವಾಬ್ದಾರಿ ಮಹತ್ವದ್ದಾಗಿದೆ. ನಿಗದಿತ ಪ್ರದೇಶ ವ್ಯಾಪ್ತಿಯಲ್ಲಿ ವಾಸಿಸುವ ಖಾಸಗಿ ಮತ್ತು ಸರ್ಕಾರಿ ವೈದ್ಯರು, ನಸಿಂìಗ್, ಅರೆ ವೈದ್ಯಕೀಯ ಸಿಬ್ಬಂದಿ, ಬ್ಯಾಂಕುಗಳು, ಸರ್ಕಾರಿ ನೌಕರರು, ಎಸ್‌ಎಸ್‌ಎಲ್‌ಸಿ ಮತ್ತು ಇತರ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ಹಾಗೂ ತುರ್ತು ಆರೋಗ್ಯ ಚಿಕಿತ್ಸೆ ಹೊಂದಿರುವ ಜನರನ್ನು ಹೊರತುಪಡಿಸಿ ಉಳಿದ ನಾಗರಿಕರು ಅನಗತ್ಯ ಸಂಚರಿಸುವುದನ್ನು ಸಂಪೂರ್ಣ ನಿರ್ಬಂಧಿ ಸಬೇಕು. ಕಂಟೇನ್ಮೆಂಟ್ ಪ್ರದೇಶಗಳಿಗೆ ಜೀವನಾವಶ್ಯಕ ವಸ್ತುಗಳ ಪೂರೈಕೆಯ ಬಗ್ಗೆ ಆದ್ಯತೆ ನೀಡಬೇಕೆಂದು ಸೂಚಿಸಿದರು.
ಹೋಂ ಕ್ವಾರಂಟೈನ್ ಉಲ್ಲಂಘನೆ ನಿಯಂತ್ರಿಸಿ: ಈಗಾಗಲೇ ಹೋಂ ಕ್ವಾರಂಟೈನ್‌ನಲ್ಲಿರುವ ಜನರು ನಿಯಮ ಉಲ್ಲಂಘಿಸಿ ಹೊರ ಬರುತ್ತಿರುವ ಪ್ರಕರಣಗಳ ಮಾಹಿತಿ ಪ್ರತಿದಿನ ತಂತ್ರಾಂಶದ ಮೂಲಕ ದೊರೆಯುತ್ತಿದೆ. ಮೊದಲ ಬಾರಿ ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ಎಚ್ಚರಿಕೆ, ಎರಡನೇ ಬಾರಿ ಉಲ್ಲಂಘಿಸುವ ವ್ಯಕ್ತಿಗೆ ಸಾಂಸ್ಥಿಕ ಕ್ವಾರಂಟೈನ್ ,ಮೂರನೇ ಬಾರಿ ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸಬೇಕು. ಹುಬ್ಬಳ್ಳಿ ಧಾರವಾಡ ನಗರ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಹೋಂ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳ ತಾಲೂಕುವಾರು ಮಾಹಿತಿ ಆಧರಿಸಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದರು.
ಮಾಹಿತಿ ನೀಡದ ಆಸ್ಪತ್ರೆಗಳಿಗೆ ಭೇಟಿ: ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರ(ಐಎಲ್‌ಐ) ಪ್ರಕರಣಗಳ ಕುರಿತು ಪ್ರತಿದಿನ ಕೆಪಿಎಂಇ ಪೋರ್ಟಲ್‌ನಲ್ಲಿ ಮಾಹಿತಿ ಒದಗಿಸದ ಆಸ್ಪತ್ರೆಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಖುದ್ದಾಗಿ ಪ್ರತಿದಿನ ಭೇಟಿ ನೀಡಿ ಕ್ರಮ ಜರುಗಿಸಬೇಕು ಎಂದು ಜಿಪಂ ಸಿಇಒ ಡಾ|ಬಿ.ಸಿ.ಸತೀಶ ಸೂಚನೆ ನೀಡಿದರು.
ಪಾಲಿಕೆ ಆಯುಕ್ತ ಡಾ|ಸುರೇಶ ಇಟ್ನಾಳ, ಅಪರ ಡಿಸಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ|ಯಶವಂತ ಮದೀನಕರ್ ಇದ್ದರು.