Advertisement

ದೇಗುಲಗಳಲ್ಲಿ ಷರತ್ತು ಬದ್ಧ ಸೇವೆ

01:54 PM Sep 05, 2020 | Suhan S |

ಚಾಮರಾಜನಗರ: ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಧಾರ್ಮಿಕ ದತ್ತಿ ಇಲಾಖೆ ದೇವಾಲಯಗಳಲ್ಲಿ ಸೇವೆ ಆರಂಭಿಸಲು ಕೆಲ ಷರತ್ತಿಗೊಳಪಟ್ಟು ಅನುಮತಿ ನೀಡಿ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಆದೇಶ ಹೊರಡಿಸಿದ್ದಾರೆ.

Advertisement

ಕೋವಿಡ್‌ ಹಿನ್ನೆಲೆ ಧಾರ್ಮಿಕ ದತ್ತಿ ಇಲಾಖೆ ದೇವಾಲಯಗಳಲ್ಲಿ ಸಾರ್ವಜನಿಕರ ಆರೋಗ್ಯ ಹಿತ ದೃಷ್ಟಿಯಿಂದ ದಿನನಿತ್ಯ ಸಂಪ್ರದಾಯದಂತೆ ನಡೆಯುವ ಪೂಜಾ ವಿಧಿ ವಿಧಾನ, ಕೈಂಕರ್ಯನಡೆಸಲು ಅನುಮತಿ ನೀಡಲಾಗಿದೆ.  ಎಲ್ಲಾ ಸೇವೆಗಳು, ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮ, ಉತ್ಸವ, ಪ್ರಸಾದ ದಾಸೋಹ, ತೀರ್ಥ ವಿತರಣೆ, ದೇವರ ದರ್ಶನ, ಇತರೆ ಜನಸಂದಣಿ ಸೇರುವ ಕಾರ್ಯಕ್ರಮ, ದೇವಾಲಯಗಳಲ್ಲಿನ ವಸತಿ ಗೃಹ, ಅತಿಥಿಗೃಹಗಳನ್ನು ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ಹಂಚಿಕೆ ಮಾಡುವುದನ್ನು ರದ್ದುಪಡಿಸಲಾಗಿದ್ದ ಆದೇಶ ಹಿಂಪಡೆಯಲಾಗಿದೆ.

ದೇವಾಲಯಗಳಲ್ಲಿ ಸೇವೆ ಆರಂಭಿಸಲು ಷರತ್ತು ಬದ್ಧ ಅನುಮತಿ ನೀಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ದೇವಾಲಯಗಳ ಸಂಪ್ರದಾಯಗಳಿಗೆ ಅನುಗುಣವಾಗಿ ಈ ಹಿಂದೆ ನಡೆಸುತ್ತಿದ್ದ ಸೇವೆಗಳನ್ನು ಭಕ್ತರ ಸಂಖ್ಯೆ, ಸ್ಥಳಾವಕಾಶದ ಅಭ್ಯತೆ ಆಧಾರದ ಮೇಲೆ ನಡೆಸ ಬಹುದಾದ ಸೇವೆಗಳ ಸಂಖ್ಯೆಯನ್ನು ಆಯಾ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ, ಆಡಳಿತಾಧಿಕಾರಿ ಮತ್ತು ಅನುವಂಶಿಕ ಮೊಕ್ತೇಸರು ನಿಗದಿ ಪಡಿಸಿಕೊಂಡು ಕೊರೊನಾ ಹರಡದಂತೆ ಹಾಲಿ ಇರುವ ಮಾರ್ಗಸೂಚಿಗಳಿಗೆ ಒಳಪಟ್ಟು ಭಕ್ತಾದಿಗಳು ಸೇವೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು.

ಜಾತ್ರಾ ಮಹೋತ್ಸವ, ಬ್ರಹ್ಮ ರಥೋತ್ಸವ, ಪವಿತ್ರೋತ್ಸವ ಮುಂತಾದ ವಿಶೇಷ ಉತ್ಸವ ನಡೆಸುವುದನ್ನು ತಾತ್ಕಾಲಿಕವಾಗಿ ಮುಂದೂಡುವುದು. ಸದರಿ ಉತ್ಸವ ನಿಲ್ಲಿಸಲು ಸಂಪ್ರದಾಯವಿಲ್ಲದ ದೇವಾಲಯಗಳಲ್ಲಿ ಜಾತ್ರಾ ಉತ್ಸವ, ಬ್ರಹ್ಮ ರಥೋತ್ಸವ, ಮುಂತಾದ ವಿಶೇಷ ಉತ್ಸವಗಳನ್ನು ದೇವಾಲಯದ ಆಗಮಿಕರು, ತಂತ್ರಿಗಳು ಅರ್ಚಕರು, ಸಿಬ್ಬಂದಿಯವರಿಗೆ ಸಾಂಕೇತಿಕವಾಗಿ ಹೋಮಾವದಿ ನಡೆಸಿ ಕೇವಲ ಉತ್ಸವವನ್ನು ದೇವಾಲಯ ಆವರಣ, ಒಳಪ್ರಕಾರ  ದೊಳಗೆ ಉತ್ಸವ ದಿನಗಳಲ್ಲಿ ಭಕ್ತಾದಿಗಳು, ಸಾರ್ವಜನಿಕರ ಜನಸಂದಣಿ ಇಲ್ಲದಂತೆ ನಡೆಸಿ ಪೂರ್ಣ ಗೊಳಿಸಬೇಕು. ದೇವಾಲಯಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ಯಾನಿಟೈಸರ್‌ ವ್ಯವಸ್ಥೆ ಮಾಡಿರುವ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಉಪವಿಭಾಗಾಧಿಕಾರಿಗಳು ಪರಿಶೀಲಿಸಿ ಖಾತರಿ ಪಡಿಸಿಕೊಳ್ಳಬೇಕು. ವಿಧಿಸಲಾಗಿರುವ ಷರತ್ತುಗಳ ಉಲ್ಲಂಘನೆ ಕಂಡುಬಂದಲ್ಲಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next