ಜೈಪುರ್: ಒಂದು ಶ್ವಾನ ಸಾವನ್ನಪ್ಪಿದರೂ ಕೂಡಾ ದೆಹಲಿ ನಾಯಕರು ಸಂತಾಪದ ಸಂದೇಶ ಕಳುಹಿಸುತ್ತಾರೆ. ಆದರೆ ವಿವಾದಿತ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ 600 ಮಂದಿ ರೈತರು ಸಾವನ್ನಪ್ಪಿದರು ಕೂಡಾ ತಲೆಕೆಡಿಸಿಕೊಂಡಿಲ್ಲ ಎಂದು ಮೇಘಾಲಯದ ಗವರ್ನರ್ ಸತ್ಯ ಪಾಲ್ ಮಲಿಕ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಭಾರತ ತಂಡದಲ್ಲಿ ವೇಗದ ಬೌಲಿಂಗ್ ಮಾಡುವ ಬ್ಯಾಟ್ಸಮನ್ ಗಳ ಅಗತ್ಯವಿದೆ: ಲಕ್ಷ್ಮಣ್
ಜೈಪುರದ ಬಿರ್ಲಾ ಆಡಿಟೋರಿಯಂನಲ್ಲಿ ತೇಜಾ ಫೌಂಡೇಶನ್ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಗವರ್ನರ್, ಈವರೆಗೂ ಇಂತಹ ದೊಡ್ಡ ಮಟ್ಟದ ಚಳವಳಿ ನಡೆದಿಲ್ಲ. ಈ ಪ್ರತಿಭಟನೆಯಲ್ಲಿ ಈವರೆಗೆ 600 ಮಂದಿ ರೈತರು ಹುತಾತ್ಮರಾಗಿದ್ದಾರೆ. ಒಂದು ಪ್ರಾಣಿ ಸತ್ತರೂ ದೆಹಲಿ ನಾಯಕರು ಸಂತಾಪ ಸೂಚಿಸುತ್ತಾರೆ. ಆದರೆ 600 ಮಂದಿ ರೈತರು ಹುತಾತ್ಮರಾದರೂ ದೆಹಲಿಯಿಂದ ಯಾವುದೇ ಸಂದೇಶ ಹೊರಬಿದ್ದಿಲ್ಲ ಎಂದು ಟೀಕಿಸಿದರು.
ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಆರೇಳು ಮಂದಿ ಸಾವನ್ನಪ್ಪಿದ್ದು, ಈ ಘಟನೆಗೆ ದೆಹಲಿ ನಾಯಕರು ಸಂತಾಪದ ಸಂದೇಶ ಕಳುಹಿಸಿದ್ದರು ಎಂದು ಗವರ್ನರ್ ಮಲಿಕ್ ಹೇಳಿದರು. ದೇಶದ ಸೇನೆಯಲ್ಲಿ ರೈತರ ಮಕ್ಕಳು ಸೇವೆ ಸಲ್ಲಿಸುತ್ತಿರುವುದರಿಂದ ಈ ಆಂದೋಲನವು ಅದರ ಮೇಲೂ ಪ್ರಭಾವ ಬೀರಲಿದೆ ಎಂದು ಗವರ್ನರ್ ಮಲಿಕ್ ಅಭಿಪ್ರಾಯವ್ಯಕ್ತಪಡಿಸಿದರು.
ಯಾವುದೇ ಸಾವು-ನೋವು ಸಂಭವಿಸಿದರೂ ಕೂಡಾ ಯಾವ ಸಚಿವರು ಉತ್ತರಪ್ರದೇಶದ ಹಳ್ಳಿಗಳಿಗೆ ಭೇಟಿ ನೀಡುತ್ತಿಲ್ಲ ಎಂದು ಮೇಘಾಲಯದ ಗವರ್ನರ್ ಮಲಿಕ್ ಅಸಮಾಧಾನ ವ್ಯಕ್ತಪಡಿಸಿದರು.